ಮುಧೋಳ :ಮುಧೋಳ ಮತಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಂಡಾಯ ಬಿಸಿ ಹೆಚ್ಚಾಗಿದೆ. ಮುಧೋಳ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸತೀಶ್ ಬಂಡಿವಡ್ಡರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಮುಧೋಳ ಮೀಸಲು ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಟಿಕೆಟ್ ಕೈ ತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸತೀಶ್ ಬಂಡಿವಡ್ಡರ, ಮುಧೋಳ ಪಟ್ಟಣದಲ್ಲಿ ಸ್ವಾಭಿಮಾನಿಗಳ ಕಾರ್ಯಕರ್ತರ ವೇದಿಕೆ ಎಂದು ತಮ್ಮ ಬೆಂಬಲಿಗರ ಸಭೆ ನಡೆಸಿ ಪಕ್ಷೇತರರಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದರು.
ಕಳೆದ ಮೂವತ್ತು ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದಲ್ಲಿ ಜನರೊಂದಿಗೆ ಸತತ ಸಂಪರ್ಕದಲ್ಲಿದ್ದು, ವಿವಿಧ ಸಾಮಾಜಿಕ ಕೆಲಸ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜನ ಸಾಮಾನ್ಯರೊಡನೆ ಬೆರೆತಿದ್ದೇನೆ.
ಆದ್ದರಿಂದ ಈ ಭಾರಿ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಕೊನೆಯ ಘಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಇದರಿಂದ ಸಾಕಷ್ಟು ಬೇಸರವಾಗಿದೆ. ಈ ಬಗ್ಗೆ ಅಭಿಮಾನಿಗಳು ಹಣ ಸಂಗ್ರಹಿಸಿ ದೇಣಿಗೆ ನೀಡುವ ಮೂಲಕ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಒತ್ತಡ ತರುತ್ತಿದ್ದಾರೆ. ಈ ಕಾರಣಕ್ಕೆ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು. ಇನ್ನು ಎರಡು ದಿನದಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಪಕ್ಷೇತರವಾಗಿ ಕಣಕ್ಕೆ ಇಳಿಯುವುದಾಗಿ ತಿಳಿಸಿದರು.
ಈ ಹಿಂದೆ ಲೋಕಾಪೂರ ಪಟ್ಟಣದಲ್ಲಿರುವ ಲೋಕೇಶ್ವರ ದೇವಾಲಯದಲ್ಲಿ ಮಾಜಿ ಸಚಿವರಾದ ಆರ್ ಬಿ ತಿಮ್ಮಾಪೂರ ಮತ್ತು ಅವರ ಬೆಂಬಲಿಗರು ಹಾಗೂ ಸತೀಶ ಬಂಡಿವಡ್ಡರ ಮತ್ತು ಅವರ ಬೆಂಬಲಿಗರು ಸೇರಿಕೊಂಡು ಪಕ್ಷ ಯಾರಿಗೂ ಟಿಕೆಟ್ ನೀಡಿದರೂ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುವುದಾಗಿ ಎಂದು ಅಣೆ ಪ್ರಮಾಣ ಮಾಡಲಾಗಿತ್ತು. ಈಗ ಆಣೆ ಪ್ರಮಾಣ ಧಿಕ್ಕಿರಿಸಿ ಬಂಡಾಯ ಬಿಸಿ ಮುಟ್ಟಿಸಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಸತೀಶ ಬಂಡಿವಡ್ಡರ ಅವರ ಬಂಡಾಯದಿಂದಾಗಿ ಬಿಜೆಪಿ ಪಕ್ಷಕ್ಕೆ ಲಾಭ ಆಗುವ ನಿರೀಕ್ಷೆ ಇದೆ.