ಆಗ ರಾಜಸ್ಥಾನ ಹಠಾವೋ ಮುಧೋಳ ಬಚಾವೋ ಎಂದು ಕರಪತ್ರ ಹಂಚಲಾಗಿತ್ತು.


ಮುಧೋಳ,ಜು.3: ಮುಧೋಳದ ಕಿರಾಣಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟುಗಳನ್ನು ಶ್ರದ್ಧಾ, ಭಕ್ತಿಯಿಂದ ಮಾಡಬೇಕು ಎಂದು ಅಬಕಾರಿ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಕಿರಾಣಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿರಾಣಿ ವ್ಯಾಪಾರಸ್ಥರು ಯಾವಾಗಲು ಮಾನವೀಯತೆಯೊಂದಿಗೆ ಸಂಕಷ್ಟದಲ್ಲಿರುವವರಿಗೆ ಉದ್ರಿ ಕೊಟ್ಟು ಅವರ ಜೀವನೋಪಾಯಕ್ಕೆ ಸಹಾಯ ಮಾಡುವ ಮನೋಭಾವ ಹಾಗೂ ಜನಪರ ಕಾಳಜಿ ಹೊಂದಿದವರಾಗಿದ್ದಾರೆ.

ಅದರೆ ಬೇರೆ ರಾಜ್ಯದಿಂದ ಬಂದಿರುವ ವ್ಯಾಪಾರಸ್ಥರು ಕೇವಲ ವ್ಯಾಪಾರೀ ದೃಷ್ಟಿ ಹೊಂದಿದ್ದು ಅವರು ಯಾರಿಗೂ ಸಹಾಯ-ಸಹಕಾರ ಮಾಡುವ ಮನೋಭಾವ ಹೊಂದಿಲ್ಲ. ಅವರಲ್ಲಿ ಕರುಣೆ ಎಂಬುದಿಲ್ಲ. ಆದ್ದರಿಂದ ತಮ್ಮ ಮಕ್ಕಳಿಗೆ ತಮ್ಮ ಮೂಲ ಉದ್ಯೋಗ ಕಿರಾಣಿ ವ್ಯಾಪಾರವನ್ನು ಜಗತ್ತು ಬದಲಾಗಿರುವಂತೆ ಬದಲಾವಣೆ ಮಾಡಿಕೊಂಡು ಉಳಿಸಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹಿರಿಯ ಕಿರಾಣಾ ವ್ಯಾಪಾರಸ್ಥ ಹಾಗೂ ವೀರಶೈವ ಸೇವಾ ಸಮಿತಿ ಅಧ್ಯಕ್ಷ ರಾಚಪ್ಪಣ್ಣಾ ಕರೆಹೊನ್ನ ಮಾತನಾಡಿ, ಕೆಲ ವರ್ಷಗಳ ಹಿಂದೆ ಮುಧೋಳದ ಎಲ್ಲ ವ್ಯಾಪಾರಸ್ಥರು ತಮ್ಮ ವ್ಯಾಪಾರದೊಂದಿಗೆ ಸುಖಿಗಳಾಗಿದ್ದರು. ಆದರೆ ಅನ್ಯ ರಾಜ್ಯಗಳವರು ಬಂದು ಇಲ್ಲಿ ಎಲ್ಲ ತರಹದ ವ್ಯಾಪಾರ ಆರಂಭಿಸಿದಾಗ ಎಲ್ಲ ವ್ಯಾಪಾರಸ್ಥರೂ ಒಂದೇ ಎಂಬ ಮನೋಭಾವದಿಂದ ಅವರಿಗೆ ಸಹಕಾರ ನೀಡಲಾಯಿತು.

ಆದರೆ ಇಂದು ಅವರು ಇಂದು ತಾವಲ್ಲದೇ ತಮ್ಮ ಬಂಧು ಬಾಂಧವರನ್ನು ಕೂಡಾ ಇಲ್ಲಿಗೆ ಕರೆದುಕೊಂಡು ಬಂದು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳತೊಡಗಿದರು. ಆಗ ರಾಜಸ್ಥಾನ ಹಠಾವೋ ಮುಧೋಳ ಬಚಾವೋ ಎಂದು ಕರಪತ್ರ ಹಂಚಲಾಗಿತ್ತು. ಆದರೂ ಸಹ ನಾವು ಎಲ್ಲ ವ್ಯಾಪಾರಸ್ಥರು ಒಂದೇ ಎಂಬ ಮನೋಭಾವದಿಂದ ನಾವು ಆ ಹೋರಾಟ ಕೈಬಿಡುವಂತೆ ವಿನಂತಿಸಿಕೊಂಡಿದ್ದೇವು. ಆದರೆ ಈಗಿನ ಪರಿಸ್ಥಿತಿ ಅವಲಕೋಕಿಸಿದರೆ ನಾವು ಆಗ ತಪ್ಪು ಮಾಡಿದೆವೆನೋ ಎಂದೆನಿಸುತ್ತಿದೆ. ಏಕೆಂದರೆ ಇಂದು ಮೂಲ ಮುಧೋಳದ ವ್ಯಾಪಾರಸ್ಥರು ತುಂಬಾ ಸಂಕಷ್ಟದಲ್ಲಿದ್ದಾರೆ ಎಂದು ನೊಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಕಿರಾಣಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖ ದಾನೇಶ ತಡಸಲೂರ ಅವರು ಸಾಂದರ್ಭಿಕವಾಗಿ ಮಾತನಾಡಿದರು. ಕಿರಾಣಾ ವ್ಯಾಪಾರಸ್ಥರ ಪ್ರತಿಭಾವಂತ ಮಕ್ಕಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಗರದ ಗವಿಮಠ-ವಿರಕ್ತಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮುದ್ದೇಬಿಹಾಳದ ಬಾಲಾಜಿ ಶುಗರ್ಸ್‍ನ ಅಧ್ಯಕ್ಷ ಹನಮಂತಗೌಡ ಪಾಟೀಲ, ಮಹಾದೇವ.ವ್ಹಿ.ಅಂಗಡಿ, ಬಸವರಾಜ ಘಟ್ನಟ್ಟಿ, ನಿಂಗಪ್ಪ ನಾವಲಗಿ, ಶಂಕರ ನಾವಲಗಿ, ವಿಶ್ವನಾಥ ಮುನವಳ್ಳಿ, ಸುಭಾಸ ಅಂಗಡಿ, ಚಂದ್ರಶೇಖರ ಗೋಸಾರ, ಮೈಬೂಬ ಬಿಸ್ತಿ, ಡಾ.ಕಲ್ಯಾಣ ಮಸಳಿ, ರವಿ ಕೋಲ್ಹಾರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ನವೀನ ಹಳೆಯದು