ತೆರೆಬಂಡಿ ಸ್ಪರ್ಧೆಯ ದಾಖಲೆಗಳ ಎತ್ತು ಮಹಾಲಿಂಗಪುರದ ರಾಜಾ ಇನ್ನಿಲ್ಲ

ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಊರಿನಲ್ಲಿ ನಡೆಯುವ ತೆರೆಬಂಡಿ, ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆಯುತ್ತಾ ಉತ್ತರ ಕರ್ನಾಟಕದ ರೈತರ ಮನೆಮಾತಾಗಿದ್ದ ಮಹಾಲಿಂಗಪುರದ ರಾಜಾ ಎಂದೇ ಹೆಸರು ಪಡೆದಿದ್ದ ಪಟ್ಟಣದ ಕಾಂಗ್ರೆಸ್ ಮುಖಂಡರು, ಪ್ರಗತಿಪರ ರೈತರಾದ ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ ಸಹೋದರರ ತೆರೆಬಂಡಿ ಸ್ಪರ್ಧೆಯ ಎತ್ತು ಗಂಟುರೋಗಕ್ಕೆ ತುತ್ತಾಗಿ ಶನಿವಾರ ಮಧ್ಯಾಹ್ನ ಅಕಾಲಿಕವಾಗಿ ಅಸುನೀಗಿತು.

8 ಲಕ್ಷಕ್ಕೆ ಖರೀದಿಸಿದ್ದ ಎತ್ತು!
ಕಳೆದ 3-4 ದಶಕಗಳಿಂದ ಜಾನುವಾರು ಪ್ರೀಯರು, ರೈತರಾದ ಯಲ್ಲನಗೌಡ ಪಾಟೀಲ ಅವರು ಮಹಾಲಿಂಗಪುರ ಬಸವೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷರಾಗಿ ರೈತರ ಗ್ರಾಮೀಣ ಕ್ರೀಡೆಗಳಾದ ತೆರೆಬಂಡಿ, ಕಲ್ಲು ಎಳೆಯುವದು, ಗಳೆ ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಂಘಟಿಸಿದವರು. ಸ್ವತಹ: ಸ್ಪರ್ಧೆಗಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ಸಾಕಿ ಸ್ಪರ್ಧೆಯಲ್ಲಿ ಭಾಗವಹಿಸುವದು ಇವರ ಪ್ರಮುಖ ಹವ್ಯಾಸವಾಗಿದೆ. ಅದರಂತೆ ಕಳೆದ ಮೂರು ವರ್ಷಗಳ ಹಿಂದೆ 8.1 ಲಕ್ಷ ಕೊಟ್ಟು ದಾಸನಾಳದ ರೈತರೊಬ್ಬರಿಂದ ಈ ಎತ್ತನ್ನು ಖರೀದಿಸಿದ್ದರು.

ದಾಖಲೆಗಳ ರಾಜಾ
ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ವಿವಿಧ ಊರುಗಳಲ್ಲಿ ಜರುಗಿದ 50ಕ್ಕೂ ಅಧಿಕ ತೆರೆಬಂಡಿ, ಕಲ್ಲು ಎಳೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಯೊಂದು ಸ್ಪರ್ಧೆಯಲ್ಲಿ ಪ್ರಥಮ ಅಥವಾ ದ್ವಿತೀಯ ಬಹುಮಾನ ಪಡೆಯುತ್ತಿದ್ದ ಎತ್ತು ಮಹಾಲಿಂಗಪುರ ರಾಜಾ ಎಂದೇ ಖ್ಯಾತಿಯನ್ನು ಪಡೆದಿತ್ತು. ಕನಿಷ್ಠ 20ಕ್ಕೂ ಅಧಿಕ ಪ್ರಥಮ, 25ಕ್ಕೂ ಅಧಿಕ ದ್ವಿತೀಯ ಬಹುಮಾನ ಗಳಿಸಿದ್ದು ಈ ದಾಖಲೆಯು ಈ ಎತ್ತಿನದಾಗಿದೆ.

ನೂರಾರು ರೈತರ ಕಂಬನಿ
ಕಳೆದ ನಾಲ್ಕು ದಿನಗಳ ಹಿಂದೆ ಗಂಟುರೋಗಕ್ಕೆ ತುತ್ತಾದ ಎತ್ತಿಗೆ ಸಾಕಷ್ಟು ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕರಿಯಾಗದೇ ಶನಿವಾರ ಮಧ್ಯಾಹ್ನ ಅಸುನೀಗಿತು. ಅಕಾಲಿಕವಾಗಿ ಅಗಲಿದ ದಾಖಲೆಯ ಎತ್ತಿಗೆ ನೂರಾರು ರೈತರು, ಗಣ್ಯರು ಹೂವಿನಹಾರ ಹಾಕಿ ಕಂಬನಿ ಮಿಡಿದರು.

ಮೆರವಣಿಗೆಯೊಂದಿಗೆ ಭಾವಪೂರ್ಣ ವಿದಾಯ
ಗಂಟುರೋಗದಿಂದ ಅಕಾಲಿಕವಾಗಿ ಅಗಲಿದ ದಾಖಲೆಗಳ ಮಹಾಲಿಂಗಪುರ ರಾಜಾ(ಎತ್ತು) ನನ್ನು ಅದು ಗೆದ್ದ ಡಾಲುಗಳು, ಬೆಳ್ಳಿಗದೆಯೊಂದಿಗೆ ತೆರೆದ ಟ್ರಾಕ್ಟರ್‌ನಲ್ಲಿ ಪಟ್ಟಣದ ತುಂಬ ಕರಡಿಮೇಳ, ಹಲಗೆವಾದನದೊಂದಿಗೆ ಪಟ್ಟಣದ ತುಂಬಾ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು. ಎತ್ತಿನ ಮೇರವಣಿಗೆ ಮತ್ತು ಅಂತ್ಯಕ್ರೀಯೆಯಲ್ಲಿ ನೂರಾರು ರೈತರು, ಪಟ್ಟಣದ ಮುಖಂಡರು ಭಾಗವಹಿಸಿದ್ದರು. ಮಹಿಳೆಯರು ಆರತಿ ಮಾಡಿ, ನಮಸ್ಕರಿಸಿ ದಾಖಲೆಯ ರಾಜನಿಗೆ ಭಾವಪೂರ್ಣ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಬಹಳ ದು:ಖವಾಗುತ್ತಿದೆ
ಎಂಟು ಲಕ್ಷಕ್ಕೆ ಖರೀದಿಸಿದ ಈ ಎತ್ತು ಕಳೆದ ಮೂರು ವರ್ಷಗಳಲ್ಲಿ 50ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡು ನಮ್ಮ ಮನೆತನಕ್ಕೆ ಹೆಸರು-ಗೌರವ ತಂದಿದ್ದ ನಮ್ಮ ಪ್ರೀತಿಯ ಮಹಾಲಿಂಗಪುರ ರಾಜಾ(ಎತ್ತು) ಇಂದು ಅಕಾಲಿಕವಾಗಿ ಅಗಲಿದ್ದು ಬಹಳ ಬೇಸರ ಮತ್ತು ದು:ಖವಾಗುತ್ತಿದೆ. ನಾಲ್ಕು ದಿನಗಳ ಕಾಲ ಚಿಕಿತ್ಸೆ ಕೊಡಿಸಿದರು ಬದುಕಲಿಲ್ಲ. ತೆರೆಬಂಡಿ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಇಂತಹ ಅಪರೂಪದ ಎತ್ತು ಮತ್ತೇ ಸಿಗುವದು ಕಷ್ಟ.


—-ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ. ಎತ್ತಿನ ಮಾಲಕರು.


ನವೀನ ಹಳೆಯದು