ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ 20 ಸಾವಿರ ಎಕರೆ ಭೂಮಿ ಅಗತ್ಯ


ಹೊಸದಾಗಿ ನಿರ್ಮಾಣವಾಗುತ್ತಿರುವ ಪುಣೆ-ಬೆಂಗಳೂರು ಎಕ್ಸ್‍ಪ್ರೆಸ್ ವೇಗಾಗಿ 383 ಎಕರೆ ಅರಣ್ಯ ಭೂಮಿ ಸೇರಿದಂತೆ ಸುಮಾರು 20,000 ಎಕರೆ ಭೂಮಿ ಅಗತ್ಯವಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. 719.26 ಕಿ.ಮೀ ಉದ್ದದ ರಸ್ತೆಯನ್ನು ಆರು ಪಥಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಇದನ್ನು ಎಂಟು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಹೆಚ್ಚುವರಿ ಸ್ಥಳಾವಕಾಶವಿದೆ ಎಂದು ಹೇಳಿದೆ. ಇದು ಕರ್ನಾಟಕದ ಒಂಬತ್ತು, ಮಹಾರಾಷ್ಟ್ರದ ಮೂರು ಜಿಲ್ಲೆಗಳಲ್ಲಿ ಎಕ್ಸ್‍ಪ್ರೆಸ್ ವೇ ಹಾದು ಹೋಗುತ್ತದೆ. 

ಕರ್ನಾಟದಲ್ಲಿ 12,355 ಎಕರೆ ಮತ್ತು ಮಹಾರಾಷ್ಟ್ರದಲ್ಲಿ 7,166 ಎಕರೆ ಅವಶ್ಯಕತೆ ಇದೆ. ಈ ಯೋಜನೆಗೆ 25,000 ಮರಗಳನ್ನು ಕಡಿಯಬೇಕಾಗುತ್ತದೆ. ಇದರಲ್ಲಿ ಶೇ. 60 ರಷ್ಟು ಅರಣ್ಯಗಳು ಕರ್ನಾಟಕದಲ್ಲಿವೆ ಎಂದು ಎನ್‍ಎಚ್‍ಎಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯಿಂದ ಎರಡೂ ರಾಜ್ಯಗಳಲ್ಲಿ ಯಾವುದೇ ಸಂರಕ್ಷಿತ ಪ್ರದೇಶ ಅಥವಾ ಅಭಯಾರಣ್ಯಕ್ಕೆ ಹಾನಿಯಾಗುವುದಿಲ್ಲ. ಮಹಾರಾಷ್ಟ್ರದ ಕೊಯ್ನಾ ವನ್ಯಜೀವಿ ಅಭಯಾರಣ್ಯದಿಂದ 12 ಕಿ.ಮೀ. ದೂರದಲ್ಲಿ ಎಕ್ಸ್‌ಪ್ರೆಸ್‌ವೇ ಸಾಗಲಿದೆ. ಕರ್ನಾಟಕದಲ್ಲಿ 19 ನದಿಗಳು ಮತ್ತು 53 ಕಾಲುವೆಗಳು ಸೇರಿದಂತೆ 444 ಜಲಮೂಲಗಳು ಮತ್ತು ಮಹಾರಾಷ್ಟ್ರದಲ್ಲಿ 126 ಜಲಮೂಲಗಳು (9 ನದಿಗಳು ಮತ್ತು 36 ಕಾಲುವೆಗಳು) ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಈ ಯೋಜನೆಯಡಿ 6 ರೈಲ್ವೆ ಓರ್ವ ಬ್ರಿಡ್ಜ್, 14 ಕ್ರಾಸಿಂಗ್ ಪಾಯಿಂಟ್ ಗಳು, 22 ಇಂಟರ್‍ಚೇಂಜ್‍ಗಳು, 55 ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಹೆದ್ದಾರಿಯ ಎರಡೂ ಪಕ್ಕದಲ್ಲಿ ಸಾಲುಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ವೇದಾವತಿ, ಚಿಕ್ಕಹಗರಿ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಅಗ್ರಾಣಿ, ಚಂದನದಿ, ಯರಳ, ನೀರಾ ನದಿಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದ್ದು ಆ ನದಿಗಳಿಗೆ ಸೇತುವೆಯನ್ನೂ ಕಟ್ಟಲಾಗುತ್ತದೆ.

ಈ ಯೋಜನೆಗೆ 55,072.54 ಕೋಟಿ ರೂ. ತಗಲುವ ಸಾಧ್ಯತೆ ಇದೆ. 2.5 ವರ್ಷಗಳಲ್ಲಿ ಎಕ್ಸಪ್ರೆಸ್ವೇ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಅಂದಾಜಿಸಿದ್ದಾರೆ. ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರಸ್ತೆ ಪುಣೆ ಬಳಿಯ ಕುರ್ಸೆಯಿಂದ ಆರಂಭಗೊಳ್ಳಲಿರುವ ಸೂರ್ಪ ಫಾಸ್ಟ್ ಎಕ್ಸ್‍ಪ್ರೆಸ್ ಹೆದ್ದಾರಿ, ಬೆಂಗಳೂರು ಬಳಿಯ ಮುತಗಡಹಳ್ಳಿಯಲ್ಲಿ ಕೊನೆಗೊಳ್ಳಲಿದೆ.

ನವೀನ ಹಳೆಯದು