ಸಚಿವ ಸ್ಥಾನದ ಭಾಗ್ಯ ಯಾರಿಗೆ ಒಲಿಯಲಿದೆ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದು, ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಚರ್ಚೆ ಶುರುವಾಗಿದೆ.


ಈಗಾಗಲೇ ಸಚಿವರಾಗಿದ್ದ ಆರ್‌.ಬಿ.ತಿಮ್ಮಾಪುರ ಮುಧೋಳ ಮೀಸಲು ಕ್ಷೇತ್ರದಿಂದ, ಎಚ್‌.ವೈ.ಮೇಟಿ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಆರ್‌.ಬಿ.ತಿಮ್ಮಾಪುರ ಮುಧೋಳ ಕ್ಷೇತ್ರದಿಂದ ಮೊದಲ ಬಾರಿಗೆ 1989ರಲ್ಲಿ ಶಾಸಕರಾಗಿದ್ದರು. 1999ರಲ್ಲಿ ಗೆಲುವು ಸಾಧಿಸಿದ್ದ ತಿಮ್ಮಾಪುರ ಸಚಿವರಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡಲಾಗಿತ್ತು.


ಮೂರನೇ ಬಾರಿಗೆ ಮುಧೋಳ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು. ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಅವರಿಗೆ ಆ ಕೋಟಾದಲ್ಲಿ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಹೊಂದಿದ್ದಾರೆ.


ಬಾಗಲಕೋಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್‌.ವೈ.ಮೇಟಿ ಈ ಹಿಂದೆ 1996ರಲ್ಲಿ ಅರಣ್ಯ ಹಾಗೂ 2016ರಲ್ಲಿ ಅಬಕಾರಿ ಸಚಿವರಾಗಿದ್ದರು. ಮೂರು ಬಾರಿ ಗುಳೇದಗುಡ್ಡ ಹಾಗೂ ಎರಡನೇ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಸಚಿವರಾಗುವ ನಿರೀಕ್ಷೆ ಹೊಂದಿದ್ದಾರೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರೆ, ಅದೇ ಸಮುದಾಯಕ್ಕೆ ಸೇರಿದ ಮೇಟಿ ಅವರಿಗೆ ಅದೃಷ್ಟ ಖುಲಾಯಿಸಲಿದೆಯೇ ನೋಡಬೇಕು.


ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಜೆ.ಟಿ.ಪಾಟೀಲ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿಲ್ಲ. ಹಿರಿಯ ಶಾಸಕರಾಗಿರುವ ಅವರು. ಈ ಬಾರಿ ಸಚಿವ ಸ್ಥಾನಕ್ಕೆ ಯತ್ನಿಸಲಿದ್ದಾರೆ.


ಹುನಗುಂದ ಕ್ಷೇತ್ರದಿಂದ ಎರಡನೇ ಬಾರಿಗೆ ವಿಜಯಾನಂದ ಕಾಶಪ್ಪನವರ ಆಯ್ಕೆಯಾಗಿದ್ದಾರೆ. ಅವರ ತಂದೆ ಎಸ್‌.ಆರ್‌. ಕಾಶಪ್ಪನವರ ಸಚಿವರಾಗಿದ್ದರು. ಕಾಂಗ್ರೆಸ್‌ ಪಕ್ಷದನಿಷ್ಠೆ ಕೈಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.


ಬಾದಾಮಿಯಿಂದ ಮೊದಲ ಬಾರಿಗೆ ಭೀಮಸೇನ ಚಿಮ್ಮನಕಟ್ಟಿ ಆಯ್ಕೆಯಾಗಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಎಚ್‌.ವೈ.ಮೇಟಿ ಅವರೂ ಇದೇ ಜಿಲ್ಲೆಯವರಾಗಿರುವುದರಿಂದ ಸಚಿವ ಸ್ಥಾನ ಸಿಗುವುದು ಕಷ್ಟ. ಯುವಕರ ಕೋಟಾದಲ್ಲಿ ಒಂದು ಚಾನ್ಸ್ ಸಿಗುತ್ತದೆಯೇ ನೋಡಬೇಕು.

ನವೀನ ಹಳೆಯದು