Farmer Protest: ಫಲವತ್ತ ಕೃಷಿ ಭೂಮಿ ಉಳಿವಿಗಾಗಿ ಮುಂದುವರೆದ ಮಾಲಾಪೂರ ಗ್ರಾಮಸ್ಥರ ಹೋರಾಟ.

ಮುಧೋಳ: ಮಾಲಾಪೂರ ಗ್ರಾಮದ ಮಾಲ್ಕಿ ಜಮೀನುಗಳನ್ನು ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗೆ ಕಾಯ್ದಿರಿಸದಂತೆ ಮಾಲಾಪೂರ ಗ್ರಾಮದ ರೈತರು ಈಗಾಗಲೇ ಅನೇಕ ಬಾರಿ ಹೋರಾಟ ಮಾಡಿದ್ದಾರೆ. ಇವುಗಳು ಯಥಾವತ್ತಾಗಿ ಉಳಿಯಬೇಕೆಂಬುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ ಎಂದು ರೈತ ಮುಖಂಡ ಬಸವಂತ ಕಾಂಬಳೆ ಹೇಳಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋರಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಯಾವುದೇ ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಗ್ರಾಮದ ರೈತ ಮುಖಂಡ ಭೀಮಪ್ಪ ಕಿತ್ತೂರ ಮಾತನಾಡಿ, ರಿ.ಸ.ನಂ. 52 ರಿಂದ 58 ರವರೆಗೆ ಕೈಗಾರಿಕೆ ಉಪಯೋಗಕ್ಕೆ 59 ರಿಂದ 69 ಮತ್ತು 75 ರಿಂದ 78 ವರೆಗಿನ ಜಮೀನುಗಳನ್ನು ವಸತಿ ಮತ್ತು ವಾಣಿಜ್ಯ ಉಪಯೋಗಕ್ಕಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಮಹಾಯೋಜನೆ ನೀಲನಕ್ಷೆಯಲ್ಲಿ ಕಾಯ್ದಿರಿಸಿರುವುದು ಫಲವತ್ತಾದ ಭೂಮಿಗಳನ್ನು ಹಾಗೂ ರೈತರನ್ನು ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ.

ಆದ್ದರಿಂದ ಈ ಭೂಮಿಗಳನ್ನು ಈ ಯೋಜನೆಯಿಂದ ಕೈಬಿಡಬೇಕೆಂದು ಎಂದು ಒತ್ತಾಯಿಸಿದರು. ಒಂದು ವೇಳೆ ನಮ್ಮ ಬೇಡಿಕೆಯನ್ನು ಮನ್ನಿಸದಿದ್ದರೆ ನಗರ ಯೋಜನಾ ಪ್ರಾಧಿಕಾರದ ಕೇಂದ್ರ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರಲ್ಲದೇ ಕ್ಷೇತ್ರದ ಶಾಸಕರು ಈ ಕುರಿತು ಫಲವತ್ತಾದ ಕೃಷಿ ಭೂಮಿಯನ್ನು ಸಂರಕ್ಷಿಸುವಲ್ಲಿ ರೈತರೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗ್ಡೆ ಮಾತನಾಡಿ, ಈ ಹಿಂದೆ ದಿ. 3-6-2021 ರ ತಾತ್ಕಾಲಿಕ ಮಹಾಯೋಜನೆಯಲ್ಲಿ ಸದರಿ ಜಮೀನುಗಳನ್ನು ಕೃಷಿ ವಲಯ ಎಂದೇ ಗುರುತಿಸಿದ್ದು, ಸ್ಥಳೀಯ ಅಧಿಕಾರಸ್ಥರ ಮತ್ತು ಬಂಡವಾಳಶಾಹಿಗಳ ಒತ್ತಡದಿಂದ ಅಂತಿಮ ಅನುಮೋದನೆಯಲ್ಲಿ ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಮೀಸಲಿಸುವ ಹುನ್ನಾರ ನಡೆಸಿದ್ದು, ಇದಕ್ಕೆ ಸ್ಥಳೀಯ ನಗರ ಯೋಜನಾ ಪ್ರಾಧಿಕಾರವೂ ಸಹ ಬೆಂಬಲಿಸಿದೆ.

ಇದನ್ನರಿತ ಮಾಲಾಪೂರ ಗ್ರಾಮಸ್ಥರು ತಮ್ಮ ಮಾಲ್ಕಿ ಜಮೀನುಗಳನ್ನು ಯಥಾವತ್ತಾಗಿ ಉಳಿಸಬೇಕೆಂದು ಸ್ಥಳೀಯ ಯೋಜನಾ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸಲಾಗಿದೆ. ಅದರಂತೆ ರೈತರ ಬದುಕಿನ ಭಾಗವಾಗಿರುವ ಜಮೀನುಗಳನ್ನು ರೈತರಿಂದ ಕಸಿದುಕೊಳ್ಳಬಾರದು, ಹಾಗೂ ಮಹಾಯೋಜನೆಯ ಅಂತಿಮ ಅನುಮೋದನೆಗಾಗಿ ಸಲ್ಲಿಸುವ ಯೋಜನೆಯಲ್ಲಿ ಸದರಿ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕಾಯ್ದಿರಿಸಬಾರದೆಂದು ಪ್ರಾಧಿಕಾರದ ಸರ್ವ ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿ ಠರಾವು ಪಾಸ ಮಾಡಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಹನಮಂತ ಶಿಂಧೆ ಮಾತನಾಡಿ, ಕೆಆಯ್‍ಡಿಬಿ ನಿಯಮಾವಳಿಗಳ ಪ್ರಕಾರ ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕೆಗಳನ್ನು ಸ್ಥಾಪಿಸಲು ತೆಗೆದುಕೊಳ್ಳಬಾರದೆಂಬ ನಿಯಮವಿದ್ದು, ಈ ನಿಯಮಗಳನ್ನು ಅಧಿಕಾರಿಗಳು ಗಾಳಿಗೆ ತೂರಿ ತಮಗೆ ಬೇಕಾದ ರೀತಿ ಅನುಕೂಲ ಮಾಡಿಕೊಳ್ಳುತ್ತದ್ದಾರೆ. ಆದ್ದರಿಂದ ಕೈಗಾರಿಕೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುವ ಮೂಲಕ ರೈತರನ್ನು ಹೆದರಿಸುವ ಈ ಕಾರ್ಯವನ್ನು ತಡೆಯಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ನೀಲನಕ್ಷೆಯನ್ನು ಪ್ರದರ್ಶಿಸಲಾಯಿತು. ರೈತ ಮುಖಂಡರಾದ ಸಂತೋಷ ಕದಂ, ಸದಾಶಿವ ತಳವಾರ, ಈರಣ್ಣಾ ಅವರಾದಿ, ಶಾಂತಾ ಕಿತ್ತೂರ, ರೂಪಾ ಕೇದಾರ ಬದಾರಿ ಉಪಸ್ಥಿತರಿದ್ದರು.

ನವೀನ ಹಳೆಯದು