All About Mudhol

ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳ ಬಹುಭಾಗ ಮರಾಠ ಆಡಳಿತಗಾರರ ಕೈಯಲ್ಲಿತ್ತು. ವಿಜಯಪುರದಲ್ಲಿ ಆದಿಲ್‌ಶಾಹಿ ಸಂಸ್ಥಾನ ಮತ್ತು ದಕ್ಖಣದಲ್ಲಿ ಮೊಘಲರ ಆಡಳಿತ ಕೊನೆಗೊಂಡ ಬಳಿಕ ಮರಾಠರು ನೆಲಯೂರಿರ ಬೇಕು. ಶಿವಾಜಿ ಕಾಲದಲ್ಲಿ ಮತ್ತು ಅನಂತರದಲ್ಲಿ ಇವರು ಪ್ರಬಲರಾಗಿರಬೇಕು.

ಈ ಸಣ್ಣ ರಾಜರ ಪ್ರಾಂತಗಳು ಕೆಲವೇ ಗ್ರಾಮಗಳನ್ನು ಒಳಗೊಂಡಿದ್ದವು. ಪ್ರತಿಯೊಂದು ಪ್ರಾಂತದಲ್ಲಿಯೂ ಮರಾಠ ಆಡಳಿತಗಾರರು ಆಡಳಿತ ನಡೆಸುತ್ತಿದ್ದರು. ಇವರನ್ನು ಸರ್ದಾರ್‌ ಅಥವಾ ಪೇಶ್ವೆಗಳೆನ್ನುತ್ತಿದ್ದರು. ಇವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಅಂಕಾಲಿ, ರಾಯಭಾಗ, ಕಾಗವಾಡದಲ್ಲಿ, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆಡಳಿತ ನಡೆಸುತ್ತಿದ್ದರು. ರಾಮದುರ್ಗ, ಜಮಖಂಡಿಯಲ್ಲಿಯೂ ಸಣ್ಣ ಪ್ರಾಂತಗಳಿದ್ದವು. 

ಈ ಮರಾಠ ಆಡಳಿತಗಾರರು ಅವರ ರಾಜವಾಡಗಳನ್ನು (ಅರಮನೆ) ನಿರ್ಮಿಸಿಕೊಂಡಿದ್ದರು. ಇದರಲ್ಲಿ ದರ್ಬಾರ್‌ ಹಾಲ್‌ ವಿಶಾಲವಾಗಿರುತ್ತಿದ್ದವು. ಮುಧೋಳದಲ್ಲಿ ಮರಾಠ ಬುಡಕಟ್ಟಿನ ಘೋರ್ಪಡೆಯವರು ಸುಮಾರು 200 ವರ್ಷಗಳ ಹಿಂದೆ ಅರಮನೆ ಕಟ್ಟಿದ್ದರು. ಈ ಪ್ರಾಂತದ ಆಡಳಿತಕ್ಕೆ ಒಳಪಟ್ಟು ಕೆಲವು ಗ್ರಾಮಗಳಿದ್ದವು, ಇವೆಲ್ಲವೂ ಕೃಷಿ ಭೂಮಿಗಳಾಗಿದ್ದವು. ಅಕ್ಕಪಕ್ಕದ ಗ್ರಾಮಗಳೊಂದಿಗೆ ಸೌಹಾರ್ದ ಸಂಬಂಧವಿರಿಸಿಕೊಳ್ಳುತ್ತಿದ್ದ ಘೋರ್ಪಡೆಯವರು ರಾಯಲ್‌ ಕೋರ್ಟ್‌ನ ಪ್ರಮುಖ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಮುಧೋಳದ ರಾಜರ ಬಹುತೇಕ ಅಧಿಕಾರಗಳು ಕೈತಪ್ಪಿದವು. ಮುಧೋಳದ ರಾಜರ ಗುಣನಡತೆಯಿಂದಾಗಿ ಜನರೇ ಸ್ವಯಂಪ್ರೇರಿತರಾಗಿ ತಮ್ಮ ಆಡಳಿತಗಾರರಾಗಿ ಘೋರ್ಪಡೆಯವರನ್ನು ಒಪ್ಪಿಕೊಂಡಿದ್ದರು. ಇದರಿಂದಾಗಿ ಬ್ರಿಟಿಷರು ಮುಧೋಳದ ರಾಜರಿಗೆ ಆಡಳಿತವನ್ನು ಕೊಟ್ಟಿದ್ದರು. 
ಕಾಲಕ್ರಮೇಣ ಅರಮನೆ ಶಿಥಿಲಾವಸ್ಥೆಗೆ ಬಂದಾಗ ಪಕ್ಕದಲ್ಲಿ ಇನ್ನೊಂದು ಅರಮನೆಯನ್ನು ಕಟ್ಟಿಕೊಂಡರು. ಹಳೆಯ ಅರಮನೆ ಕಟ್ಟಡ  ಪಾಳುಬಿತ್ತು. ಅಕ್ಕಪಕ್ಕದ ವರು ಒಂದೊಂದೇ ಭಾಗವನ್ನು ಅತಿಕ್ರಮಿಸಿಕೊಂಡ ಪರಿಣಾಮ ದರ್ಬಾರ್‌ ಸಭಾಂಗಣ ಮಾತ್ರ ಉಳಿದಿತ್ತು. 
ಮುಧೋಳ  ರಾಜ ಮನೆತನದವರು ಜಮ ಖಂಡಿಯ ಗುಜರಾತಿ ವ್ಯಾಪಾರಿ ಓಸ್ವಾಲ್‌ ಕುಟುಂಬದವರಿಗೆ ಅಳಿದುಳಿದ ದರ್ಬಾರ್‌ ಹಾಲ್‌ ಸಹಿತ ಎಲ್ಲ ಭೂಮಿಗಳನ್ನು ಕೊಟ್ಟು ಪುಣೆಗೆ ಹೋದರು. ಹಸ್ತಶಿಲ್ಪ ಟ್ರಸ್ಟ್‌ ಓಸ್ವಾಲ್‌ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಮುಧೋಳ ಅರಮನೆಯ ದರ್ಬಾರ್‌ ಸಭಾಂಗಣವನ್ನು ಹೊಸದಿಲ್ಲಿಯ ನಾರ್ವೆ ರಾಯಭಾರ ಕಚೇರಿಯ ಸಹಕಾರದಿಂದ ಮಣಿಪಾಲಕ್ಕೆ ತಂದು ಪುನಃ ಸ್ಥಾಪಿಸಿತು. 

ಹಿಂದೂ ರಾಜರ ಕಟ್ಟಡಗಳಲ್ಲಿ ಮೊಘಲರ ಕಟ್ಟಡದ ಲಕ್ಷಣಗಳು ಕಾಣಸಿಗುತ್ತವೆೆ. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಇಂತಹ ಕಟ್ಟಡಗಳಿಗೆ ಪಾಶ್ಚಾತ್ಯ ಸ್ವರೂಪ ವಿನ್ಯಾಸಗಳನ್ನು ನೀಡಿದ್ದೂ ಇದೆ. ವಿಶಾಲವಾದ ಪ್ರವೇಶದ್ವಾರ, ಮರದ ಕೆತ್ತನೆಗಳು, ಕಿಂಡಿಗಳಲ್ಲಿ ಆಕರ್ಷಕ ಕೆತ್ತನೆಗಳಿವೆ. ರಾಜಸ್ಥಾನದಲ್ಲಿ ಸಭೆ ನಡೆಯುವಾಗ ರಾಜರು ಕೂರುತ್ತಿದ್ದ ಆಸನಗಳು, ತೂಗುದೀಪಗಳು, ಚಿತ್ರಕಲಾಕೃತಿಗಳು, ಟ್ರೋಫಿಗಳು, ಶಸ್ತ್ರಾಸ್ತ್ರಗಳನ್ನು ನೋಡಬಹುದು.

ಕವಿರಾಜ ರನ್ನ , ಮುಧೋಳ ನಾಯಿಗೆ ಪ್ರಸಿದ್ಧಿ

ಪ್ರಸಿದ್ಧ ಕವಿ ರನ್ನ ಮುಧೋಳದಲ್ಲಿ ಜನಿಸಿದವ. ಮುಧೋಳ ನಾಯಿ ತಳಿಯನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ಮುಧೋಳ ರಾಜಮನೆತನದವರಿಗೆ ಇದೆ. ಆಗ ಬೇಟೆನಾಯಿಯಾಗಿ ಬಳಸುತ್ತಿದ್ದರು. 2003-04ರ ವೇಳೆ  ಓಸ್ವಾಲ್‌ ಕುಟುಂಬದವರೊಂದಿಗೆ ಎರಡು ಮೂರು ಬಾರಿ ಮಾತುಕತೆ ನಡೆಸಿ ಹಸ್ತಶಿಲ್ಪ ಟ್ರಸ್ಟ್‌ ಕಾರ್ಯದರ್ಶಿ ವಿಜಯನಾಥ ಶೆಣೈ ಕಟ್ಟಡವನ್ನು ಮಣಿಪಾಲಕ್ಕೆ ಸ್ಥಳಾಂತರಿಸಿದರು. ಕಟ್ಟಡವನ್ನು ಪುನಃ ನಿರ್ಮಿಸುವಾಗ ರಾಜಮನೆತನದ ಮೇನಕರಾಜೆ ಘೋರ್ಪಡೆ ಮತ್ತು ಗಂಡ ವಿಜಯರಾಜೆ ಅರಸ್‌ ಭೂಮಿ ಪೂಜೆ ನಡೆಸಿದ್ದರು. ಉದ್ಘಾಟನೆ ವೇಳೆ ಮೇನಕರಾಜೆ ಮತ್ತು ಅವರ ತಾಯಿ ಇಂದಿರಾ ರಾಜೆ ಘೋರ್ಪಡೆ ಆಗಮಿಸಿದ್ದರು. ಸುಮಾರು 15 ಕುಶಲಕರ್ಮಿಗಳು ಸುಮಾರು ಹತ್ತು ತಿಂಗಳು ಶ್ರಮ ಪಟ್ಟು ಪುನಾರಚಿಸಿದರು.

ಕವಿ ಚಕ್ರವರ್ತಿ ರನ್ನ

ಅತ್ಯಂತ ಕೆಳಮಟ್ಟದಿಂದ ಬಂದ ಕವಿಯೊಬ್ಬ ತನ್ನ ಕುಲ ಕಸುಬನ್ನು ತಿರಸ್ಕರಿಸಿ ಸಾಹಿತ್ಯದ ಕಡೆ ಒಲವು ತೋರಿಸಿ ಕನ್ನಡದ ಖ್ಯಾತ ರಾಜಮನೆತನಗಳಾದ  ಬಾದಾಮಿಯ ಚಾಲುಕ್ಯ , ಮಾನ್ಯ ಖೇಟದ ಗಂಗರು ಮತ್ತು ಕಲ್ಯಾಣಿ ಚಾಲುಕ್ಯರ ಆಡಳಿತದ ಸಮಯದಲ್ಲಿ ಹಲವು ಮಹಾನ್ ಕೃತಿಗಳನ್ನು ರಚಿಸಿ ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚತುರ್ಮುಖ, ಉಭಯಕವಿ ಎಂಬ ಬಿರುದುಗಳಿಂದ ಎಲ್ಲರಿಂದ ಮಾನ್ಯತೆ ಪಡೆಯುತ್ತಾನೆ.

ಅವನಾರು ನಿಮಗೆ ಗೊತ್ತೇ.

ಮಹಾನ್ ಕವಿ ಮತ್ತೆ ಯಾರು ಅಲ್ಲ ಸಾಹಸ ಭೀಮ ವಿಜಯದ ಕರ್ತೃ  ‘ ರನ್ನ’ 

ಚಾಲುಕ್ಯ ಚಕ್ರವರ್ತಿ  ತೈಲಪ ರನ್ನನಿಗೆ ‘ ಕವಿ ಚಕ್ರವರ್ತಿ ‘ ಎಂಬ ಬಿರುದನ್ನೂ ಕೊಟ್ಟನಷ್ಟೆ. ಈ ಕವಿ ಚಕ್ರವರ್ತಿ ಪದವಿ ತನಗೆ ಹೇಗೆ ಒಪ್ಪುತ್ತದೆ ಎಂಬುದನ್ನು ಅಜಿತ ಪುರಾಣದಲ್ಲಿ ಹೀಗೆ ವರ್ಣಿಸಿದ್ದಾನೆ.  

“ಬುದ್ಧಿಯೇ ಭಂಡಾರ ಪದವಿದ್ಯೇ ಕತ್ತಿನ ಹಾರ ಯಶಸ್ಸು ಬಿಳಿಯ ಛತ್ರಿ, ಸರಸ್ವತಿಯೇ ಮಹಾರಾಣಿ, ಪದ್ಯ ರಚನೆಯ ಶೈಲಿ ಭೆರಿನಾದ, ಪಾನ್ದಿತ್ಯವೇ ಸಿಂಹಾಸನ ಕಾವ್ಯದ ಅಲಂಕಾರವೇ ಬೀಸುವ ಚಾಮರ ” ಕವಿತಾ ಸಾಮ್ರಾಜ್ಯವನ್ನು ಹೊಂದಿರುವ ಮೇಲ್ಮೆಯಿಂದ ರನ್ನನಿಗೆ ಕವಿಚಕ್ರವರ್ತಿ ಎಂಬ ಹೆಸರು ಚೆನ್ನಾಗಿ ಒಪ್ಪಿದೆ.

ಕವಿ ರತ್ನತ್ರಯ ಎಂದು ಪಂಪ , ಪೊನ್ನ ಮತ್ತು ರನ್ನ ಮತ್ತು  ಕವಿಚಕ್ರವರ್ತಿ ಎಂದು ಜನ್ನ, ಪೊನ್ನ, ಮತ್ತು ರನ್ನ ಎಂದು ಪ್ರಸಿದ್ದರಾದವರು .  ಕವಿರತ್ನ ಮತ್ತು ಕವಿ ಚಕ್ರವರ್ತಿ ಎಂದು ಕನ್ನಡ ದಲ್ಲಿ ಪ್ರಸಿದ್ಧಿ ಯಾದವರು ಪೊನ್ನ ಮತ್ತು ರನ್ನ. ರನ್ನನು ತೈಲಪ  ಆಶ್ರಯದಲ್ಲಿ  ಸಾಹಸಭೀಮ ವಿಜಯ ಅಥವಾ ಗದಾಯುದ್ಧ  ಎಂಬ ಕಾವ್ಯ ವನ್ನು ಬರೆದನು.  ಇದು ತೈಲಪನ ಮೆಚ್ಚುಗೆಗೆ ಪಾತ್ರವಾಗಿ  ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು.

ಇಂದಿನ ಬಾಗಲಕೋಟೆ ಜಿಲ್ಲೆಯ  ಮುಧೋಳ ಗ್ರಾಮದಲ್ಲಿ  ಬಳೆಗಾರರ ಕುಲದಲ್ಲಿ  ಸೌಮ್ಯ ಸಂವತ್ಸರದಲ್ಲಿ ಜೈನ ಧರ್ಮದಕ್ಕೆ ಸೇರಿದ ರನ್ನನ ಜನನ.  ರನ್ನನು ತುಸು ಮುಂದಕ್ಕೆ ಬಂದುಚಾವುಂಡರಾಯನಿಂದ ಹೆಚ್ಚಿನ ಏಳಿಗೆ ಹೊಂದಿ ಮತ್ತು  ಚಕ್ರವರ್ತಿ ತೈಲಪ ನಿಂದ ಇನ್ನು ಅತಿಶಯವಾದ ಮೇಲ್ಮೆ ಪಡೆದನು. ಬಳೆಗಾರ ವೃತ್ತಿ ಬೇಡವೆನಿಸಿ, ಜೈನ ಧರ್ಮವನ್ನು ಅರಿಯುವ ಆಸೆಯಿಂದ ಚಾವುಂಡರಾಯನ ಆಶ್ರಯದಿಂದ ಸದ್ಗುರುಗಳ ಬಳಿ  ನೆಲೆಸಿ, ಭಾಷೆ ಸಾಹಿತ್ಯ ಗಳಲ್ಲಿ ಪಾಂಡಿತ್ಯವನ್ನು ಪಡೆದನು. ಚಾವುಂಡರಾಯನ ಸಹಾಯದಿಂದ ರನ್ನನು ಅನೇಕ ಸಾಮಂತರ ರಾಜ್ಯಸಭೆಗಳಿಗೆ ಹೋಗಿ ಕವಿ ಗೋಷ್ಠಿಗಳಲ್ಲಿ ಪಾಂಡಿತ್ಯವನ್ನು ಮೆರೆದನು.
ರನ್ನನು ಅಜಿತಪುರಾಣ , ಪರಶುರಾಮ ಚರಿತ ,  ಚಕ್ರೇಶ್ವರ ಚರಿತ ಮತ್ತು ಗದಾಯುದ್ಧ ವನ್ನು ರಚಿಸಿದನು. ರನ್ನನ ಗದಾಯುದ್ಧ ದಲ್ಲಿ  ತೈಳಪನನ್ನು ಭೀಮನಿಗೆ ಹೋಲಿಸಿ ಕೃತಿಯನ್ನು ರಚಿಸಿದ್ದಾನೆ.ದಾನ ಚಿಂತಾಮಣಿ ಅತ್ತಿಮಬ್ಬೆ ರನ್ನನ ಈ ಅಸಾಧಾರಣ ಪ್ರತಿಭೆಗೆ ಅತ್ತಿಮಬ್ಬೆ ಮೆಚ್ಚಿ ಅವನನ್ನು ಆದರಿಸಿ, ಆಶ್ರಯ ನೀಡುತ್ತಾಳೆ. ರನ್ನನೂ ಕೂಡ ಅವಳ  ವ್ಯಕ್ತಿತ್ವಕ್ಕೆ ಮನಸೋತು, ಅವಳ ಆದೇಶದಂತೆ ಅಜಿತ ತೀರ್ಥಕಂಕರ ಪುರಾಣ ಕಾವ್ಯವನ್ನು ಧಾರ್ಮಿಕವಾಗಿ ರಚಿಸಿದ್ದಾನೆ. ಅತ್ತಿಮಬ್ಬೆಯನ್ನು ಕವಿವರ ಕಾಮಧೇನು, ದಾನ ಚಿಂತಾಮಣಿ ಎಂದು ರನ್ನ ಹೊಗಳಿರುವುದು ಹೆಚ್ಚಿನ ಮಾತಲ್ಲ. 
ಗದಾಯುಧ್ಧದಲ್ಲಿ ರನ್ನನು ವೀರ, ರೌದ್ರ , ಕರುಣಾ , ಅದ್ಭುತ ರಸಗಳ ಪ್ರವಾಹದಲ್ಲಿ ತೇಲಿಸಿಕೊಂಡು ಹೋಗುತ್ತಾನೆ. ರಸಘಟ್ಟ ಎಂಬ ಮಾತು ಅಜೀತ ಪುರಾಣ ಕಿಂತ ಗದಾ ಯುದ್ಧಕ್ಕೆ ಸಲ್ಲುತ್ತದೆ.  ಒಮ್ಮೆ ಕಾವ್ಯವನ್ನು  ಓದಿದರೆ ಕಾವ್ಯವನ್ನು ಓದಿದಂತೆ ನಮಗೆ ಅನ್ನಿಸುವುದೇ ಇಲ್ಲ ನಾಟಕವನ್ನು ನೋಡಿದಂತೆ ಭಾಸವಾಗುತ್ತದೆ. ರನ್ನನು ಹೀಗೆ ವರ್ಣಿಸುತ್ತಾನೆ ಕುರುರಾಜ ದುರ್ಯೋಧನನ ಸೈನ್ಯವೆಂಬ ಹತ್ತಿಯ ರಾಶಿಗೆ ಪ್ರಳಯ ಕಾಲದ ಚಂಡಮಾರುತನೂ, ಕುರವ ಮದಗಜಗಳಿಗೆ ಸಿಂಹನೂ, ದುಶ್ಯಾಸನನ ರಕ್ತದಿಂದ ಕೆಂಪಾದ ಮುಖವುಲ್ಲವನೂ ದುರ್ಯೋಧನನ ತೊಡೆಯ ಪರ್ವತಗಳಿಗೆ ವಜ್ರಾಯುಧವೂ, ಕೌರವನ ರತ್ನ ಮಕುಟದ ಉನ್ನತ ಶಿಖರವನ್ನು ಸಂಗ್ರಾಮದಲ್ಲಿ ಪದಾಘಾತದಿಂದ ಪುಡಿಗಟ್ಟಿದ ಶೂರನೆಂದೂ ರಣಾಂಗಣದಲ್ಲಿ ಶ್ರೀ ರಾಮನ ಕೀರ್ತಿಯನ್ನ ಪಡೆದವನೆದೂ, ಬಲಾದಯ ಭೀಮ ಸೇನ ಎಂದು ವರಿನಿಸುತ್ತಾನೆ.
ಯುದ್ಧ ಭೂಮಿಯಲ್ಲಿ ಕೌರವನು ತನ್ನ ಕಡೆಯವರು ಮಡಿದು ಬಿದ್ದಿರುವುದನ್ನು ನೋಡುತ್ತಾ ಕರ್ಣನ ಬಳಿ  ಬಂದಾಗ ಅವನ ಧೈರ್ಯದ ಕಂತೆ ಒಡೆದು ದುಃಖದ ಕೊಡಿ ಹರಿಯುತ್ತದೆ  ಈ ಸನ್ನಿವೇಶದಲ್ಲಿ ಕೌರವನ ಬಾಯಿಂದ ರನ್ನ ಹೇಳಿಸಿರುವ ಪದಗಳು ಕರ್ಣ ದುರ್ಯೋಧನರ ಸ್ನೇಹದ ಚಿತ್ರವನ್ನು ನಮ್ಮ  ಕಣ್ಣ ಮುಂದೆ ತರುತ್ತದೆ. ” ನೀನು ಇದ್ದರೆ ಮಾತ್ರ ರಾಜ್ಯ, ಪಟ್ಟ, ಬಿಳಿಯ ಕೊಡೆ. ಎಲ್ಲ ನೀನಿಲ್ಲದ ಮೇಲೆ ಇವೆಲ್ಲ ಇದ್ದರೇನು ಇಲ್ಲದಿದ್ದರೇನು “ಎಂದು ಅಂಗರಾಜ್ಯದ ರಾಜನಾಗಿದ್ದ ಕರ್ಣನ ಶವವನ್ನು ನೋಡುತ್ತಾ ಹೇಳುತ್ತಾನೆ. ನೆಲಕ್ಕಾಗಿ ಅಲ್ಲ ಛಲಕ್ಕಾಗಿ ಯುದ್ಧ ಮಾಡಲು ನಿಶ್ಚಯಿಸುವನು. ಭೀಮ ದುರ್ಯೋಧನರಿಗೆ ಗದಾಯುದ್ಧ ನಡೆಯಿತು. ಕಥಾನಾಯಕನೇನೋ ಭೀಮನೇ ಆದರೆ ಈ ಕೃತಿ ರತ್ನದಲ್ಲಿ ನಮ್ಮ ಮೆಚ್ಚುಗೆಯನ್ನು ಮರುಕವನ್ನು ಸಲೆದುಕೊಂಡು ಮೆರೆಯುವನು ದುರ್ಯೋಧನ.

ಸಿಡಿದೆದ್ದರು ಹಲಗಲಿಯ ಬೇಡ ವೀರರು
ದಿನಗಳಲ್ಲಿ ಮುಧೋಳ ಒಂದು ಸಂಸ್ಥಾನವಾಗಿತ್ತು. ಆ ಪ್ರದೇಶದ ಬೇಡ ಶೂರರು ಆಂಗ್ಲರಿಗೆ ಶಸಾಸಗಳನ್ನು ಒಪ್ಪಿಸಲು ದೃಢವಾಗಿ ನಿರಾಕರಿಸಿ ತಮ್ಮ ಮಾತು, ಮರ್ಯಾದೆಗಳನ್ನು ಉಳಿಸಿಕೊಳ್ಳಲು ಕಲಿತನದಿಂದ ಹೋರಾಡಿ ಕೊನೆಗೆ ಗಲ್ಲುಗಂಬಗಳನ್ನೇರಿದ ಕಡುಗಲಿಗಳು.
ಬೇಡರು ಮಹಾಭಾರತದ ಕಾಲದಿಂದಲೂ ಶೌರ್ಯ, ಪರಾಕ್ರಮ, ಸ್ವಾಮಿನಿಷ್ಠೆ, ಪ್ರಾಮಾಣಿಕತೆಗಳಿಗೆ ಹೆಸರಾದ ಜನಾಂಗ. ಆದಿಕವಿ ವಾಲ್ಮೀಕಿ ಕೂಡ ಈ ಜನಾಂಗಕ್ಕೆ ಸೇರಿದವರು ಎನ್ನಲಾಗುತ್ತದೆ. ‘ಚಂದ್ರಹಾಸ’ ಕಥೆಯ ಕಥಾನಾಯಕ ಚಂದ್ರಹಾಸ ಬೇಡರವನು. 14ನೇ ಶತಮಾನದ ನಂಜುಂಡ ಕವಿ ಬರೆದಿರುವ ‘ಕಂಪಿಲ ರಾಮನಾಥ ಚರಿತ’ದಲ್ಲಿ ಕುಮಾರರಾಮನ ಸೈನ್ಯದಲ್ಲಿನ ಬೇಡ ಯೋಧರ ಮಹೋನ್ನತ ರಣಪರಾಕ್ರಮದ ಸ್ವಭಾವವನ್ನು ಅದ್ಭುತವಾಗಿ ವರ್ಣಿಸಿದ್ದಾನೆ. ಇತಿಹಾಸ ಪ್ರಸಿದ್ಧ ಚಾಂದ್‌ಬೀಬಿಗೆ ಅವಳ ಮುಸಲ್ಮಾನ ಗಣ್ಯರು ಬೆನ್ನಿಗೆ ಚಾಕು ಹಾಕತೊಡಗಿದಾಗ, ಕಿರಿಯ ವಯಸ್ಸಿನ ರಾಜಕುಮಾರ ಇಬ್ರಾಹಿಂನನ್ನು ರಕ್ಷಿಸಲು ಅವಳು ಬೇಡರನ್ನು ಬೇಡಿಕೊಂಡಾಗ ಅವರು ಆಕೆಗೆ ಬೆಂಬಲವಾಗಿ ನಿಂತರು. ಬೇಡರ ರಾಜರು ವಿಜಯನಗರ ಕಾಲದಲ್ಲಿ ಅಲ್ಲಿನ ಅರಸರಿಗೆ ಪಾಳೆಗಾರರಾಗಿ ನಡೆದುಕೊಂಡರು. ಅಂಥ ಬೇಡರು ಆಂಗ್ಲರೆದುರು ಸೆಟೆದು ನಿಂತು ಸೇರಿಗೆ ಸವ್ವಾಸೇರು ಎಂದು ಉತ್ತರಿಸಿ ಕೊನೆಗೆ ಆಂಗ್ಲರ ಕುಟಿಲತೆ ಮತ್ತು ಧೂರ್ತತೆಗಳಿಗೆ, ಸಂಖ್ಯಾಬಾಹುಳ್ಯಕ್ಕೆ ಬಾಗಿ ಬಲಿದಾನ ನೀಡಿದ ಘಟನೆ 1857ರ ಸಮರದ ಪುಟಗಳಲ್ಲಿ ರಕ್ತಾಕ್ಷರದಲ್ಲಿ ಬರೆಯಲ್ಪಟ್ಟವು.
ಆ ದಿನಗಳಲ್ಲಿ ಮುಧೋಳ ಒಂದು ಸಂಸ್ಥಾನವಾಗಿತ್ತು. ಆ ಪ್ರದೇಶದ ಬೇಡ ಶೂರರು ಆಂಗ್ಲರಿಗೆ ಶಸಾಸಗಳನ್ನು ಒಪ್ಪಿಸಲು ದೃಢವಾಗಿ ನಿರಾಕರಿಸಿ ತಮ್ಮ ಮಾತು, ಮರ್ಯಾದೆಗಳನ್ನು ಉಳಿಸಿಕೊಳ್ಳಲು ಕಲಿತನದಿಂದ ಹೋರಾಡಿ ಕೊನೆಗೆ ಗಲ್ಲುಗಂಬಗಳನ್ನೇರಿದ ಕಡುಗಲಿಗಳು. ಉತ್ತರ ಭಾರತದಲ್ಲಿ ಝಾನ್ಸಿರಾಣಿ, ನಾನಾ ಸಾಹೇಬ್, ತಾತ್ಯಾಟೋಪೆಯರ ನೇತೃತ್ವದಲ್ಲಿ ಸಿಪಾಯಿಗಳು, ಸಾರ್ವಜನಿಕರು ಬ್ರಿಟಿಷರ ವಿರುದ್ಧ ಭಯಂಕರ ಬಂಡಾಯವೆದ್ದಿದ್ದ ಸುದ್ದಿ ಈ ಬೇಡರಿಗೂ ತಿಳಿಯದಿರಲಿಲ್ಲ. ಬಾಬಾಜಿ ನಿಂಬಾಳ್ಕರ್ ಎಂಬ ಮರಾಠ ಯೋಧನು ಹಲಗಲಿಯ ಬೇಡರ ಗೌರವಾದರಗಳಿಗೆ ಪಾತ್ರನಾಗಿದ್ದವನು. ಈ ಬಾಬಾಜಿ ಅವರಿಗೆ ಉತ್ತರದಲ್ಲಿ ಹಾಗೂ ಕರ್ನಾಟಕದ ಕೆಲವೆಡೆಗಳಲ್ಲಿ ನಡೆಯುತ್ತಿದ್ದ ಆಂಗ್ಲ ಪ್ರಭುತ್ವದ ವಿರುದ್ಧದ ಹೋರಾಟದ ಸಮಾಚಾರಗಳನ್ನು ತಿಳಿಸಿ ಅವರ ಸ್ವಾಭಿಮಾನ, ಪರಾಕ್ರಮಗಳನ್ನು ಬಡಿದೆಬ್ಬಿಸಿದ್ದ. ಆಂಗ್ಲ ಆಕ್ರಮಣಕಾರರ ಕುರಿತು ಬೇಡರು ದ್ವೇಷ ಮಾಡಲಾರಂಭಿಸಿದ್ದರು. ಆಂಗ್ಲ ಪ್ರಭುತ್ವದ ದತ್ತು ನಿರಾಕರಣೆ ಕಾಯ್ದೆ ಹಾಗೂ ಇಮಾಂ ಕಮಿಷನ್ನಿನ ದೌರ್ಜನ್ಯಗಳಂತೆ ಇನ್ನೊಂದು ಕರಾಳ ಕಾನೂನು ನಿಶ್ಶಸೀಕರಣ ಕಾನೂನು.
1857ರ ಹೀರೋಗಳು
ನಿಶ್ಶಸೀಕರಣಕ್ಕೊಂದು ಸವಾಲು:1857ರ ನವೆಂಬರ್‌ನಲ್ಲಿ ಮುಂಬೈ ಸರ್ಕಾರ ಹೊಸದಾಗಿ ಘೋಷಿಸಿದ ನಿಶ್ಶಸೀಕರಣ ಕಾನೂನು ಕ್ಷಾತ್ರ ಸ್ವಭಾವದ ಜನರಲ್ಲಿ ಕ್ಷೋಭೆಯನ್ನುಂಟುಮಾಡಿತು.ಸರ್ಕಾರದಿಂದ ಲೈಸೆನ್ಸ್ ಪಡೆಯದೆ ಯಾರೂ ಶಸಾಸಗಳನ್ನು ಹೊಂದಬಾರದೆಂದೂ ಹೊಂದಿದ್ದರೆ ಅಂಥವರು ಶಿಕ್ಷಾರ್ಹರೆಂದೂ ಈ ಕಾನೂನಿನ ತಾತ್ಪರ್ಯ.ಬೇಡರು ಹೇಳಿಕೇಳಿ ಕ್ಷಾತ್ರತೇಜದ ಜನಾಂಗ. ಪುರಾಣೆತಿಹಾಸಗಳ ಕಾಲದಿಂದಲೂ ರಣಧಿರರು. ಶಸ ಜೊತೆಯಲ್ಲಿರದಿದ್ದರೆ ಬೇಡನಿಗೆ ಒಂದು ವ್ಯಕ್ತಿತ್ವವೇ ಇರಲಿಲ್ಲ. ಕೋದಂಡಧಾರಿ ರಾಮ, ಗದಾಧಾರಿ ಆಂಜನೇಯ, ಚಕ್ರಧಾರಿ ಶ್ರೀಕೃಷ್ಣ ಹೇಗೆ ಅವರವರ ಶಸಗಳೊಂದಿಗೆ ಶೋಭಿಸುವರೋ, ಹಾಗೆಯೇ ಬೇಡರು ಖಡ್ಗ, ಬಿಲ್ಲು ಬಾಣಗಳಿಂದ ಶೋಭಿತರು.ಅವರು ಶಸಗಳನ್ನುಬಿಟ್ಟುಕೊಡಬೇಕೆಂದರೆ ಪ್ರಾಣವನ್ನೇ ಬಿಟ್ಟಂತೆ ಭಾವಿಸುತ್ತಿದ್ದರು.ಸರ್ಕಾರ ನಾನಾ ರೀತಿಯಲ್ಲಿ ಬೇಡರನ್ನು ಓಲೈಸಲು ಪ್ರಯತ್ನಿಸಿತಾದರೂ ಇದಕ್ಕೆ ಸೊಪ್ಪು ಹಾಕಲಿಲ್ಲ. ಹಲಗಲಿ ಮುಧೋಳ ಸಂಸ್ಥಾನದ ಆಧಿಪತ್ಯದಲ್ಲಿದ್ದ ಹಳ್ಳಿ.ಆ ಪ್ರದೇಶದ ಆಡಳಿತಾಧಿಕಾರಿ ಕೃಷ್ಣರಾವ್.ಅವನ ಹುದ್ದೆಗೆ ಕಾರಭಾರಿ ಎಂದು ಹೆಸರು. ನಿಶ್ಶಸೀಕರಣ ಕಾಯ್ದೆಯನ್ನು ಜಾರಿಗೆ ತರಬೇಕಾದವನು ಈ ಕಾರಭಾರಿ ಕೃಷ್ಣರಾಯ. ಅವನು ಸಾಮ, ದಾನ, ಭೇದ, ದಂಡೋಪಾಯಗಳನ್ನು ಬಳಸಿ ಬಹಳಷ್ಟು ಬೇಡರ ಪಂಗಡಗಳನ್ನು ನಿಶ್ಶಸಗೊಳಿಸುವುದರಲ್ಲಿ ಯಶಸ್ವಿಯಾದ. ಆದರೆ, ಹಲಗಲಿಯ ಬೇಡರು ದೃಢವಾಗಿ ನಿಂತು ಶಸಗಳನ್ನು ನೀಡುವುದಿಲ್ಲವೆಂದು ಬಲವಾಗಿ ಪ್ರತಿಭಟಿಸಿದರು.ಈ ಕುರಿತು ಸಾಂಗ್ಲಿಯ ಬಿನಿವಾಲಾ ಎಂಬುವರು ಡೈರಿಯಲ್ಲಿ ದಾಖಲಿಸಿರುವ ಸಂಗತಿಗಳು ಸತ್ಯಾಂಶಗಳಿಂದ ಕೂಡಿರುವ ವಾಸ್ತವ ಸಮಕಾಲೀನ ನಿರೂಪಣೆಯಾಗಿದೆ. ಆ ಡೈರಿಯಲ್ಲಿ ದಾಖಲಿಸಿರುವ ವಿಷಯಗಳು ಆ ದಿನಗಳ ಕುರಿತು ಬೆಳಕು ಚೆಲ್ಲುತ್ತವೆ: ‘1857ರ ನವೆಂಬರ್‌ನಲ್ಲಿ ಬ್ರಿಟಿಷ್ ಸರ್ಕಾರ ಶಸಗಳನ್ನು ತಪ್ಪದೆ ತಮಗೆ ಒಪ್ಪಿಸಬೇಕೆಂದು ಆe ಜಾರಿ ಮಾಡಿತು.
ಸರ್ಕಾರದ ದೃಷ್ಟಿಯಲ್ಲಿ ಶಸಗಳನ್ನು ಹೊಂದಿರಲು ಯಾರು ಅರ್ಹರೋ ಅಂಥವರಿಗೆ ಅನುಮತಿಪತ್ರ ನೀಡಿ ಶಸಗಳನ್ನು ಹಿಂದಿರುಗಿಸಲಾಗುವುದೆಂದೂ ತಿಳಿಸಲಾಯಿತು. ಈ ಆe ಎಲ್ಲ ಕಡೆಗಳಿಗೂ ಹೋದಂತೆ ಮುಧೋಳಕ್ಕೂ ಬಂದಿತು. ಕಾರಭಾರಿ ಕೃಷ್ಣರಾಯನು ಆ ಆeಯನ್ನು ಮುಧೋಳ ಸಂಸ್ಥಾನದ ಎಲ್ಲೆಡೆ ಕಳುಹಿಸಿದನು. ಮುಧೋಳದ ಗಣ್ಯ ವ್ಯಕ್ತಿಗಳು ಶಸಗಳನ್ನು ಸರ್ಕಾರಕ್ಕೆ ಒಪ್ಪಿಸುವುದು ತಮ್ಮ ಘನತೆಗೆ ತಕ್ಕುದಲ್ಲವೆಂದು ನಿರ್ಧರಿಸಿ, ದೃಢ ಸಂಕಲ್ಪಚಿತ್ತರಾಗಿ ಸಂಘಟಿತರಾಗಿ ಮುಧೋಳದಿಂದ ಎರಡು ಮೈಲಿಗಳಾಚೆ ಮೂರು ದಿವಸಗಳ ಕಾಲ ನೆಲೆ ನಿಂತರು.ಈ ಸಮಾಚಾರವು ಬಾಯಿಂದ ಬಾಯಿಗೆ ಹೋಯಿತು.ಹಲಗಲಿಯ ಬೇಡರು ಮುಧೋಳದ ಗಣ್ಯರ ರೀತಿಯನ್ನೇ ಅನುಸರಿಸಬೇಕೆಂದು ನಿರ್ಧರಿಸಿದರು. ಕಾರಭಾರಿಯು ಬೇಡರ ನಾಯಕನನ್ನು ಕರೆಸಿ ಸರ್ಕಾರದ ಉದ್ದೇಶವನ್ನು ವಿವರಿಸಿ ಅವನ ಶಸಕ್ಕೆ ಅನುಮತಿ ಪತ್ರ ನೀಡಿ, ಶಸವನ್ನು ಹಿಂದಿರುಗಿಸಿದ. ತನ್ನ ಇತರ ಸೋದರರಿಗೂ ಸರಿಯಾಗಿ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದ. ಅವನು ತನ್ನದೇ ರೀತಿಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಜನಾಂಗಕ್ಕೆ ಅಪಮಾನ ಮಾಡುತ್ತಿದ್ದಾನೆಂದು ಇತರ ಬೇಡರು ಅವನನ್ನು ಬಹಿಷ್ಕರಿಸಿದರು.ಅವರು ಅಲ್ಲಿಗೇ ನಿಲ್ಲಿಸಲಿಲ್ಲ. ಅವರು ತಮ್ಮ ಪೈಕಿ ವಿವೇಕಿಗಳಾಗಿದ್ದ ನಾಲ್ಕೈದು ಮಂದಿಯನ್ನು ಆಯ್ಕೆ ಮಾಡಿ, ಅವರನ್ನು ಹಳ್ಳಿಯಿಂದ ಹಳ್ಳಿಗೆ ತಮ್ಮ ನಿಲುವು ಪ್ರಚಾರ ಮಾಡಲು ಕಳಿಸಿದರು.ಈ ಪ್ರಚಾರವು ಪರಿಣಾಮ ಬೀರಿತು.ಹಲಗಲಿಯಲ್ಲಿ ಐದುನೂರು ಮಂದಿ ಬೇಡರು ಹೊಸ ಆeಯನ್ನು ಪ್ರತಿಭಟಿಸಲು ಒಂದುಗೂಡಿದರು.ಈ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅರಿಯದೆ ಕಾರಭಾರಿ ದಿಗ್ಭ್ರಾಂತನಾದ. ಅವನು ರಾಜಕೀಯ ಪ್ರತಿನಿಧಿಯಾಗಿದ್ದ ಮಿಸ್ಟರ್ ಕರ್‌ಗೆ ಪತ್ರ ಬರೆದ. ಅವನು ಈ ಬಂಡಾಯವನ್ನು ಹತ್ತಿಕ್ಕಲು ಸೈನ್ಯದ ಪಡೆಗಳನ್ನು ಕಳುಹಿಸುವಂತೆ ಬಿಜಾಪುರಕ್ಕೆ ಪತ್ರ ಬರೆದ...’ (ಸಾಂಗ್ಲಿಯ ಬಿನಿವಾಲರ ಡೈರಿಯಲ್ಲಿ 1857 ಡಿಸೆಂಬರ್ 6 ಮತ್ತು 9ರಂದು ದಾಖಲಾಗಿರುವ ಕೆಲ ಅಂಶಗಳು).ಹೀಗೆ ಆ ದಿನಗಳ ಆಗುಹೋಗುಗಳನ್ನು ಅಂದಂದೇ ದಾಖಲಿಸಿದ ಸಾಂಗ್ಲಿಯ ಬಿನಿವಾಲಾರ ಡೈರಿಯ ಪುಟಗಳು ಐತಿಹಾಸಿಕ ಮಹತ್ವದ್ದಾಗಿವೆ.  ಕಾರಭಾರಿಯ ಕಾರಸ್ಥಾನ:ಬೇಡ ಸೋದರರ ಮನವೊಲಿಸಲು ಕಾರಭಾರಿ ಕಳುಹಿಸಿದ್ದವನು ವೀರ ಹನುಮ ನಾಯಕ ಎಂಬ ಬೇಡ. ಅವನು ಬೇಡರನ್ನು ಒಲಿಸಲು ಹೋಗಿದ್ದು 1857ರ ನವೆಂಬರ್ 11ರಂದು. ಅಂದಿನಿಂದ ದಿನಂಪ್ರತಿ ಒಬ್ಬೊಬ್ಬರಂತೆ ಹಲವು ರಾಯಭಾರಿಗಳನ್ನು ಅವನು ಕಳುಹಿಸಿದ. ಅವರ ಪೈಕಿ ಭೀಮರಾವ್ ಘೋರ್ಪಡೆ, ನಾರೋರಾಮಚಂದ್ರ ಪೋತ್ನೀಸ್ ಎಂಬುವರನ್ನು ಹಲಗಲಿಯ ಬೇಡರು ಗುಡಗ್ಯಾ ಜಮಾದಾರ ಮತ್ತು ಬಾಳಾ ಎಂಬಿಬ್ಬರ ನೇತೃತ್ವದಲ್ಲಿ ಕುದುರೆಯಿಂದ ಕೆಳಗಿಳಿಯಲು ಬಿಡದೆ ಹಿಂದಕ್ಕಟ್ಟಿದ್ದರು.ಹೀಗೆ ಕಾರಭಾರಿ ಕೃಷ್ಣರಾಯ ನಡೆಸಿದ ಪ್ರಯತ್ನಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಯಿತು. ಆಗ ಮುಧೋಳ ಸಂಸ್ಥಾನ ದಕ್ಷಿಣ ಮರಾಠಾ ಪ್ರದೇಶಕ್ಕೆ ಸೇರಿತ್ತು. ಅದರ ಪೊಲಿಟಿಕಲ್ ಏಜೆಂಟ್ ಲೆಫ್ಟಿನೆಂಟ್ ಕರ್ನಲ್ ಜೆ. ಬಿ. ಸೆಟನ್ ಕರ್ ಮುಧೋಳದ ಉಸ್ತುವಾರಿ ವಹಿಸಿದ್ದ. ದಕ್ಷಿಣ ಮರಾಠಾ ಅಶ್ವಪಡೆಗಳ ಸೇನಾಧಿಕಾರಿಯಾಗಿದ್ದವನು ಲೆಫ್ಟಿನೆಂಟ್ ಕರ್ನಲ್ ಮಾಲ್ಕಂ.ಹಲಗಲಿಯ ಬೇಡರು ಬ್ರಿಟಿಷ್ ಸರ್ಕಾರದ ಆeಯನ್ನು ಪ್ರತಿಭಟಿಸಿ ಟೊಂಕಕಟ್ಟಿ ನಿಂತಿದ್ದಾರೆಂಬ ಸಮಾಚಾರ ತಿಳಿದ ಕೂಡಲೇ ಅಶ್ವಪಡೆಗಳೊಂದಿಗೆ ಅಲ್ಲಿಗೆ ಹೋಗಲು ಮಾಲ್ಕಂ ಸೆಟೆನ್ ಕರ್‌ಗೆ ಆದೇಶ ಕಳುಹಿಸಿದ. ಅವನು ದಕ್ಷಿಣ ಮರಾಠಾ ಅಶ್ವದಳದ ಬಿಜಾಪುರ ವಿಭಾಗದ ಸೈನಿಕರೊಂದಿಗೆ ನವೆಂಬರ್ 29ರ ಸಂಜೆ 5 ಗಂಟೆಗೆ ಹಲಗಲಿಗೆ ಧಾವಿಸಿದ. ಪೂರ್ವ ದಿಕ್ಕಿನಿಂದ ಹಲಗಲಿ ಪ್ರವೇಶಿಸಿ ಹಠಾತ್ತನೆ ಗುಂಡು ಹಾರಿಸುತ್ತ ದಾಳಿ ಪ್ರಾರಂಭಿಸಿದ. ಅದು ರಾತ್ರಿಯ ಸಮಯ.ಹಲಗಲಿಯಲ್ಲಿ ಒಂದುಗೂಡಿದ್ದ ಬೇಡರಿಗೆ ಶರಣಾಗಲು ಆದೇಶಿಸಿದ. ಅದಕ್ಕೆ ಬಂದದ್ದು ಗುಂಡುಗಳ ಪ್ರತ್ಯುತ್ತರ.ಗಾಢಾಂಧಕಾರದಲ್ಲಿ ಗುಂಡಿನ ಕಾಳಗ ಮುಂದುವರಿಯಿತು.ಸರ್ಕಾರಿ ಸೇನೆಗಳಿಗೆ ಹಲಗಲಿಯೊಳಕ್ಕೆ ನುಗ್ಗಲು ಬೇಡ ವೀರರು ಕಿಂಚಿತ್ತೂ ಅವಕಾಶ ನೀಡಲಿಲ್ಲ. ಅಷ್ಟರಲ್ಲಿ ಹೆಚ್ಚಿನ ಸಹಾಯ ಬೇಡಿ ಸೆಟನ್ ಕರ್ ಮೇಲಿನವರಿಗೆ ಬೇಡಿಕೆ ಸಲ್ಲಿಸಿದ್ದ. ನವೆಂಬರ್ 30ರಂದು ಸೂರ್ಯೋದಯವಾಗುವ ವೇಳೆಗೆ ಲೆಫ್ಟಿನೆಂಟ್ ಕರ್ನಲ್ ಮಾಲ್ಕಂ, ಲೆಫ್ಟಿನೆಂಟ್ ಕರ್ನಲ್ ಅಡ್ಜುಟೆಂಟ್ ಲಾ ಟಾಕೆ, ಮ್ಯಾಜಿಸ್ಟ್ರೇಟ್ ಹ್ಯಾವ್‌ಲಾಕ್ ಮೊದಲಾದವರು ಸೈನ್ಯ ಸಮೇತ ಹಲಗಲಿಗೆ ಬಂದು ಸೇರಿದರು.
ಮಧ್ಯಾಹ್ನದ ವೇಳೆಗೆ ಬಾಗಲಕೋಟೆಯಿಂದ 28ನೇ ಪದಾತಿ ದಳವೂ ಅವರನ್ನು ಕೂಡಿಕೊಂಡಿತು. ಇಷ್ಟು ಬಲವಾದ ಪಡೆಗಳು ಸುತ್ತುವರಿದಿದ್ದರಿಂದ ಬೇಡ ವೀರರು ಹೆಚ್ಚು ಸೆಣಸಲಾಗದೆ ಅಲ್ಲಲ್ಲಿಯೇ ಅಡಗಿಕೊಂಡರು. ಅಲ್ಲಿಂದಲೇ ಮಾಲ್ಕಂನ ಸಂರಕ್ಷಕರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದು ಹುಚ್ಚನಾದ ಸೆಟಕ್ ಕರ್ ಇಡೀ ಹಲಗಲಿಗೇ ಬೆಂಕಿಹಚ್ಚಿರೆಂದು ತನ್ನ ಪಡೆಗಳಿಗೆ ಆಜ್ಞಾಪಿಸಿದ. ಇಂಗ್ಲಿಷ್ ಪಡೆಗಳು ಊರೊಳಗೆ ನುಗ್ಗಿ ಎಲ್ಲೆಲ್ಲೂ ಬೆಂಕಿಹಚ್ಚಿದವು. ಮನೆಗಳು, ಗುಡಿಸಿಲುಗಳು ಧಗಧಗ ಉರಿಯಲಾರಂಭಿಸಿದವು. ಬೇಡರ ಜನ ಕೆಲವರು ತಪ್ಪಿಸಿಕೊಂಡು ಹೋದರೆ ಇನ್ನು ಕೆಲವರು ದಿಕ್ಕುಗಾಣದೆ ಅಲ್ಲಲ್ಲಿ ಅಡಗಿಕೊಂಡರು. ಅಲ್ಲಿಯೇ ಹತ್ತಿಯ ಮೂಟೆಗಳನ್ನು ಪೇರಿಸಿದ್ದ ಚಿಕ್ಕ ಗೋದಾಮು ಒಂದಿತ್ತು. ಕೆಲವರು ಅದರಲ್ಲಿ ಬಚ್ಚಿಟ್ಟುಕೊಂಡಿದ್ದರು. ಅದಕ್ಕೂ ಅಗ್ನಿಸ್ಪರ್ಶ ಮಾಡಲಾಯಿತು. ಆ ಕುರಿತು ಸೆಟನ್ ಕರ್ ತನ್ನ ವರದಿಯಲ್ಲಿ ಹೀಗೆ ಹೇಳಿದ್ದಾನೆ: ‘ದಂಗೆಕೋರರ ಪೈಕಿ ಇಪ್ಪತ್ಮ್ಮೂರು ಮಂದಿ ನತದೃಷ್ಟರು ತಾವು ಅಡಗಿಕೊಂಡಿದ್ದ ಹತ್ತಿಯ ಗೋದಾಮುಗಳಲ್ಲಿ ಆಕಸ್ಮಿಕವಾಗಿ ಸುಟ್ಟುಹೋದರೆಂದು ವರದಿ ಮಾಡಲು ನನಗೆ ವಿಷಾದವಾಗುತ್ತಿದೆ’ (History  of  Freedom  Movement in  Bombay, vol-1) .) ಈ ಹೋರಾಟದಲ್ಲಿ ಬೇಡರ ಗುರು ಬಾಬಾಜಿ ನಿಂಬಾಳ್ಕರ್ ವೀರಾವೇಶದಿಂದ ಹೋರಾಡುತ್ತ ಬಲಿಯಾದ.
ಪ್ರಾಣ ಕೊಟ್ಟರೂ ಶಸ್ತ್ರ ಕೊಡಲಿಲ್ಲ:
ಮಾಲ್ಕಂ ನೀಡಿರುವ ಹೇಳಿಕೆಯಲ್ಲಿ ಹೀಗೆ ಅಗ್ನಿಗಾಹುತಿಯಾದವರು ನೂರಕ್ಕೂ ಹೆಚ್ಚು ಮಂದಿ ಎಂದು ತಿಳಿಸಿದ್ದಾನೆ. ಕೈಗೆ ಸಿಕ್ಕಿದ ಬೇಡ ಹೋರಾಟಗಾರರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. 25 ಮಂದಿ ಬೇಡ ವೀರರಿಗೆ ಗಲ್ಲಿನ ಶಿಕ್ಷೆ ವಿಧಿಸಲಾಯಿತು. ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಬೇಕೆಂದು ಬ್ರಿಟಿಷ್ ಅಧಿಕಾರಿಗಳು 1858ರ ಜನವರಿ 11ರಂದು 19 ಮಂದಿ ಬೇಡರನ್ನು ಮುಧೋಳದಲ್ಲಿ ಸಂತೆ ನೆರೆದಿದ್ದಾಗ ಸಾಲಾಗಿ ನಡೆಸಿಕೊಂಡು ಬಂದರು. ಕೈಗಳನ್ನು ಕಟ್ಟಿ ಹಾಕಿದ್ದರು. ಅಲ್ಲಿ ನೆಟ್ಟಿದ್ದ ಗಲ್ಲುಗಂಬಗಳ ಬಳಿಗೆ ಕರೆದೊಯ್ದರು. ಸಂತೆಗೆ ಬಂದ ಸಾವಿರಾರು ಮಂದಿ ನೋಡುತ್ತಿದ್ದಂತೆ ಒಬ್ಬೊಬ್ಬರನ್ನಾಗಿ ನೇಣು ಕುಣಿಕೆಗೆ ತೂಗು ಹಾಕಿದರು. ಒಬ್ಬೊಬ್ಬನೂ ವಿಲವಿಲ ಒದ್ದಾಡುತ್ತಾ, ಕಾಲುಗಳನ್ನು ಜಾಡಿಸುತ್ತಾ ಪ್ರಾಣ ತೊರೆಯುವ ದೃಶ್ಯವನ್ನು ಸಾವಿರಾರು ಜನ ಮೂಕಪ್ರೇಕ್ಷಕರಾಗಿ ನೋಡಿದರು.ಅವರು ಕಣ್ಣೀರ‍್ಗರೆಯುವುದನ್ನು ಬಿಟ್ಟು ಬೇರೇನೂ ಮಾಡಲಾರದವರಾಗಿದ್ದರು.ಇದಾದ ಮೂರು ದಿನಗಳ ಅನಂತರ ಜನವರಿ 14ರಂದು ಇನ್ನೂ ಆರು ಮಂದಿ ಬೇಡ ಹೋರಾಟಗಾರರನ್ನು ಎಳೆದುಕೊಂಡು ಹಲಗಲಿಗೆ ಬಂದು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಮಾಲ್ಕಂ 290 ಮಂದಿ ಬಂಧಿತ ಬೇಡರೊಡನೆ ಕಲಾದಗಿಗೆ ತೆರಳಿದ. ಬೇಡರ ಹೋರಾಟವನ್ನು ಸ್ವತಃ ಮಾಲ್ಕಂನೇ ‘ಶೌರ್ಯ ಪರಾಕ್ರಮಗಳಿಂದ ಅವರು ಹೋರಾಡಿದರು’ ಎಂದು ಶ್ಲಾಸಿದ್ದಾನೆ.ಒಂದು ಹಳ್ಳಿಯ ಜನಸಮೂಹ ಸಂಘಟನೆಗೊಂಡು ಬ್ರಿಟಿಷರೆದುರು ಸೆಟೆದು ನಿಂತ ಈ ಉದಾಹರಣೆ 1857ರ ಸಂಗ್ರಾಮದಲ್ಲಿ ಕರ್ನಾಟಕದ ಮಹತ್ತರ ಕೊಡುಗೆಯಾಗಿದೆ.
ಮುಧೋಳ ಸಂಸ್ಥಾನ:
ಉತ್ತರ ಕರ್ನಾಟಕದ ಪ್ರಮುಖ ರಾಜ ಮನೆತನಗಳಲ್ಲೊಂದಾದ ಘೋರ್ಪಡೆ ಅರಸು ಕುಟುಂಬ ಬಾಗಲಕೋಟ ಜಿಲ್ಲೆ ಮುಧೋಳ ಸಂಸ್ಥಾನವನ್ನಾಳಿ ಪ್ರಖ್ಯಾತಿ ಪಡೆದಿದೆ. ರಾಜಸ್ತಾನದಿಂದ ಬಂದ ಧೀರ ಸೈನಿಕರು ಆದಿಲ್‌ಶಾಹಿ ಸುಲ್ತಾನರಿಂದ ಉಂಬಳಿ ಪಡೆದಿದ್ದು ಘೋರ್ಪಡೆ ರಾಜ ಮನೆತನವಾಗಲು ಕಾರಣವಾಯಿತು.
ಫಿರೋಜ್ ಶಾನ ಸೈನ್ಯದಲ್ಲಿದ್ದ ಈ ಕುಟುಂಬಸ್ಥರು ಕ್ರಿ.ಶ.1400ರಿಂದ ಆಳ್ವಿಕೆ ನಡೆಸಿದರು ಎಂದು ಹೇಳಲಾಗುತ್ತದೆ. ಆದಿಲ್ ಶಾಹಿ ಸುಲ್ತಾನರಿಂದ ಮುಧೋಳವನ್ನು ಉಂಬಳಿ ಪಡೆದ ನಂತರ ಈ ಆಳ್ವಿಕೆ ಪ್ರಾರಂಭಗೊಂಡಿತು. ಅಂದಾಜು 1660ರಿಂದ ಪ್ರಾರಂಭಗೊಂಡ ಇವರ ಆಳ್ವಿಕೆ ಸಂಸ್ಥಾನಗಳ ವಿಲೀನ ನಡೆದಾಗ ಅಂತ್ಯಗೊಂಡಿತು. ಸದ್ಯ ರಾಜವಂಶಸ್ಥೆ ಮೇನಕಾರಾಜೆ ಘೋರ್ಪಡೆ (ಮೌರ್ಯ) ಈ ವಂಶದ ಕುಡಿ. ಇವರು ಪುಣೆಯಲ್ಲಿ ನೆಲೆಸಿದ್ದು ಆಗಾಗ ಮುಧೋಳಕ್ಕೆ ಭೇಟಿ ನೀಡಿ ಹೊಸ ಅರಮನೆ ಹಾಗೂ ಆಸ್ತಿಗಳ ಮೇಲ್ವಿಚಾರಣೆ ವಹಿಸುತ್ತಾರೆ.

ಸದಾ ಯುದ್ಧದಲ್ಲಿ ನಿರತವಾಗಿರುತ್ತಿದ್ದ ಈ ಕುಟುಂಬ ಮುಧೋಳ ಸಂಸ್ಥಾನದಲ್ಲಿ ಜನಪರ ಕಾರ್ಯಗಳನ್ನು ಕೈಗೊಂಡಿದ್ದನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ರಾಜಾ ಮಾಲೋಜಿರಾವ್ ಘೋರ್ಪಡೆ ಮುಧೋಳದ ವಿಶಿಷ್ಟ ನಾಯಿ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮುಧೋಳ ಜಾಗತಿಕವಾಗಿ ಪ್ರಖ್ಯಾತಿ ಪಡೆಯಲು ಕಾರಣರಾದರು. ಪರ್ಷಿಯನ್ ನಾಯಿ ತಳಿಗಳೊಂದಿಗೆ ದೇಸಿ ನಾಯಿ ತಳಿ ಸಂಕರಗೊಳಿಸುವುದರೊಂದಿಗೆ ‘ಮುಧೋಳ್ ಹೌಂಡ್’ ಎನ್ನುವ ವಿಭಿನ್ನ ನಾಯಿ ತಳಿ ಜನಿಸಿತು. ಬ್ರಿಟಿಷರೊಂದಿಗೆ ಈ ರಾಜ ಮನೆತನ ಉತ್ತಮ ಸಂಬಂಧ ಹೊಂದಿತ್ತು. ಮುಧೋಳ ನಾಯಿ ತಳಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ದೊರೆ 5ನೇ ಜಾರ್ಜ್ ಈ ತಳಿಗೆ ‘ಮುಧೋಳ್ ಹೌಂಡ್’ ಎಂದು ನಾಮಕರಣ ಮಾಡಿದ. ಸದ್ಯ ಮುಧೋಳದ ಆಸುಪಾಸಿನಲ್ಲಿ ಈ ತಳಿಯ ಸಾವಿರಾರು ನಾಯಿಗಳನ್ನು ಬೆಳೆಸಲಾಗುತ್ತಿದೆ. ಮುದ್ದಾಪುರದಲ್ಲಿ ಮುಧೋಳ ನಾಯಿ ತಳಿ ಸಂವರ್ಧನೆ ಕೇಂದ್ರವೂ ಉಂಟು.

‘ಕುಟುಂಬದ ವಂಶಸ್ಥರಿಗೆ ಮುಧೋಳ ನಾಯಿ ತಳಿಗಳ ಜತೆ ಕುದುರೆಗಳ ಬಗ್ಗೆಯೂ ಆಸಕ್ತಿಯಿತ್ತು. ನಾನಾ ಬಗೆಯ ಕುದುರೆಗಳು ಆಸ್ಥಾನದಲ್ಲಿದ್ದವು, ಜನರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೆರೆಗಳ ನಿರ್ಮಾಣ ಹಾಗೂ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ರಾಜವಂಶಸ್ಥ ಅರ್ಜುನಸಿಂಹ ಜಡೇಜಾ ಸ್ಮರಿಸುತ್ತಾರೆ. ಮಹಾರಾಜ ವೆಂಕಟರಾವ್ ಘೋರ್ಪಡೆ (1861-1899) ರಾಜ್ಯದ ಮಕ್ಕಳಿಗೆ ಉತ್ತಮ ಶಿಕ್ಷಣದ ಒದಗಿಸಬೇಕು ಎಂಬ ಉದ್ದೇಶದಿಂದ ಮರಾಠಿ ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿದ್ದು ಇತಿಹಾಸ. ಅಂದಹಾಗೆ ಮುಧೋಳ ಹೊರವಲಯದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ ಬೃಹತ್ ಕೆರೆ, ಅಂಬಾ ಭವಾನಿ, ವೆಂಕಟೇಶ್ವರ, ಮಹಾಲಿಂಗೇಶ್ವರ, ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಬೃಹತ್ ಮೈದಾನಗಳನ್ನು ಈಗಲೂ ಕಾಣಬಹುದು. 1924ರಲ್ಲಿ 7ನೇ ಕಿಂಗ್ ಜಾರ್ಜ್ ಹೆಸರಿನಲ್ಲಿ ಸ್ಥಾಪಿಸಿದ ಆಸ್ಪತ್ರೆ ಈಗ ಸರಕಾರದ ಅಧೀನದಲ್ಲಿದೆ. ಘೋರ್ಪಡೆ ಕುಟುಂಬದ ಹಳೆಯ ಅರಮನೆ ಕುಸಿದು ಬಿದ್ದಿದ್ದು ಬಾಗಿಲು ಮಾತ್ರ ಇತಿಹಾಸ ಸಾರುತ್ತ ನಿಂತಿದೆ. ಮುಧೋಳದ ಹೊರವಲಯದಲ್ಲಿ ಮಹಾರಾಜರು ಕಟ್ಟಿದ ಹೊಸ ಅರಮನೆಯಿದೆ. ಕೇವಲ 34 ಹಾಗೂ ಇನ್ನರ್ಧ ಹಳ್ಳಿಗಳನ್ನೊಳಗೊಂಡಿದ್ದರೂ ಈ ಮನೆತನದ ವೈಭವದ ಆಳ್ವಿಕೆ ಮಾತ್ರ ಯಾವ ದೊಡ್ಡ ರಾಜಮನೆತನಕ್ಕೂ ಇರಲಿಲ್ಲ ಎನ್ನುವುದಂತೂ ಸತ್ಯ.

ಸಾರವಜನಿಕ ಆಸ್ಪತ್ರೆ ಉದ್ಘಾಟಿಸುತ್ತಿರುವುದು


ಮಂತ್ರಿ ಮಂಡಲದೊಂದಿಗೆ ಮುಧೋಳ ರಾಜ
ದರ್ಬಾರ್ ಹಾಲ್, ಮುಧೋಳ