ಬೆಳೆ ವಿಮೆ ನೋಂದಣಿ ಪ್ರಾರಂಭ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಬೆಳೆಗಳ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಮುಂಗಾರು ಹಂಗಾಮು ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಮಾಡಿಸಲು ಅಂತಿಮ ದಿನಾಂಕ ಪ್ರಕಟಿಸಲಾಗಿದೆ.


ಅಂತಿಮ ದಿನಾಂಕ ವಿವರ

ಮಳೆಯಾಶ್ರಿತ ಭತ್ತ, ತೊಗರಿ ಆಗಸ್ಟ್ 16

ನೀರಾವರಿ ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ತೊಗರಿ ಜುಲೈ 31

ಹತ್ತಿ, ಕೆಂಪು ಮೆಣಸಿನಕಾಯಿ, ಟೊಮೆಟೊ, ಈರುಳ್ಳಿ ಜುಲೈ 31

ರಾಗಿ, ನವಣೆ, ಹುರುಳಿ, ನೆಲಗಡಲೆ, ಸಜ್ಜೆ ಆಗಸ್ಟ್ 16

ಹೆಸರು ಜೂನ್ 30

ಎಳ್ಳು ಜುಲೈ 15


ಬೆಳೆವಿಮೆ ಎಲ್ಲಿ ಮಾಡಿಸಬೇಕು?

ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ಸಾಲದ ಮೊತ್ತ ನೀಡಲಾಗುತ್ತದೆ. ಹೀಗಾಗಿ ಈ ರೈತರು ಬೆಳೆವಿಮೆ ಕಂತನ್ನು ಪ್ರತ್ಯೇಕವಾಗಿ ಪಾವತಿಸುವ ಅಗತ್ಯವಿಲ್ಲ.

ಇನ್ನು ಬೆಳೆ ಸಾಲ ಪಡೆಯದೇ ಇರುವ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಸಂಪರ್ಕಿಸಿ, ಜಮೀನು ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ವಿಮಾ ಅರ್ಜಿಯೊಂದಿಗೆ ನೀವು ಯಾವ ಬೆಳೆಗೆ ವಿಮೆ ಮಾಡಿಸುತ್ತಿದ್ದೀರೋ ಆ ಬೆಳೆ ವಿಮೆಯ ಕಂತನ್ನು (ಪ್ರೀಮಿಯಂ) ಪಾವತಿಸಬೇಕು.


ಏನಿದು ಬೆಳೆವಿಮಾ ಯೋಜನೆ?

ಹವಾಮಾನ ವೈಪರೀತ್ಯದ ಕಾರಣದಿಂದ ರೈತರು ಪದೇ ಪದೆ ನಷ್ಟಕ್ಕೆ ಒಳಗಾಗುತ್ತಿದ್ದು; ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾವುದೇ ಸಂಭವಿಸಿದರೂ ರೈತ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ರೈತರನ್ನು ಸಂಕಷ್ಟದಿ೦ದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

2016ರ ಜನವರಿ 13 ರಂದು ಸದರಿ ಯೋಜನೆಯನ್ನು ಘೋಷಿಸಲಾಗಿದೆ. ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯವು ಈ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ.

ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಳೆಯನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆಗೂ ಮೊದಲೇ ಮಾಡಬೇಕು. ಬಳಿಕ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ತಮ್ಮ ಕೈ ಮೀರಿದ ಯಾವುದೇ ನೈಸರ್ಗಿಕ ಅವಘಡಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿ೦ದ ಪಡೆಯುತ್ತಾರೆ.


ಬೆಳೆ ಸಮೀಕ್ಷೆ

ವಿಮೆ ಮಾಡಿಸಿದ ರೈತರು ಮೊದಲಿಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ಮೊಬೈಲ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು. ಬಳಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು.

ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾಳಾಗಿದೆಯೋ ಅದನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ.ಮೇಲಾಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿ?

ಬೆಳೆವಿಮೆ ಪರಿಹಾರ ಎಷ್ಟು ಹಣ ಪರಿಹಾರವಾಗಿ ಸಿಗಲಿದೆ ಎಂಬ ಕುತೂಹಲ ರೈತರಲ್ಲಿದೆ. ಇದನ್ನು ಸ್ವತಃ ರೈತರೇ ತಮ್ಮ ಮೊಬೈಲ್‌ನಲ್ಲಿ ಪರಿಶೀಸಿ ಖಚಿತಪಡಿಸಿಕೊಳ್ಳಬಹುದು. ರೈತರು ತಮಗೆ ಎಷ್ಟು ಬೆಳೆವಿಮೆ ಪರಿಹಾರ ಸಿಗಲಿದೆ ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

https://www.samrakshane.karnataka.gov.in/

ಇಲ್ಲಿ ಕ್ಲಿಕ್ ಮಾಡಿದ ಕೂಡಲೇ ‘ಸಂರಕ್ಷಣೆ’ ಅಧಿಕೃತ ಜಾಲತಾಣ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ವರ್ಷ ಆಯ್ಕೆಯಲ್ಲಿ 2023-24 ಮತ್ತು ಋತು ಆಯ್ಕೆಯಲ್ಲಿ Kharif/Rabi/Summer ಸೆಲೆಕ್ಟ್ ಮಾಡಿ, ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಬಳಿಕ Farmer ಕಾಲಂನಲ್ಲಿ ‘Crop insurance details on survey number’ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೊಬಳಿ ಮತ್ತು ಗ್ರಾಮ Select ಮಾಡಿ, Survey number type ಮಾಡಿ Search ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಸರ್ವೆ ನಂಬರ್‌ನಲ್ಲಿ ಬರುವ ಎಲ್ಲಾ ಹಿಸ್ಸಾ ನಂಬರ್ ಮಾಹಿತಿ ದೊರೆಯುತ್ತದೆ. ನಿಮ್ಮ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ, ನೀವು ಬೆಳೆವಿಮೆ ಕಟ್ಟಿರುವ ಮಾಹಿತಿ ಸಿಗುತ್ತದೆ.

ಆನಂತರ Application number ಮೇಲೆ ಕ್ಲಿಕ್ ಮಾಡಿದರೆ, ನೀವು ಎಷ್ಟು ಬೆಳೆವಿಮೆ ಕಟ್ಟಿದ್ದೀರಿ? ನಿಮಗೆ ಎಷ್ಟು ಬೆಳೆವಿಮೆ ಬರುತ್ತದೆ? ಎಂಬ ಸಂಪೂರ್ಣ ಮಾಹಿತಿ ದೊರೆಯಲಿದೆ.

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

ನವೀನ ಹಳೆಯದು