ಮಾಚಕನೂರಿನ ಹೊಳಬಸವೇಶ್ವರ ದೇವಸ್ಥಾನ
ಮುಧೋಳ ತಾಲೂಕಿನ ಮಾಚಕನೂರಿನ ಹೊಳಬಸವೇಶ್ವರ ದೇವಸ್ಥಾನ ಒಂದು ಶ್ರದ್ಧಾಭಕ್ತಿ ಕೇಂದ್ರವಾಗಿದೆ. ಪ್ರವಾಸಿಗರು ಈ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಈ ದೇವಸ್ಥಾನವನ್ನು ನೋಡಿ ಹೊಳಬಸವೇಶ್ವರ ದರ್ಶನ ಮಾಡಿ ಪುನೀತರಾಗಬಹುದು.
ಆದರೆ ಮಾಚಕನೂರು ಹಾಗೂ ಹೊಳಬಸವೇಶ್ವರ ದೇವಸ್ಥಾನ ಪ್ರತಿವರ್ಷದ ಪ್ರವಾಹದಲ್ಲಿ ಭಾಗಶಃ ಮುಳುಗಡೆ ಕಾಣುವುದು ಸಾಮಾನ್ಯ ಸಂಗತಿ. ಪ್ರವಾಹದ ಸಂದರ್ಭದಲ್ಲಿ ಈ ದೇವಸ್ಥಾನ ಜಲದಿಗ್ಭಂಧನಕ್ಕೆ ಗುರಿಯಾಗುತ್ತದೆ.
ಹೊಳಬಸವೇಶ್ವರ ದೇವಸ್ಥಾನ ಘಟಪ್ರಭಾ ನದಿ ದಂಡೆಯಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದು. ಕ್ರಿ.ಶ. ಎಂಟನೇ ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸದಾಶಿವ ಅರಸರು ಈ ದೇವಸ್ಥಾನವನ್ನು ಕಟ್ಟಿಸಿದ್ದರು.
ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಜಾತ್ರೆ ಮಹೋತ್ಸವ ಅದ್ದೂರಿಯಾಗಿನಡೆಯುತ್ತದೆ. ದೇವಸ್ಥಾನದ ಅರ್ಚಕ ಮಲ್ಲಯ್ಯ ಗಣಾಚಾರಿ ಹೇಳುವಂತೆ, ಪ್ರವಾಹ ಬಂದಾಗಲೂ ದೇವಾಲಯಕ್ಕೆ ಈಜಿಕೊಂಡು ಹೋಗಿ ದೈನಂದಿನ ಪೂಜೆ ಪುನಸ್ಕಾರ ನಡೆಯುಸುತ್ತಾರೆ.
ಒಟ್ಟಿನಲ್ಲಿ ಮುಧೋಳ ತಾಲೂಕಿನ ಮಾಚಕನೂರಿನ ಹೊಳಬಸವೇಶ್ವರ ದೇವಸ್ಥಾನ ಒಂದು ಐತಿಹಾಸಿಕ ಶ್ರದ್ಧಾಭಕ್ತಿ ಕೇಂದ್ರವಾಗಿದೆ.
ರನ್ನ ಬೆಳಗಲಿಯ ಅಮೃತೇಶ್ವರ ದೇಗುಲ
ಕರ್ನಾಟಕವು ಪ್ರವಾಸಿಗರ ಸ್ವರ್ಗ ಸೀಮೆ. ರೋಮಾಂಚನಗೊಳಿಸುವ ತಾಣಗಳು. ಕಣ್ಮನ ಸೂರೆಗೊಳ್ಳುವ ದೇವಾಲಯಗಳು , ರಾಜ ಮಹಾರಾಜರ ಶ್ರೀಮಂತ ಪರಂಪರೆ , ಭವ್ಯ ಇತಿಹಾಸ , ವೈಭವದ ಸಂಸ್ಕೃತಿಯಿಂದ ಕೂಡಿದ ಎಷ್ಟೋ ಐತಿಹಾಸಿಕ ಸುಂದರ ತಾಣಗಳಿವೆ . ಅಂತಹವುಗಳಲ್ಲಿ ರನ್ನ ಬೆಳಗಲಿ ಎಂಬ ಪ್ರವಾಸಿ ತಾಣವೂ ಒಂದು.
ಸುಮಾರು ಸಾವಿರ ವರ್ಷಗಳ ಹಿಂದೆ ವೈಭವ ಮತ್ತು ಘನತೆಯಿಂದ ಮೆರೆದ ರನ್ನ ಬೆಳಗಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿದೆ. ರನ್ನಬೆಳಗಲಿ ಈ ಗ್ರಾಮದ ಹೊರಭಾಗದಲ್ಲಿ ಮೈಶಿಷ್ಟ್ಯಪೂರ್ಣ ಕಲ್ಯಾಣ ಚಾಲುಕ್ಯ ಶಿಲ್ಪ ಕೆತ್ತನೆಯ ಅಮೃತೇಶ್ವರ ದೇವಾಲಯವಿದೆ.
ಲಕ್ಕುಂಡಿಯ ದೇವಾಲಯಗಳ ಮಾದರಿಯನ್ನು ನೇರವಾಗಿ ಹೋಲುತ್ತದೆ. ರನ್ನ ಬೆಳಗಲಿಯ ಅಮೃತೇಶ್ವರ ದೇವಾಲಯದ ಶಿಲ್ಪ ಸೌಂದರ್ಯ ಹಾಗೂ ಸೂಕ್ಷ್ಮಾಲಂಕಾರಗಳಂತೂ ಅದ್ಭುತವಾಗಿದೆ. ಸುಂದರವಾದ ಕುಶಲ ಕೈಚಳಕ, ನಿಪುಣತೆ ಹಾಗೂ ಚಿತ್ತಚಾತುರ್ಯ ವರ್ಣನಾತೀತ.
ನವರಂಗದ ನಾಲ್ಕು ಆವರ್ತಕ ಕಂಬ ಗಳಂತೂ ಶಿಲ್ಪಿಗಳ ತಂತ್ರ ಕೌಶಲ್ಯಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ. ದೇವಾಲಯದ ಹೊರಮೈ ಮೇಲೆ ಸುಂದರವಾದ ಕೆತ್ತನೆಗಳಿದ್ದೂ ಕಣ್ಮನ ಸೆಳೆಯುತ್ತವೆ.
ಅಲ್ಲದೆ ಮುಂಭಾಗದಲ್ಲಿ ವಾಸ್ತುಶಿಲ್ಪಾವಶೇಷಗಳನ್ನು ಬಹುದಾಗಿದೆ. ಅಮೃತೇಶ್ವರ ದೇವಾಲಯದಲ್ಲಿ ಯುಗಾದಿ ಮೊದಲ ದಿನವಾದ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಲಿಂಗದ ಮೇಲೆ ಬೀಳುವುದು ಇಲ್ಲಿನ ವಿಶೇಷ. ಮಹಾಕವಿ ರನ್ನನನ್ನು ತನ್ನ ಮಡಿಲಲ್ಲಿಟ್ಟು ಆ ಕವಿಯ ಹೆಸರಿನಿಂದಲೇ ಗ್ರಾಮವೂ ಸೇರಿಕೊಂಡು ರನ್ನ ಬೆಳಗಲಿಯಾಗಿ ರೂಪುಗೊಂಡಿರುವ ಈ ಗ್ರಾಮದಲ್ಲಿ ಪ್ರತಿ ವರ್ಷದ ಯುಗಾದಿ ಹಬ್ಬದ ದಿನದ ಬೆಳಗ್ಗೆ ಈ ದೃಶ್ಯ ಒಂದು ಬಾರಿ ಮಾತ್ರ ಕಾಣಿಸುತ್ತದೆ.
ಬೆಳಗ್ಗೆ ಅಮೃತೇಶ್ವರ ದೇವಾಲಯ ಪ್ರವೇಶಿಸುವ ಸೂರ್ಯನ ಕಿರಣಗಳು ಅಂದಾಜು 10 ನಿಮಿಷಗಳವರೆಗೆ ಲಿಂಗದ ಸುತ್ತಲೇ ಹಾಯ್ದು ಲಿಂಗದ ಮೇಲೆ ಕಾಣಿಸಿಕೊಳ್ಳಲಿದೆ.
ನಂತರ ಕೆಲವೇ ನಿಮಿಷದಲ್ಲಿ ಸೂರ್ಯದೇವನಿಂದ ಲಿಂಗದ ಪಾದಪೂಜೆ ನೆರವೇರಲಿದೆ. ಕೇವಲ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಕಾಣಸಿಗುವ ಈ ಅಪರೂಪದ ದೃಶ್ಯವನ್ನು ಪ್ರತಿ ವರ್ಷ ಗ್ರಾಮಸ್ಥರು ವೀಕ್ಷಿಸುತ್ತಾರೆ.
ಮುಧೋಳದ ಕಲೇಶ್ವರ ದೇವಸ್ಥಾನ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಮುಧೋಳ ಗ್ರಾಮದ ಕಲ್ಲೇಶ್ವರ ದೇವಾಲಯದ ಪ್ರವೇಶ ದ್ವಾರದ ಲಲಾಟ ಬಿಂಬದ ಮೇಲೆ ಒಂದು ಕನ್ನಡ ಲಿಪಿ ಮತ್ತು ಭಾಷೆಯ ಶಾಸನವಿದೆ.೧೬ ಇದು ವಿಜಪುರ ಅಂದರೆ ಬಿಜಾಪುರ ದೊರೆ ಇಸ್ಮಾಯಿಲ್ ಬಾದಶಾಹನ ಕಾಲಕ್ಕೆ ಸೇರಿದ್ದು ಆಗ ಈ ದೊರೆ ರಾಜ್ಯಭಾರ ಮಾಡುತ್ತಿದ್ದನೆಂದು ಅದರಲ್ಲಿ ಹೇಳಿದೆ.
ಈ ಶಾಸನದ ಕಾಲ ಶಕ ೧೫೪೦, ಕಲಿವರ್ಷ ೪೭೧೭. ಇದು ಕ್ರಿ.ಶ. ೧೬೧೮ಕ್ಕೆ ಸರಿಹೊಂದುತ್ತದೆ. ಈ ಶಾಸನವು ಗಣಪತಿ ಶಾರದೆಯರ ಸ್ತುತಿಗಳಿಂದ ಪ್ರಾರಂಭ ವಾಗಿದೆ. ಮುದವಳನಾಡಿನ ಕಲ್ಲೇಶ್ವರ ದೇವಾಲಯವನ್ನು ದೇಶ ಕುಲಕರಣಿ ನರಸಪ ಕೊಂಡಪನ ಸೋದರನ ಮಗ ಹೊನ್ನಪನು ಜೀರ್ಣೋದ್ದಾರ ಮಾಡಿದುದನ್ನು ಈ ಶಾಸನದಲ್ಲಿ ದಾಖಲಿಸಿದೆ.
ಈ ಶಾಸನದಲ್ಲಿ ಮುಧೋಳು ಗ್ರಾಮವನ್ನು ಮುದವಳ ಎಂದು ಕರೆದಿದೆ ಹಾಗೂ ಇದೊಂದು ನಾಡಾಗಿದ್ದುದನ್ನು ಗಮನಿಸಬಹುದು. ಕಲ್ಲೇಶ್ವರ ದೇವಾಲಯವು ಬಹಳಷ್ಟು ದುರಸ್ತಿಗೊಂಡಿದ್ದರೂ ನವರಂಗದ ಬಾಗಿಲುವಾಡವು ಮೇಲ್ಬಾಗದಲ್ಲಿ ಮಾತ್ರ ಕಲ್ಯಾಣ ಚಾಳುಕ್ಯ ಶೈಲಿಯನ್ನು ಉಳಿಸಿಕೊಂಡಿದ್ದು, ಮೇಲೆ ಲಲಾಟದಲ್ಲಿ ಶಾಸನವಿದ್ದು, ೧೬೨೦ರಲ್ಲಿ ಇಬ್ರಾಹಿಂ ಆದಿಲ್ ಷಾಹನ ಆಳ್ವಿಕೆಯ ಅವಧಿಯಲ್ಲಿ ಮುದುವೊಳಲ ನಾಡಿನ ದೇಶ ಕುಲಕರ್ಣಿ ನರಸಪ್ಪ ಕೊಂಡಪ್ಪನ ಸೋದರನ ಮಗ ಅತ್ರಿಗೋತ್ರದ ಹೊನ್ನಪ್ಪನಿಂದ ಶಿವದೇವಾಲಯವನ್ನು ಜಿರ್ಣೋದ್ಧಾರ ಮಾಡಿದ ವಿಚಾರವನ್ನು ದಾಖಲಿಸುತ್ತದೆ.
ಇದರಲ್ಲಿ ಗರ್ಭಗೃಹ, ಅಂತರಾಳ ಹಾಗೂ ದುರಸ್ತಿಗೊಂಡಿರುವ ಮುಖಮಂಟಪಗಳಿವೆ. ದುರಸ್ತಿಯ ಸಮಯದಲ್ಲಿ ಕಲ್ಯಾಣ ಚಾಳುಕ್ಯರ ಶೈಲಿಯ ಸ್ತಂಭಗಳನ್ನು ಉಳಿಸಿಕೊಳ್ಳಲಾಗಿದೆ. ಇದರ ಮಧ್ಯದಲ್ಲಿ ಏಕಶಿಲಾ ನಂದಿಯಿದೆ. ಈ ದೇವಾಲಯದ ಹಿಂಭಾಗದಲ್ಲಿ ಮಹಾವೀರ ಬಸದಿ ಇದ್ದು ಸಂಗಮುರಿ ಕಲ್ಲಿನ ಆಧುನಿಕ ಶೈಲಿಯ ಪ್ರತಿಮೆಗಳನ್ನು ಹೊಂದಿದೆ.
ಮಂಟೂರಿನ ಆರೂಢ ಧಾಮ
ಮುಧೋಳ ತಾಲೂಕು ನೂರಾರು ಪ್ರವಾಸಿ ತಾಣಗಳು ಕೇಂದ್ರ ಬಿಂದು. ಮುಧೋಳ ತಾಲೂಕಿಲ್ಲಿ ಮಂಟೂರ ಗ್ರಾಮದಲ್ಲಿ ಆರೂಢರ ಮಠದ ಆವರಣದಲ್ಲಿರುವ ಪಾರ್ಕ್ ಮತ್ತು ಬೃಹದಾಕಾರದ ಶಿವನ ಮೂರ್ತಿ ಹಾಗೂ ಪಕ್ಕದಲ್ಲಿರುವ ಕೆರೆ ವಾಸಿಗರಿಗೆ ಮನೋಲ್ಲಾಸದ ಜತೆಗೆ ರೋಮಾಂಚಕ ಅನುಭವನ್ನು ನೀಡುತ್ತದೆ.
ಇದು ಮುಧೋಳದಿಂದ ಕೇವಲ ಹನ್ನೇರಡು ಕಿಲೋ ಮೀಟರ್ ದೂರಲ್ಲಿದೆ. ಮಠದ ಒಳಗೆಹೆಜ್ಜೆ ಹಾಕಿದಾಗಲೇ ಪ್ರವಾಸಿಗ ಭಕ್ತರನ್ನುಮೊದಲಾಕರ್ಷಿಸುವುದು ಮೈಷಾಸುರ ಮೂರ್ತಿ, ಆರೂಢ ಗದ್ದುಗೆ, ಪಕ್ಕದಲ್ಲೇ ಶ್ರೀ ಚಾಮುಂಡೇಶ್ವರಿದೇವಿ ಮೂರ್ತಿ, ಶಿವ ತಪ್ಪಸ್ಸಿಗೆ ಕುಳಿತಿರುವುದು, ಆರೂಢರನ್ನು ಹೊತ್ತು ನಿಂತಕೃಷ್ಣ, ಶಂಖದಲ್ಲಿಂದ ನೀರು ಹರಿಯುವ ದೃಶ್ಯ, ಸಂಗೀತ ಕಾರಂಜಿ, ಭಯಭೀತಗೊಳಿಸುವ ಭೂತ ಬಂಗಲೆ ಮ್ಯೂಸಿಯಂ, ಸ್ವರ್ಗ ಲೋದಲ್ಲಿ ಶಿವ ಪಾರ್ವತಿ, ದೇವಾನುದೇವತೆಗಳ ಸಂಗಮ, ಆನೆ,ಜಿಂಕೆ, ನರಿ, ಝೆರಾಫೆ,ಕಾಡು ಎಮ್ಮೆ, ಒಂಟೆ ಜತೆಗೆ ಗ್ರಾಮೀಣರ ಜನಜೀವನದ ಬದುಕು ಬವಣೆ ಹೇಳುವ ಮೂರ್ತಿಗಳು, ಕೃಷ್ಣರಾಧೆಯ ಕುಣಿದಾಟದ ದೃಶ್ಯದ ಸ್ತಪ್ಧ ಚಿತ್ರ ನೋಡುವುದೇ ಒಂದು ಮನಸ್ಸಿಗೆ ಹಿತವನ್ನು ನೀಡುತ್ತವೆ.
ಇದರೊಂದಿಗೆ ತ್ರೀಡಿ ಥೇಯಟರ್, ವಿಜ್ಞಾನ ಮಂದಿರ, ಗಾಜಿನ ಮನೆ ಇರುವ ಸ್ಟುಡಿಯೋದ ಚಿತ್ರವನ್ನು ನೋಡುವುದಂತೂ ರೋಮಾಂಚಕ ಮನ ಮೋಹಕವಾಗಿರುತ್ತದೆ. ಸುಂದರ, ಚಕಿತಗೊಳಿಸುವಮ್ಯೂಸಿಯಂ ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾಗಿ ಸಾಯಂಕಾಲ ಆರು ಮೂವತ್ತರವರೆಗೆ ತೆರೆದಿರುತ್ತದೆ.
ಆದ್ದರಿಂದ ಲಾಕ್‌ಡೌನ್ ತೆರವಾದ ಬೆನ್ನೆಲ್ಲಿ ಪ್ರವಾಸಿಗರು, ಭಕ್ತಾಧಿಗಳು ಮಂಟೂರಿನ ಶಿವನ ದರ್ಶನದ ಜತೆಗೆ ಮಕ್ಕಳು ಆದಿಯಾಗಿ ಕುಟುಂಬ ಸಮೇತ ಒನ್ ಡೇ ಪಿಕ್ನಿಕ್ ಆಗಿ ಮಂಟೂರಿನ ಪಾರ್ಕ್‌ಗೆ ನೋಡಲು ಆಗಮಿಸುತ್ತಿದ್ದಾರೆ. ಒಂದು ದಿನ ಪೂರ್ತಿಯಾಗಿ ತಮ್ಮ ನಿತ್ಯಜೀವನದಜಂಜಾಟವನ್ನು ಮರೆತು ಈ ಆರೂಢ ಮಠದಲ್ಲಿನ ಸುಂದರ ಸೊಬಗಿನ ಹಿತಾನುಭದೊಂದಿಗೆ ರೋಮಾಂಚಕ ಅನುಭವನ್ನು ಪಡೆದು ಸಂತೃಪ್ತರಾಗುತ್ತಾರೆ.
ಮಳಲಿಯ ಕಮೇಶ್ವರ ದೇವಸ್ಥಾನ
ಮುಧೋಳ ತಾಲೂಕಿನ ಮಳಲಿ ಗ್ರಾಮದಲ್ಲಿ ಕಲ್ಮೇಶ್ವರ ಎಂಬ ದೇವಸ್ಥಾನವಿದೆ. ಇದನ್ನು ನೆಲಮಟ್ಟದಿಂದ 12 ಅಡಿ ಕೆಳಗೆ ನಿರ್ಮಿಸಲಾಗಿದೆ. ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಇತ್ತೀಚೆಗೆ ನಿರ್ಮಿಸಲಾದ ಮುಖಮಂಟಪವನ್ನು ಒಳಗೊಂಡಿದೆ.
ಶಿವಲಿಂಗವನ್ನು ಗರ್ಭಗೃಹದಲ್ಲಿ ಇರಿಸಲಾಗಿದೆ ಮತ್ತು ಅದರ ಬಾಗಿಲುಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಮಂಟಪವು ನಾಲ್ಕು ಸುಂದರವಾಗಿ ಕೆತ್ತಿದ ಪುರಾತನ ಕಂಬಗಳನ್ನು ಹೊಂದಿದೆ. ಸ್ತಂಭದ ಮೇಲೆ ಸರಪಳಿ ಮತ್ತು ಹೂವಿನಂತಹ ಶಿಲ್ಪಗಳನ್ನು ಕೆತ್ತಲಾಗುತ್ತಿದ್ದು, ದೇವಾಲಯವನ್ನು ಇನ್ನಷ್ಟು ಸುಂದರಗೊಳಿಸಿದೆ. ದೇವಾಲಯ ಚದರ ತಳದಲ್ಲಿ ವಿನ್ಯಾಸ ಕಲ್ಯಾಣಿ ಚಾಲುಕ್ಯರ ಲಕ್ಷಣಗಳನ್ನು ಹೋಲುತ್ತದೆ.
ಮೇಲೆ ಕಪೋತ, ಕುಮುದಾ, ತ್ರಿಪಾಠಿ ಕುಮುದಾ ವಿನ್ಯಾಸ ಮಾಡಲಾಗಿದೆ. ಕಂಬಗಳ ಮಧ್ಯದಲ್ಲಿ ಕುಂಭದಂತಹ ವಿನ್ಯಾಸಗಳನ್ನು ರಚಿಸಲಾಗಿದೆ. ಮಂಟಪದ ಚಾವಣಿಯಲ್ಲಿ ತಲೆಕೆಳಗಾದ ಕಮಲದಿಂದ ಅಲಂಕರಿಸಲಾಗಿದೆ.
ದೇವಕೋಷ್ಟಗಳು ನವರಂಗದೊಂದಿಗೆ ಲಗತ್ತಿಸಲಾಗಿದೆ. ವಿಠಲ-ರುಕ್ಮಿಣಿ ಶಿಲ್ಪಗಳನ್ನು ಒಳಗೆ ಇರಿಸಲಾಗಿದೆ. ಪ್ರಾಚೀನ ಅವಧಿಗೆ ಸೇರಿದ ನವರಂಗದಲ್ಲಿ ನಾಗಶಿಲ್ಪ ಇದೆ. ಮಂಟಪದ ಮಧ್ಯದಲ್ಲಿ ನಂದಿಯನ್ನು ಸ್ಥಾಪಿಸಲಾಗಿದೆ. ದೇವಾಲಯವನ್ನು ಹಲವಾರು ಬಾರಿ ಜೀರ್ಣೋದ್ಧಾರ ಮಾಡಲಾಗಿದೆ.
ಶಿಖರವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ ಮತ್ತು ಯಾವುದೇ ಪ್ರಾಚೀನ ಲಕ್ಷಣಗಳನ್ನು ಕಾಣಲು ಸಾಧ್ಯವಿಲ್ಲ.
ಲೋಕಾಪುರ ಲೋಕೇಶ್ವರ ದೇವಾಲಯ
ಇಂದಿನ ಲೋಕಾಪುರ ಗ್ರಾಮವನ್ನು ರಾಷ್ಟ್ರಕೂಟರ ಅರಸು ಮನೆತನದ ಸಾಮಂತರಾದ ಚಲ್ಲಕೇತನ ಮನೆತನದ ಅರಸನಾದ ವಿರಂಬಕೆಯನ ದ್ವಿತೀಯ ಲೋಕಾಧಿತ್ಯ (ಲೋಕಟೆ) ನು ತನ್ನ ತಂದೆ (ವಿರಂಬಕೆ) ಯ ನೆನಪಿಗೋಸ್ಕರ ಬಂಕಾಪೂರ ಹಾಗೂ ತನ್ನ (ಲೋಕಾಧಿತ್ಯ ಹೆಸರಿನಲ್ಲಿ ಲೋಕಾಪುರವನ್ನು ಏಕಕಾಲದಲ್ಲಿ ಕ್ರಿಶ 898 ರಲ್ಲಿ ಸ್ಥಾಪಿಸಿದನು.
ಲೋಕ ಮಾಹೇಶ್ವರಿ ದೇವಾಲಯ - ಲೋಕನಾಥ ಬಸದಿ, ಲೋಕ ಸಮುದ್ರ ಸರೋವರ ಸಹ ನಿರ್ಮಿಸಿದನು ಎಂಬುದು ಲೋಕಾಪುರದ ಶಾಸನ ತಿಳಿಸುತ್ತದೆ. ಪ್ರತಿ ವರ್ಷ ಫೆಬ್ರುವರಿಯಲ್ಲಿ ಅದ್ದೂರಿ ಜಾತ್ರೆ ನಡೆಯುತ್ತದೆ.
ಚಿಂಕಾರ ವನ್ಯಜೀವಿ ಧಾಮ
ಅಭಯಾರಣ್ಯವು ಬಾಗಲಕೋಟೆ ಜಿಲ್ಲೆಯ ಬಿಳಗಿ ಮತ್ತು ಮುಧೋಳ ತಾಲೂಕುಗಳಲ್ಲಿದೆ ಮತ್ತು 96.3691 ಚದರ ಕಿಮೀ (37.2083 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ . ಅಭಯಾರಣ್ಯವು ಬಿಳಗಿಯ ಯಡಹಳ್ಳಿ ಗ್ರಾಮದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಅಭಯಾರಣ್ಯದ ದಕ್ಷಿಣ ಭಾಗದಲ್ಲಿ ಘಟಪ್ರಭಾ ನದಿ ಮತ್ತು ಉತ್ತರ ಭಾಗದಲ್ಲಿ ಕೃಷ್ಣಾ ನದಿ ಹರಿಯುತ್ತದೆ. ಅಭಯಾರಣ್ಯದಲ್ಲಿನ ಅರಣ್ಯವು 34 ಕುಟುಂಬಗಳಲ್ಲಿ 67 ಕುಲಗಳಿಗೆ ಸೇರಿದ 80 ಕ್ಕೂ ಹೆಚ್ಚು ಮರಗಳ ಜಾತಿಗಳನ್ನು ಹೊಂದಿದೆ, ಅವುಗಳಲ್ಲಿ ಮೂರು ಪ್ರಭೇದಗಳು ಪೆನಿನ್ಸುಲರ್ ಭಾರತಕ್ಕೆ ಸ್ಥಳೀಯವಾಗಿವೆ.
ಇಲ್ಲಿ ಕಂಡುಬರುವ ಮರಗಳ ಪೈಕಿ ನಾಲ್ಕು ಜಾತಿಗಳನ್ನು ದುರ್ಬಲ ಎಂದು ವರ್ಗೀಕರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ, ಯಡಹಳ್ಳಿ ವನ್ಯಜೀವಿ ಅಭಯಾರಣ್ಯವನ್ನು ಹೊರತುಪಡಿಸಿ, ಬುಕ್ಕಪಟ್ಟಣ ಚೀಂಕಾರ ವನ್ಯಜೀವಿ ಅಭಯಾರಣ್ಯದಲ್ಲಿ ಮಾತ್ರ ಚಿಂಕಾರಗಳು ದಾಖಲಾಗಿವೆ.
ಚಿಂಕಾರಗಳನ್ನು ಹೊರತುಪಡಿಸಿ, ಇಲ್ಲಿ ಕಂಡುಬರುವ ಸಸ್ತನಿಗಳಲ್ಲಿ ತೋಳಗಳು, ನರಿಗಳು, ಕಾಡು ಬೆಕ್ಕುಗಳು ಮತ್ತು ಸ್ಟ್ರಿಪ್ಡ್ ಹೈನಾಗಳು ಸೇರಿವೆ. ಇದು ಅನೇಕ ಚಿಟ್ಟೆ ಜಾತಿಗಳು, ಜೇನುನೊಣಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಜೇಡಗಳಿಗೆ ನೆಲೆಯಾಗಿದೆ.
ಹಾಗೂ ಮಳೆಗಾಲದಲ್ಲಿ ಇಲ್ಲಿನ ಸ್ವಾಭಾವಿಕ ನೀರಿನ ಝರಿಗಳು, ಚಿಂಕಾರಗಳು ಮತ್ತು ಸಣ್ಣ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಜುಲೈನಿಂದ ನವೆಂಬರ್ ವರೆಗೂ ಭೇಟಿ ನೀಡಲು ಈ ಸ್ಥಳ ಸೂಕ್ತವಾಗಿದೆ.
ಮುದ್ದಾಪುರದ ಯದುರೇಶ್ವರ ಶಿವ ಮಂದಿರ.
ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಪುರಾತನ ವಾಸ್ತುಶಿಲ್ಪ ಕಲೆಯ ಅನುಸಾರ ನಿರ್ಮಾಣವಾಗಿರುವ ಯದುರೇಶ್ವರ ಶಿವ ಮಂದಿರ. ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಸಿಮೆಂಟ್, ಕಬ್ಬಿಣವನ್ನು ಬಳಸದೇ ಕಟ್ಟಲಾಗಿದ್ದು, ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.
ಈ ಅತ್ಯಾಕರ್ಷಕ ಯದುರೇಶ್ವರ ಶಿವನ ದೇವಾಲಯ ಲೋಕಾರ್ಪಣೆಗೊಂಡು ಮೂರು ವರ್ಷಗಳಾಗಿವೆ. ರಾಜಸ್ಥಾನದ ಬನ್ನಿ ಪಹಾರಪುರದ ಪಿಂಕ್ ಕಲ್ಲಿನಲ್ಲಿ ಕೆತ್ತಿರುವ ಅದ್ಭುತ ಕಲಾ ಚಿತ್ರಗಳು ಪ್ರವಾಸಿಗರು ಹಾಗೂ ಭಕ್ತರ ಮನ ಸೂರೆಗೊಳ್ಳುತ್ತಿದೆ . ಮಂದಿರದ ಕಂಬಗಳು, ಮೇಲ್ಬಾವಣಿಯಲ್ಲಿ ಕುಸುರಿ ಕಲೆ ಅರಳಿದೆ. ರಾಜಸ್ಥಾನದಲ್ಲೇ ಮಂದಿರದ ಕಂಬಗಳನ್ನು ಕೆತ್ತಿಸಿಕೊಂಡು ಇಲ್ಲಿಗೆ ತರಲಾಗಿದೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ನರ್ಮದಾ ನದಿ ತಟದಿಂದ ಶಿವಲಿಂಗವನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಾರ್ಖಾನೆ ಹಾಗೂ ವಸತಿ ಸಮುಚ್ಚಯದ ಮಧ್ಯೆ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಅಹ್ಮದಬಾದ್ ನಗರದ ಇಂಜಿನಿಯರ್ ಸಿ.ಬಿ. ಸೋಮಾಪುರ ವಿನ್ಯಾಸ ಮಾಡಿದ್ದಾರೆ.
ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ಉದ್ಯಾನ 11,700 ಚದುರ ಅಡಿಗಳಲ್ಲಿ ಮಂದಿರದ ಕಟ್ಟಡವನ್ನು ಕೇವಲ 15ತಿಂಗಳಲ್ಲಿ ಪೂರ್ಣಗೊಳಿಸಿದ್ದಾರೆ . ಅಲ್ಲದೆ ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗಿದ್ದು , ಹೂ ಗಿಡ, ಹಚ್ಚಹಸುರಿನ ಉದ್ಯಾನವನ ಕಣ್ಮನ ಸೆಳೆಯುತ್ತದೆ.
ಯದುವೇಶ್ವರ ಶಿವ ದೇವಾಲಯಕ್ಕೆ ಮಾರ್ಗ ಬೆಂಗಳೂರಿಂದ ಬರುವವರು ನೇರವಾಗಿ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ಧಾರವಾಡ ಮೂಲಕ ಜಮಖಂಡಿ ರಸ್ತೆ ಮಾರ್ಗವಾಗಿ ಬರಬೇಕು. ದಾರಿ ಮಧ್ಯೆ ಲೋಕಾಪುರ ಬಳಿಯ ಯಾದವಾಡ ರೋಡ್ ಕಡೆ ಟರ್ನ್ ತೆಗೆದುಕೊಳ್ಳಬೇಕು. ಲೋಕಾಪುರ ಯಾದವಾಡ ರಸ್ತೆ ಮಾರ್ಗ ಮಧ್ಯೆಯ ಜೆಕೆ ಕಾರ್ಖಾನೆ ಆವರಣದಲ್ಲಿ ಈ ದೇವಸ್ಥಾನ ಇದೆ.
ನೆಲಗುಡಿ ಮಹಾದೇವ ಮಂದಿರ, ಮುಧೋಳ
ಇಡೀ ಮುಧೋಳ ತಾಲ್ಲೂಕು ಪ್ರದೇಶವು ಅನೇಕ ಸುಂದರ ದೇವಾಲಯಗಳಿಗೆ ಸಾಕ್ಷಿಯಾಗಿದೆ. ಹೆಚ್ಚಿನ ದೇವಾಲಯಗಳು ಶಿವ ಧರ್ಮಕ್ಕೆ ಸೇರಿದವು. ಅವುಗಳಲ್ಲಿ ಮುಧೋಳ ನಗರದ ಮಹಾದೇವ್ ದೇವಾಲಯ ಪ್ರಸಿದ್ಧವಾಗಿದೆ. ಸ್ಥಳೀಯವಾಗಿ ಇದನ್ನು ನೆಲಗುಡಿ ಮಹಾದೇವ್ ಎಂದು ಕರೆಯಲಾಗುತ್ತದೆ. ಇದು ಭೂಗತ ವಾಸ್ತುಶಿಲ್ಪದ ವೈಭವಕ್ಕೆ ಹೆಸರುವಾಸಿಯಾಗಿದೆ.
ಈ ದೇವಾಲಯವು ಈ ಪ್ರದೇಶದ ಅತ್ಯಂತ ಹಳೆಯ ದೇವಾಲಯವಾಗಿದ್ದು, ಇದು ಚಾಲುಕ್ಯರು ಮತ್ತು ರಾಷ್ಟ್ರಕೂಟರ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಹೋಲುತ್ತದೆ. ದೇವಾಲಯದ ಎಲ್ಲಾ ಭಾಗಗಳನ್ನು ಸುಂದರವಾಗಿ ಕೆತ್ತಿದ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಕಂಬಗಳು ಮತ್ತು ಮಹಡಿ ಮೇಲೆ ಕೆತ್ತಿದ ವಿನ್ಯಾಸಗಳು ಪಟ್ಟದಕಲ್ಲು ಮತ್ತು ಐಹೊಳೆಯ ಕೆಲವು ಬಾದಾಮಿ ಚಾಲುಕ್ಯರ ದೇವಾಲಯಗಲನ್ನು ಹೋಲುತ್ತವೆ.