Inspirational story: ಕೋಟಿ ಕೊಟ್ಟರೂ ಪಾದ ಮುಟ್ಟಲಾರೆ ಎಂದ ಅಂಗಡಿಯವನ ಸ್ಪೂರ್ತಿದಾಯಕ ಕಥೆ


ಹೊಸ ಚಪ್ಪಲಿ ಕೊಳ್ಳಲೆಂದು ಪ್ರತಿಷ್ಠಿತ ಶೋರೂಮ್ ಒಂದಕ್ಕೆ ಒಬ್ಬ ವ್ಯಕ್ತಿ ಹೋಗುತ್ತಾನೆ. ಅಲ್ಲಿನ ಸೇಲ್ಸ್ ಮನ್ ಅವನಿಗೆ ಬೇರೆ ಬೇರೆ ರೀತಿಯ, ಹೊಸ ಹೊಸ ನಮೂನೆಯ ಚಪ್ಪಲಿಗಳನ್ನು ತೋರಿಸುವನು. ಆದರೆ ಕೊಳ್ಳಲು ಹೋದ ಆ ಗಿರಾಕಿಗೆ ಸೈಜ್ ಸರಿ ಇದ್ದರೆ ಚಪ್ಪಲಿ ಇಷ್ಟವಾಗುತ್ತಿರಲಿಲ್ಲ, ಇಷ್ಟವಾದ ಚಪ್ಪಲಿಗಳ ಸೈಜ್  ಸರಿ ಹೊಂದುತ್ತಿರಲಿಲ್ಲ. ಆದರೂ ಆ ಸೇಲ್ಸ್ ಮನ್  ತಾಳ್ಮೆಯಿಂದ ಇನ್ನೂ ಹೊಸ ಹೊಸ ಬೇರೆ ವಿಧದ ಚಪ್ಪಲಿಗಳನ್ನು ತೋರಿಸುತ್ತಾನೆ.

ಅಷ್ಟರಲ್ಲಿ ಹೊರಗಡೆ ಅಂಗಡಿಯ ಮುಂದೆ ದೊಡ್ಡ ಕಾರೊಂದು  ಬಂದು ನಿಲ್ಲುತ್ತದೆ. ಆ ಕಾರಿನಿಂದ ಒಬ್ಬ ವ್ಯಕ್ತಿ ಗಂಭೀರವಾಗಿ  ಇಳಿದು  ಬರುತ್ತಿದ್ದಂತೆ ಅಂಗಡಿಯಲ್ಲಿದ್ದ ಕೆಲಸದವರೆಲ್ಲರೂ ಎದ್ದುನಿಂತು ನಮಸ್ಕರಿಸಿದರು. ಆ ವ್ಯಕ್ತಿಯು ಮುಗುಳ್ನಕ್ಕು, ಗಲ್ಲಾ ಪೆಟ್ಟಿಗೆ ಕಡೆಗೆ ಹೋಗಿ ಅಲ್ಲಿದ್ದ ದೇವರ ಫೋಟೋಗೆ ಕೈ ಮುಗಿದು ಅಲ್ಲಿ ಕುಳಿತು ತನ್ನ ಕೆಲಸದಲ್ಲಿ ಮಗ್ನನಾಗುತ್ತಾನೆ.

ಆಗ ಚಪ್ಪಲಿ ಕೊಳ್ಳಲು ಬಂದ ಆ ಗಿರಾಕಿ ತನಗೆ ಚಪ್ಪಲಿ ತೋರಿಸುತ್ತಿದ್ದವನನ್ನು ಅವರು ನಿಮ್ಮ ಯಜಮಾನರಾ ? ಎಂದು ಕೇಳಲು ಅವನು ಹೌದು ಅವರೇ ನಮ್ಮ ಯಜಮಾನ್ರು. ಅವರಿಗೆ ಇಂತಹ ಐದಾರು ಶೋರೂಮುಗಳಿವೆ ಎಂದು ಮಾತಾಡುತ್ತಲೇ ಮತ್ತೊಂದು ಜೊತೆ ಚಪ್ಪಲಿ ತೋರಿಸಿದನು. ಅದನ್ನು ನೋಡುತ್ತಿದ್ದಂತೆ ಅದು ಸ್ವಲ್ಪ ಒಪ್ಪಿಗೆಯಾಗುವಂತೆನ್ನಿಸಿತು ಆದರೆ size ಸ್ವಲ್ಪ ಹೆಚ್ಚು- ಕಮ್ಮಿ ಅನಿಸುತ್ತಿತ್ತು. ಆ ಜೊತೆ ಗಿರಾಕಿಗೆ ಇಷ್ಟವಾಯಿತೆಂದು ಅವನಿಗೆ ಅನ್ನಿಸಿತೇನೋ ಹೇಗಾದರೂ  ಮಾಡಿ ಆ ಚಪ್ಪಲಿಗಳನ್ನು ಅವನ ಮನಸೊಪ್ಪಿಸಿ ಮಾರುವುದಕ್ಕೆ ಪ್ರಯತ್ನ ಪಡುತ್ತಿದ್ದನು.

ಆ ಜೊತೆ ಸ್ವಲ್ಪ ಬಿಗಿಯಾಗುತ್ತಿರುವುದಲ್ಲಾ ಎನ್ನುತ್ತಿದ್ದಂತೆ "ಇಲ್ಲ ಸರ್.. ಅದು ನಿಮಗೆ ಕರೆಕ್ಟ್ ಸೈಜ್, ಸರಿಯಾಗಿದೆ ಎಂದು ಮತ್ತೆ ಮತ್ತೆ ಬಲವಂತ ಪಡಿಸುತ್ತಿದ್ದನು. ಇದನ್ನೆಲ್ಲಾ ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ಗಮನಿಸುತ್ತಿದ್ದ ಯಜಮಾನ ಎದ್ದು ಬಂದು ಆ ಗಿರಾಕಿಯ ಮುಂದೆ ಕೆಳಗೆ ಕುಳಿತುಕೊಂಡು ಸ್ವಲ್ಪ ನಿಮ್ಮ ಕಾಲುಗಳನ್ನು ಕೆಳಗಿಡಿರಿ ಎಂದು ಅವರ ಕಾಲನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಆ ಚಪ್ಪಲಿಗಳನ್ನು ತೊಡಿಸಿದರು.  ಆಗ ಆ ಗಿರಾಕಿಗೆ ವಯಸ್ಸಿನಲ್ಲೂ ಅಂತಸ್ತಿನಲ್ಲೂ ದೊಡ್ಡವರಾದ ಆ ಯಜಮಾನ ಇವನ ಕಾಲು ಹಿಡಿದು ಚಪ್ಪಲಿ ತೊಡಿಸುತ್ತಿದ್ದಂತೆ  ತೀರಾ ಮುಜುಗರವೆನಿಸಿತು.

'ಪರವಾ ಇಲ್ಲ ನಾನೇ ಹಾಕಿಕೊಳ್ಳುತ್ತೇನೆ' ಎಂದು ಹೇಳುತ್ತಿದ್ದರೂ ಕೇಳದೇ ಎರಡೂ ಕಾಲುಗಳಿಗೆ ಚಪ್ಪಲಿ ತೊಡಿಸಿ, ಒಂದು ಸಲ ನಡೆದು ನೋಡಿರಿ, ನಿಮಗೆ ಕಮ್ಫರ್ಟ್ ಎನಿಸದಿದ್ದರೆ ಬೇರೊಂದು ಜೊತೆಯನ್ನು ನೋಡುವಿರಂತೆ ಎಂದರು.  ಆದರೆ ಆ ಜೊತೆ ಸ್ವಲ್ಪ ಹೆಚ್ಚು ಕಡಿಮೆ ಸರಿ ಎನಿಸುವಂತಿತ್ತು.  ಬಿಲ್ಲನ್ನು ಕೊಟ್ಟ ನಂತರ ಅವನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಓನರ್ ಮುಂದಿಡುತ್ತಾನೆ.  "ಯಜಮಾನರೆ ನೀವು ಇಷ್ಟು ದೊಡ್ಡ ಸ್ಥಿತಿಯಲ್ಲಿದ್ದರೂ, ಹಲವಾರು ಅಂಗಡಿಗಳ ಒಡೆಯರಾಗಿದ್ದರೂ ನೀವು ಹೀಗೆ ನಮ್ಮಂಥವರ ಕಾಲುಗಳಿಗೆ ಚಪ್ಪಲಿ ತೊಡಿಸುತ್ತೀರಲ್ಲಾ!!" 

ಆಗ ಆ ವ್ಯಕ್ತಿ ನಸುನಗುತ್ತಾ ಚಿಲ್ಲರೆ ವಾಪಸ್ ಕೊಡುತ್ತಾ "ಇದು ನನ್ನ ವೃತ್ತಿ, ನನಗೆ ಅನ್ನ ನೀಡುವ ದೈವ. ನೀವು ಕೋಟಿ ರೂಪಾಯಿ ಕೊಡುವೆನೆಂದರೂ ನಾನು ಅಂಗಡಿಯ ಹೊರಗೆ ನಿಮ್ಮ ಪಾದ ಮುಟ್ಟಲಾರೆ,
ಹಿಡಿಯಲಾರೆ. ಆದರೆ ಇಲ್ಲಿ ಅಂಗಡಿಯೊಳಗೆ ನೀವು ಏನೂ ಕೊಡದಿದ್ದರೂ ನಿಮ್ಮ ಪಾದ ಹಿಡಿಯಲು ಹಿಂಜರಿಯಲಾರೆ."
ಆಗ ಆ ಗಿರಾಕಿಗೆ ನಿಜಕ್ಕೂ ಆಶ್ಚರ್ಯವೆನ್ನಿಸಿತು. ಎಂತ ಮೇರು ವ್ಯಕ್ತಿತ್ವ!

ನಾವು ಮಾಡುವ ಕೆಲಸ ಸಣ್ಣದೋ ದೊಡ್ಡದೋ ಎಂಬುದು ಮುಖ್ಯವಲ್ಲ. ನ್ಯಾಯಬದ್ಧವಾದ ಎಂತಹುದೇ ಕೆಲಸವಾದರೂ ನಾವು ಮಾಡುವ ಕೆಲಸದ ಮೇಲಿನ ಗೌರವ, ನಿಯತ್ತು ಕಡಿಮೆಯಾಗಬಾರದು  ಮತ್ತು ನಾಚಿಕೆಪಡುವ, ಹಿಂಜರಿಯುವ, ಮುಜುಗರಪಟ್ಟುಕೊಳ್ಳುವ
ಅವಶ್ಯಕತೆಯೇ ಇರಬಾರದು .
ಯಾವತ್ತೂ ನಾ(ನೀ)ವು ಮಾಡುವ 
ವೃತ್ತಿಗೆ ಅವಮಾನಿಸದಿರಿ, ಅಸಹ್ಯಪಡದಿರಿ.
ನವೀನ ಹಳೆಯದು