Women's Day: ಬ್ರಿಟಿಷರೊಂದಿಗೆ ರಣರಂಗದಲ್ಲಿ ಹೋರಾಡಿದ್ದ ಮುಧೋಳ ತಾಲೂಕಿನ ವೀರ ಮಹಿಳೆಯರ ಕಥೆ

ಬೇಟೆಯೇ ಜೀವನಾಂಶಕ್ಕೆ ಪೂರಕವಾಗಿದ್ದ ಈ ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಶಸ್ತ್ರಾಸ್ತಗಳು ಅಗತ್ಯವಾದದ್ದು ಬೇಟೆಗೆ ಹೊರತು ಹೊಡೆದಾಟಕ್ಕಲ್ಲ. ಆದರೆ ಶಸ್ತ್ರಾಸ್ತ್ರಗಳನ್ನು ಮರಳಿ ಪ್ರಭುತ್ವಕ್ಕೆ ಒಪ್ಪಿಸಬೇಕೆಂಬ ಕಂಪನಿ ಸರಕಾರದ ಆದೇಶ ಬೇಡ ಸಮುದಾಯದ ಜೀವನೋಪಾಯ ಕ್ಕೇ ಸಂಚಕಾರ ತಂದಿತ್ತು. ಈ ದಬ್ಬಾಳಿಕೆಯನ್ನು ಸಹಜವಾಗಿ ಅವರು ವಿರೋಧಿಸಿದರು. ಅವರಿಗೆ ಮರಾಠಾ ಸೈನಿಕ ಬಾಬಾಜಿ ನಿಂಬಾಳಕರ ಎಂಬುವನು ಬ್ರಿಟೀಷರ ವಿರುದ್ಧ ಬಂಡೇಳುವಂತೆ ಪ್ರೋತ್ಸಾಹ ಕೊಡುತ್ತಿದ್ದ.

ಈ ನಡುವೆ ಕಂಪನಿಸರಕಾರ ಹಾಗೂ ಹಲಗಲಿಯ ಹೋರಾಟಗಾರರ ನಡುವೆ ಮಧ್ಯಸ್ಥಿಕೆಗಾರನಾಗಿ ಕಣದರಗಿಯ ಕೃಷ್ಣ ರಾವ್ ಎಂಬ ಕಾರ್ಯಭಾರಿ ಸಂಧಾನಕ್ಕೆ ಪ್ರಯತ್ನಿಸಿದರೂ ಅವನ ಸಂಧಾನ ಫಲಕಾರಿಯಾಗಲಿಲ್ಲ. ಜೀವನಾಧಾರಕ್ಕೆ ಬೇಟೆ. ಆ ಬೇಟೆಗೆ ಬೇಕಾದ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಿದರೆ ಜೀವಕ್ಕೆ ಸಂಚಕಾರ ಬಂದೀತು ಎಂಬ ಭಾವನೆಯಿಂದ ಅವರು ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಲು ನಿರಾಕರಿಸಿದರು. ಜೀವ ಹೋದರೂ ಸರಿ ಹತ್ಯಾರಗಳನ್ನು ಕೊಡುವುದಿಲ್ಲ ಎಂದು ತಿಳಿಸಿದರು.

ಮುಂದಿನದು ಮಾತ್ರ ರಕ್ತರಂಜಿತ ಅಧ್ಯಾಯವೇ. ಹಾಗೆ ನೋಡಿದರೆ ಬ್ರಿಟೀಷರ ವಿರುದ್ಧ ಹೋರಾಡುವುದಕ್ಕೆಂದೇ ಈ ವೀರಬೇಡರು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಆದರೆ ಬ್ರಿಟೀಷರು ಮೊದಲೇ ಅಧಿಕಾರದ ಅಮಲಿನ ಅಲೆಯಮೇಲೆ ತೇಲುತ್ತಿದ್ದರು. ಅವರು ಹಲಗಲಿಯ ಬೇಡರ ಸಹಜ ವಾದ ಆಸೆ ಮತ್ತು ಅಭಿಮಾನವನ್ನು ಅಪಾರ್ಥ ಮಾಡಿಕೊಂಡರು. 

ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಮರಳಿಸದಿರಲು ಇರುವ ಸಕಾರಣಗಳನ್ನು ಬ್ರಿಟೀಷ್ ಸರಕಾರ ಅರ್ಥಮಾಡಿಕೊಡುವಲ್ಲಿ ವಿಫಲರಾದರು.

ಬೇಡರ ಈ ನಿರಾಕರಣೆಗೆ ಕಂಪನಿ ಸರಕಾರ ೧೮೫೭ರ ನವೆಂಬರ ೨೬ರ ಮಧ್ಯರಾತ್ರಿ ೬೦೦ ಅಶ್ವಾರೂಢ ಸೈನಿಕರೊಂದಿಗೆ ಹಲಗಲಿಯನ್ನು ಮುತ್ತಿದರು. ದಾಳಿಗೆ ಹೆದರದ ಬೇಡರು ಪ್ರತಿಯಾಗಿ ಅದನ್ನು ಎದುರಿಸಿತು. ರಾತ್ರಿಯ ಹೊತ್ತು ನಿಕರದ ಹೋರಾಟವೇ ನಡೆಯಿತು. ಫಸ್ಟ್ ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೆವಲಾಕ್ ಎಂಬ ಅಧಿಕಾರಿ ಬೇಡರ ಈ ದಾಳಿಯಲ್ಲಿ ಹತನಾದ. ಇದರಿಂದ ಹೆದರಿದ ಕರ್ನಲ್ ನೆಟನ್‌ಕರ್ ಹೆಚ್ಚಿನ ಸೈನ್ಯಕಳಿಸುವಂತೆ ಕೇಳಿಕೊಂಡ.

ಮರುದಿನ ಇನ್ನಷ್ಟು ನಿಕರದ ಹೋರಾಟನಡೆದು ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿದವು. ನಾಯಕ ಸಮುದಾಯದ ಈ ಕೆಚ್ಚೆದೆಯ ಕಲಿತನಕ್ಕೆ ಹೆದರಿ, ಬ್ರಿಟೀಷ್ ಸೇನೆ ಮಧ್ಯರಾತ್ರಿ ಊರಿಗೆ ಬೆಂಕಿಹಚ್ಚಿತು. ಬೆಂಕಿಯ ದಳ್ಳುರಿಗೆ ಸಿಕ್ಕು ಆರ್ತನಾದ ಗೈದ ಮಕ್ಕಳ ಮತ್ತು ದನಕರುಗಳ ಕ್ಷಣೆಗೆ ಮುಂದಾದ ಬೇಡರ ಪಡೆಯ ವೀರರನ್ನು ಸೇನೆ ಗುಂಡಿಟ್ಟು ಕೊಂದಿತು.

ಜಡಗಾ-ಬಾಲಾ ಎಂಬ ಗ್ರಾಮದ ಬೇಡರ ಮುಖಂಡರು ದಿಟ್ಟ ಹೋರಾಟ ನಡೆಸಿದರೂ ಬ್ರಿಟೀಷ್ ಸೇನೆಯ ವಿರುದ್ಧ ನಿಲ್ಲಲಾಗಲಿಲ್ಲ.

ದಾಳಿಯಿಂದ ತಪ್ಪಿಸಿಕೊಳ್ಳಲು ಹತ್ತಿಕಟ್ಟಿಗೆಯಲ್ಲಿ ಅವಿತು ಕೊಂಡಿದ್ದ ೨೩ ಜನರನ್ನು ಸೇನೆ ಸುಟ್ಟುಹಾಕಿತು. ಹೀಗೆ ಒಂದು ರಕ್ತರಂಜಿತ ಅಧ್ಯಾಯ ಕೊನೆಗೊಂಡಿತು. ನಂತರ ಬ್ರಿಟೀಷ್ ಸೇನೆ ಸುಮಾರು ೨೯೦ ಜನರನ್ನು ಸೆರೆ ಹಿಡಿಯಿತು. ಇವರಲ್ಲಿ ಜಡಗಾ-ಬಾಲಾರನ್ನು ಒಳಗೊಂಡಂತೆ ಮುಧೋಳ ಮತ್ತು ಹಲಗಲಿಯಲ್ಲಿ ಗಲ್ಲಿಗೇರಿಸಿತು. ಹೀಗೆ ಹಲಗಲಿ ಬೇಡರ ಬಂಡಾಯವನ್ನು ಸೇನೆ ಹತ್ತಿಕ್ಕಿತು.

ಬ್ರಿಟಿಷರ ವಿರುದ್ಧ ಹೋರಾಡಿದ್ದ ಹಲಗಲಿಯ ವೀರ ವನಿತೆಯರು

ಜಡಗಪ್ಪನ ಸಹೋದರಿ ರಾಮವ್ವ, ಈಕೆಯನ್ನು ಅರಕೇರಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದಾಗಿಯೂ, ಬಂಡಾಯದ ಸಂದರ್ಭದಲ್ಲಿ ವೈರಿಗಳೇ ಮೆಚ್ಚಿ ಅಹುದಹುದೆನ್ನುವಂತೆ ಅಣ್ಣ ಜಡಗಪ್ಪನಿಗೂ, ಮಗ ಬಾಲಪ್ಪನಿಗೂ ಹೆಗಲೆಣೆಯಾಗಿ ನಿಂತು ವೈರಿ ಪಡೆಯನ್ನು ಸದೆ ಬಡೆಯುವಲ್ಲಿ ಅಪ್ರತಿಮ ಸಾಹಸ ಮೆರೆದವಳೆಂದು ಹೇಳಲಾಗುತ್ತಿದೆ. ರಾಮವ್ವನ ಜೊತೆಗೆ ಹಣಮವ್ವ, ಲಗಮವ್ವ ಎಂಬ ಮಹಿಳೆಯರು ಕೂಡಾ ಹೋರಾಟದಲ್ಲಿ ಪಾಲ್ಗೊಂಡಿದ್ದಾಗಿ ತಿಳಿದು ಬರುತ್ತದೆ.

ನವೀನ ಹಳೆಯದು