ಮುಧೋಳದ, ಅಂತಾರಾಷ್ಟ್ರೀಯ ಸೈಕಲ್ ಕ್ರೀಡಾ ಪಟು


ಸೈಕಲಿಂಗ್ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರನ್ನನ ನಾಡಿನ  ಹೆಮ್ಮೆಯ  ಸುಪುತ್ರ  ರಾಜೇಸಾಬ ನಬಿಸಾಬ ಅತ್ತಾರ.

ನಮ್ಮ ರನ್ನನ ನಾಡಿನ ಹೆಮ್ಮೆಯ ಸುಪುತ್ರ. 80 ಹಾಗೂ 90ರ ದಶಕಗಳಲ್ಲಿ ಸೈಕಲಿಂಗ್ ಕ್ಷೇತ್ರದಲ್ಲಿ ರಾಷ್ಟೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ  ಭಾಗವಹಿಸಿ ಮುಧೋಳ ನಗರಕ್ಕೆ  ಕೀರ್ತಿ ತಂದ  ಸೈಕಲ್ ಪಟು ರಾಜೇಸಾಬ ನಬಿಸಾಬ ಅತ್ತಾರ. 
 
01-06-1964 ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ರಾಜೇಸಾಬ ಅವರ ತಂದೆ  ನಬಿಸಾಬ ಕೂಡ ಒಬ್ಬ ಉತ್ತಮ ಸೈಕಲ್ ಪಟು. ಅಂದು ವಿವಿಧೆಡೆಗಳಲ್ಲಿ  ನಡೆಯುವ ಜಾತ್ರೆ, ಉತ್ಸವಗಳಲ್ಲಿ ನಡೆಯುವ ಸೈಕಲ್ ಸ್ಪರ್ಧೆಗಳಲ್ಲಿ ಅವರು ಭಾಗವಹಿಸುತ್ತಿದ್ದರು.

ಬೆಳಗಿನ ಜಾವ ಮುಧೋಳದಿಂದಾ ಸೈಕಲ್ ಮೇಲಿಂದ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಸಂಗ್ರಹಿಸುತ್ತಿದ್ದರೆ, ಉಳಿದ ಸಮಯದಲ್ಲಿ ಅಡತಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಬಡತನದ ಬೇಗೆಯಲ್ಲಿಯೂ ತಮ್ಮ ಮಗನನ್ನು "ಸೈಕಲಿಂಗ್ ಕ್ಷೇತ್ರದ ಧ್ರುವ ತಾರೆ" ಯನ್ನಾಗಿ  ಮಾಡುವ  ಕನಸು  ಕಂಡು ಯಶಸ್ವಿಯಾದ ವ್ಯಕ್ತಿ. ಬೆಳಗಿನ  ಜಾವ  ಗ್ರಾಮೀಣ ಪ್ರದೇಶದಿಂದ ಹಾಲು ಸಂಗ್ರಹಿಸಲು ಹೋಗಿ ಬರುವ ಸಮಯದಲ್ಲಿ ಮಗ ರಾಜೇಸಾಬನಿಗೆ ಸೈಕಲ್ ತರಬೇತಿ ನೀಡುತ್ತಿದ್ದರು.
 
ಮನೆಯೇ ಮೊದಲ ಪಾಠ ಶಾಲೆ; ಜನನಿ ತಾನೆ ಮೊದಲ ಗುರು ಎಂಬಂತೆ ತಂದೆ  ನಬಿಸಾಬ ಅವರೆ ಇವರ ಸರ್ವಸ್ವವೂ ಆಗಿದ್ದರು. ಮನೆಯಲ್ಲಿ ಬಡತನ  ಇದ್ದರೂ ಅಂದಿನ ಮೌಲ್ಯಾಧಾರಿತ ರಾಜಕಾರಣಿ  ಹಾಗೂ ಖ್ಯಾತ  ಉದ್ದಿಮೆದಾರ ದಿವಂಗತ ಎಸ್. ಟಿ. ಪಾಟೀಲ ಅವರ ಸಹಕಾರದಿಂದ ಮಗನನ್ನು ದೇಶದ ವಿವಿಧ  ಭಾಗಗಳಲ್ಲಿ ಜರುಗುವ  ಸೈಕಲ್  ಸ್ಪರ್ಧೆಯಲ್ಲಿ ಭಾಗವಹಿಸಲು ಕಳಿಸುತ್ತಿದ್ದರು. ರಾಜೇಸಾಬ ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿಯೂ ಗೆಲುವು ಕಟ್ಟಿಟ್ಟ ಬುತ್ತಿಯಾಗಿರುತಿತ್ತು.

1981 ರಿಂದ 1990 ರ ವರೆಗೆ ಸೈಕಲಿಂಗ್ ಕ್ಷೇತ್ರದ ಧ್ರುವ ತಾರೆಯಾಗಿ ಮೆರೆದ ರಾಜೇಸಾಬ ನಬಿಸಾಬ ಅತ್ತಾರ 1983 ರಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಪಂಜಾಬದ ಪಟಿಯಾಲಾದಲ್ಲಿ ನಡೆದ 39 ನೆಯ ರಾಷ್ಟ್ರೀಯ ಸೀನಿಯರ್ ಸೈಕಲಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ರಜತ ಪದಕವನ್ನು ಪಡೆದು ಪ್ರಪ್ರಥಮ ಬಾರಿಗೆ ತಮ್ಮ ಹೆಸರನ್ನು ದಾಖಲಿಸಿದರು.

1984 ರಲ್ಲಿ ಪಟಿಯಾಲದಲ್ಲಿಯೇ ನಡೆದ 40 ನೆಯ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಸೈಕಲ್ ಸ್ಪರ್ಧೆಯಲ್ಲಿ ಜಯಗಳಿಸಿ ತಮ್ಮ ಜೀವನದ ಪ್ರಪ್ರಥಮ ಚಿನ್ನದ ಪದಕವನ್ನು ತಮ್ಮ  ಮುಡಿಗೇರಿಸಿಕೊಂಡರು.

1985 ರಲ್ಲಿ ಜೆಮಶೇಡಪೂರದಲ್ಲಿ ನಡೆದ 42ನೆಯ ಸೀನಿಯರ್ ರಾಷ್ಟ್ರೀಯ ಸೈಕಲಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ ಎರಡು ರಜತ ಪದಕಗಳಿಗೆ ಭಾಜನರಾದರು. 

1985 ರಲ್ಲಿ ಬೆಂಗಳೂರಿನಲ್ಲಿ  ನಡೆದ ಸೀನಿಯರ್  ರಾಷ್ಟ್ರೀಯ ಚಾಂಪಿಯನ್ ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ ಎರಡು ರಜತ ಪದಕಗಳನ್ನು ಪಡೆದ ರಾಜೇಸಾಬ ನಬಿಸಾಬ ಅತ್ತಾರ 1985 ರಲ್ಲಿ ನವದೆಹಲಿಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ  ಚಾಂಪಿಯನ್ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ ಎರಡು ರಜತ ಪದಕಗಳಿಗೆ ಭಾಜನರಾದರು.

1987 ರಲ್ಲಿ ಸಿಕಂದ್ರಾಬಾದದಲ್ಲಿ ನಡೆದ 43 ನೆಯ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ ಎರಡು ರಜತ ಪದಕಗಳನ್ನು ತಮ್ಮದಾಗಿಸಿಕೊಂಡರು,1985 ರಲ್ಲಿ  ನವದೆಹಲಿ ಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಸ್ಪರ್ದೆಯಲ್ಲಿ  ನಡೆದ ಸೈಕಲ್ ಸ್ಪರ್ಧೆಯಲ್ಲಿ  ಕಂಚಿನ ಪದಕದ ಜೊತೆ ಹಲವು ಮುಕ್ತ ರಾಷ್ಟ್ರೀಯ ಸೈಕಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

1988 ರಲ್ಲಿ ಮುಂಬಯಿಯಲ್ಲಿ  ನಡೆದ ಪ್ರಾಮೀಸ್ ಮುಕ್ತ ರಾಷ್ಟ್ರೀಯ ಚಾಂಪಿಯನ್ ಸ್ಪರ್ಧೆಯ ಮುಂಬಯಿ - ಪುಣೆ ರೋಡ್ ರೇಸ್ ನಲ್ಲಿ ಕಂಚು ಹಾಗೂ ಹಾಗೂ 1989 ರಲ್ಲಿ ಇದೇ ಸ್ಪರ್ಧೆಯಲ್ಲಿ  ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡ ರಾಜೇಸಾಬ 1988 ರಲ್ಲಿ ನವದೆಹಲಿಯಲ್ಲಿ ನಡೆದ ಹೀರೋ ಸೈಕಲ್ ಮುಕ್ತ ರಾಷ್ಟ್ರೀಯ ಚಾಂಪಿಯನ್ ಸ್ಪರ್ಧೆಯಲ್ಲಿಯೂ ಚಿನ್ನದ ಪದಕವನ್ನು  ಪಡೆದರು.

1989 ರಲ್ಲಿ ನವದೆಹಲಿ ಯಲ್ಲಿ ನಡೆದ 14 ನೆಯ ಏಷಿಯನ್  ಸೈಕಲಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿದರಾದರೂ ಸಹಿತ, ಪದಕಗಳಿಂದ ವಂಚಿತರಾಗಬೇಕಾಯಿತು.

ರಾಜೇಸಾಬ ಅಂದಿನ ಓರ್ವ  ಶರವೇಗದ ಸೈಕಲಿಂಗ್ ತಾರೆಯಾಗಿದ್ದರು. ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಮೊಟ್ಟ ಮೊದಲ ಬಾರಿಗೆ ಸೈಕಲಿಂಗ್  ಕ್ಷೇತ್ರದಲ್ಲಿ ಹಾರಿಸಿದ  ಹೆಗ್ಗಳಿಕೆಯೂ ರಾಜೇಸಾಬ ಅವರದ್ದಾಗಿದೆ.

1984 ರಲ್ಲಿ ಇಟಲಿಯಲ್ಲಿ ಜರುಗಿದ ವಿಶ್ವದ ಸೈಕಲಿಂಗ್ ಚಾಂಪಿಯನ್ಸಿಫ್ ನಲ್ಲಿ ಭಾಗವಹಿಸಿದ  ಇವರು 1988 ರಲ್ಲಿ ಇರಾಕನಲ್ಲಿ ಜರುಗಿದ ಅಂತರರಾಷ್ಟ್ರೀಯ ಸೈಕಲಿಂಗ್ ಚಾಂಪಿಯನ್ ಶಿಪ್ ನಲ್ಲಿ  ಭಾಗವಹಿಸಿ ಚಿನ್ನದ ಪದಕ ಪಡೆದು ಇಡೀ  ರಾಷ್ಟ್ರದ ಗಮನ ಸೆಳೆದದ್ದು ಗಮನಾರ್ಹ ಸಂಗತಿ.  

1989 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ  ಜರುಗಿದ  ಅಂತರರಾಷ್ಟ್ರೀಯ ಸೈಕಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಎರಡನೇ ಸ್ಟೇಜ್ ಸ್ಪರ್ಧೆಯಲ್ಲಿ ನಾಲ್ಕು ಚಿನ್ನ , ಮೂರು ರಜತ  ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದು ಇಡೀ ಭಾರತೀಯ  ಸೈಕಲಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಇಡೀ ರಾಷ್ಟ್ರದ  ಗಮನ  ಸೆಳೆದದ್ದು  ಈಗ  ಇತಿಹಾಸ. 

ಇವರ ಸೈಕಲಿಂಗ್ ಕ್ಷೇತ್ರದಲ್ಲಿಯ ಸಾಧನೆಯನ್ನು  ಗುರುತಿಸಿ ರೇಲ್ವೆ ಇಲಾಖೆಯಲ್ಲಿ ಇವರಿಗೆ ನೌಕರಿ ನೀಡಿದ್ದು ಸದ್ಯ ವಿಜಯಪೂರ ರೇಲ್ವೆ ನಿಲ್ದಾಣದಲ್ಲಿ  ವಾಣಿಜ್ಯ ವಿಭಾಗದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ‌. ರಾಜ್ಯದ ಅನೇಕ ಯುವ ಸೈಕಲಿಂಗ್ ಪ್ರತಿಭೆಗಳನ್ನು ಗುರುತಿಸಿ ಅಂತಹವರಿಗೆ  ತರಬೇತಿ ನೀಡಿ ಬೆಳೆಸಿದ್ದಾರೆ.

ರಾಜೇಸಾಬ ಅತ್ತಾರ ಅವರ ಸಾಧನೆಗಾಗಿ ಅಂದಿನ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹಾಗೂ ಪಾಕಿಸ್ತಾನದ ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ್ದು ಅವಿಸ್ಮರಣೀಯ. ತಾವು ಸೈಕಲಿಂಗ್ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಿದ್ದರೆ ಅದು ತನ್ನ ತಂದೆ ತಾಯಿಯ ಆಶೀರ್ವಾದ ಹಾಗು ದಿವಂಗತ  ಎಸ್. ಟಿ. ಪಾಟೀಲ ಮತ್ತು ಮುಧೋಳದ ಸಮಸ್ತ ಜನತೆಯ ಸಹಾಯ ಸಹಕಾರವೇ ಕಾರಣ ಎಂದು ವಿನಮ್ರವಾಗಿ ಹೇಳುವ  ರಾಜೇಸಾಬ ಅತ್ತಾರ ಅವರನ್ನು  ಬಹುಶಃ ಮುಧೋಳದ ಜನತೆ ಮಾತ್ರ ಮರೆತಿರಬಹುದು.

ಸಧ್ಯಕ್ಕೆ ವಿಜಯಪೂರದಲ್ಲಿ ವಾಸಿಸುವ ರಾಜೇಸಾಬ ಅತ್ತಾರ ಅವರ ಇಬ್ಬರು ಪುತ್ರರಾದ ನಬಿಸಾಬ  ಹಾಗೂ ಮಲೀಕ್ ರೇಹ್ಮಾನ್ ಅಪ್ರತಿಮ ಸೈಕಲ್ ಪಟುಗಳಾಗಿದ್ದು ಕಿರಿಯ ಪುತ್ರ ಮಲೀಕ್ ರೇಹ್ಮಾನ್  ಇತ್ತೀಚೆಗೆ ಪಂಜಾಬದ ಪಟಿಯಾಲಾದಲ್ಲಿ ನಡೆದ  ಸೈಕಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದದ್ದನ್ನು ಇಲ್ಲಿ  ಸ್ಮರಿಸಬಹುದು.

"ಹಿತ್ತಲ  ಗಿಡ  ಮದ್ದಲ್ಲಾ" ಎಂಬ ನಾಣ್ಣುಡಿಯಂತೆ ಜನ್ಮ ಭೂಮಿ ಹಾಗೂ ಕನ್ನಡ ನಾಡಿನ ಹೆಸರನ್ನು ಸಪ್ತ ಸಾಗರದಾಚೆ ತಲುಪಿಸಿದ ಗ್ರಾಮೀಣ ಭಾಗದ,  ಕಡು ಬಡತನದಲ್ಲಿಯೇ ಅಪಾರ ಸಾಧನೆಗೈದ ಈ ಅಪ್ರತಿಮ ಸಾಧಕನಿಗೆ ರಾಜ್ಯ ಸರಕಾರವು ಇಂದಿನವರೆಗೆ ಯಾವದೇ ಪ್ರಶಸ್ತಿ ನೀಡಿ ಗೌರವಿಸದೇ  ಇರುವದು ವಿಪರ್ಯಾಸದ  ಸಂಗತಿ. ಈಗಲೂ ಕಾಲ ಮಿಂಚಿಲ್ಲಾ ಮುಧೋಳದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಈ ಅಪ್ರತಿಮ ಸಾಧಕನಿಗೆ "ಏಕಲವ್ಯ" ಅಥವಾ "ಕರ್ನಾಟಕ ರಾಜ್ಯೋತ್ಸವ" ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಎಲೆಮರೆಯ ಕಾಯಿಯಾಗಿ  ಸಾಧನೆಗೈದ ಈ ಮುಗ್ಧ ಕ್ರೀಡಾಪಟುವಿಗೆ ನ್ಯಾಯ ನೀಡಿದಂತಾಗುತ್ತದೆ.    

                    
  ✒️ - ಗುರುರಾಜ ಪೋತನೀಸ.
ನವೀನ ಹಳೆಯದು