ಮಗುವಿಗೆ ಪೂರ್ತಿ ಟಿಕೆಟ್: ಬಡ್ಡಿ ಸಮೇತ ಹಣ ವಾಪಸ್‌ಗೆ KSRTC ಕಂಡಕ್ಟರ್‌ಗೆ ಆದೇಶ!


12 ವರ್ಷದೊಳಗಿನ ಬಾಲಕನಿಗೆ ಪೂರ್ಣ ಟಿಕೆಟ್ ಪಡೆದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗೆ ಹೆಚ್ಚುವರಿಯಾಗಿ ಪಡೆದ ಟಿಕೆಟ್‌ ಹಣವನ್ನು ಶೇ 9ರ ಬಡ್ಡಿಯೊಂದಿಗೆ ಎರಡು ತಿಂಗಳಲ್ಲಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಮುಧೋಳ ತಾಲ್ಲೂಕಿನ ಅಂತಾಪೂರ ಗ್ರಾಮದ ನಿವಾಸಿ ದೀಪಾ ಹಿರೇಮಠ ಅವರು ಪುತ್ರನೊಂದಿಗೆ ಕಳೆದ ವರ್ಷ ಜುಲೈ 1ರಂದು ಮುಧೋಳದಿಂದ ವಿಜಯಪುರಕ್ಕೆ ಹೊರಟಿದ್ದರು.

ಪುತ್ರನಿಗೆ 10 ವರ್ಷ 11 ತಿಂಗಳು ಆಗಿದ್ದು ಅರ್ಧ ಟಿಕೆಟ್‌ ನೀಡಿ' ಎಂದು ದೀಪಾ ಅವರಿಗೆ ಕಂಡಕ್ಟರ್‌ಗೆ ಕೇಳಿದರು. '12 ವರ್ಷ ಮೇಲ್ಪಟ್ಟಿದ್ದಾನೆ, ಪೂರ್ಣ ಟಿಕೆಟ್‌ ಪಡೆಯಬೇಕು' ಎಂದು ಕಂಡಕ್ಟರ್ ಸೂಚಿಸಿದರು. ಆಗ ಜನ್ಮ ದಾಖಲೆಯ ಆಧಾರ್ ಕಾರ್ಡ್ ತೋರಿಸಿದರೂ ಒಪ್ಪದ ಅವರು, 'ಬಸ್‌ನಿಂದ ಕೆಳಗೆ ಇಳಿಯಿರಿ' ಎಂದರು. ಆಗ ಅವರು ಪೂರ್ಣ ಟಿಕೆಟ್‌ ಪಡೆದೇ ಪ್ರಯಾಣಿಸಿದರು.

ನಂತರ ಈ ವಿಷಯವನ್ನು ಡಿಪೊ ವ್ಯವಸ್ಥಾಪಕರ ಗಮನಕ್ಕೆ ತಂದು, 'ಕಂಡಕ್ಟರ್ ವಿರುದ್ಧ ಕ್ರಮ ಕೈಗೊಂಡು, ಟಿಕೆಟ್‌ ಹಣ ವಾಪಸ್‌ ಕೊಡಬೇಕು' ಎಂದು ಕೋರಿದರು. ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ವಕೀಲರಿಂದ ನೋಟಿಸ್ ಕಳುಹಿಸಿದರೂ ಸ್ಪಂದಿಸದ ಕಾರಣ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಕೆಎಸ್‌ಆರ್‌ಟಿಸಿ ನಿಯಮಾವಳಿ ಉಲ್ಲಂಘಿಸಿ ಪೂರ್ಣ ಟಿಕೆಟ್‌ ಕೊಟ್ಟು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಮಾಡಿದ್ದು ಸಾಬೀತಾಗಿದೆ. ದೂರುದಾರರಿಂದ ಹೆಚ್ಚುವರಿಯಾಗಿ ಪಡೆದ ₹50 ಅನ್ನು ಬಡ್ಡಿ ಸಮೇತ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರವಾಗಿ ₹2 ಸಾವಿರ, ಪ್ರಕರಣದ ಖರ್ಚಾಗಿ ₹1 ಸಾವಿರ ನೀಡಬೇಕು' ಎಂದು ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯರಾದ ಸಿ.ಎಚ್‌. ಸಮಿಉನ್ನಿಸಾ ಅಬ್ರಾರ್, ಕಮಲಕಿಶೋರ ಅವರನ್ನೊಳಗೊಂಡ ಪೀಠ ಆದೇಶಿಸಿದೆ.

ನವೀನ ಹಳೆಯದು