ಮುಧೋಳ ಮಹಾರಾಜರಿಂದ ಸ್ವರ ಸಾಮ್ರಾಟ ಬಿರುದು ಪಡೆದ ಇವರ ಬಗ್ಗೆ, ಸ್ವತಃ ಡಾ.ರಾಜಕುಮಾರ್ ಸಿನೆಮಾ ಮಾಡುತ್ತಾರೆ.

Shehnai musical legend

ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು, ನೋಡಯ್ಯಾ. ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು, ನೋಡಯ್ಯ. ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು. – ಉರಿಲಿಂಗದೇವ ಎಂಬ ಉರಿಲಿಂಗಪೆದ್ದಿಗಳ ವಚನದಂತೆ ಅಸಾಮಾನ್ಯ ಬದುಕು ಬದುಕಿದ ಕೆಲವು ಜನರು ತಾವು ಈ ಭೂಮಿಯಿಂದ ಮರೆಯಾಗಿ ಹೋದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವವರು.

ಸನಾದಿ ಅಪ್ಪಣ್ಣರು

ಅಂಥವರ ಸಾಲಿಗೆ ಸೇರುವವರಲ್ಲಿ ‘ಶಹನಾಯಿ ಸಾಮ್ರಾಟ’ನೆಂದು ಹೆಸರುಗಳಿಸಿದ ಸನಾದಿ ಅಪ್ಪಣ್ಣನವರು ಒಬ್ಬರು. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕು ಪ್ರತಿಭಾವಂತ ಸಾಧಕರ ಜನ್ಮಭೂಮಿ. 

ಅಪರೂಪದ ಸಾಧಕರ ಸಾಲಿಗೆ ಸೇರುವ ಅಪ್ರತಿಮ ಸಾಧಕ ಸನಾದಿ ಅಪ್ಪಣ್ಣ. ಸನಾದಿ ಅಪ್ಪಣ್ಣನವರು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಕ್ರಿ.ಶ ೧೮೭೬ ರಲ್ಲಿ ಸಾಬಣ್ಣ ವಾಲಗದ ಮತ್ತು ಹನುಮವ್ವ ದಂಪತಿಗಳ ಮಗನಾಗಿ ಜನಿಸಿದರು. ಇವರ ಸೋದರ ಬಾಬಣ್ಣ, ಹೆಂಡತಿ ಮುಧೋಳ ತಾಲೂಕಿನ ಲೋಕಾಪುರದ ಪೀರವ್ವ.

ಅಪ್ಪಣ್ಣನವರು ಜನಿಸಿದಾಗ ವಾಲಗದ ಅವರದು ಸ್ಥಿತಿವಂತ ಕುಟುಂಬ. ಸರ್ಕಾರದಿಂದ ಸಾಕಷ್ಟು ಉಂಬಳಿ ಭೂಮಿಯನ್ನು ಪಡೆದಿದ್ದ ಇವರ ಕುಟುಂಬ, ಕೊರವರ ಪಾರಂಪರಿಕ ವೃತ್ತಿಗಳಲ್ಲಿ ಬಹುಮುಖ್ಯವಾದ ಮತ್ತು ತಮ್ಮ ಕುಟುಂಬದ ಕುಲಕಸುಬಾಗಿ ಬಂದ ಶಹನಾಯಿ ವೃತ್ತಿಯನ್ನು ಮುಂದುವರಿಸಿದ್ದರು. ಸಂಗೀತ ವಾದ್ಯಗಳಲ್ಲಿ ಶಹನಾಯಿ ಅತ್ಯಂತ ಕಷ್ಟಕರವಾದ ವಾದ್ಯ. ಇದನ್ನು ನುಡಿಸುವಾಗ ಕಲಾವಿದರು ತಮ್ಮ ಎದೆಯ ತಿದಿಯೊತ್ತಿ ಅವುಗಳಿಗೆ ಉಸಿರು ತುಂಬಿ ಸನಾದಿಯಲ್ಲಿ ಕೊರೆದಿರುವ ಹತ್ತು ರಂಧ್ರಗಳ ಮೇಲೆ ತಮ್ಮ ಹತ್ತು ಬೆರಳುಗಳನ್ನು ಒತ್ತಿ ಅಗತ್ಯಕ್ಕೆ ತಕ್ಕಂತೆ ಧ್ವನಿ ಹೊರಡಿಸ ಬೇಕಾಗುತ್ತದೆ.

ಇದು ಏಕಕಾಲಕ್ಕೆ ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಕೇಳುತ್ತದೆ.ಅಪ್ಪಣ್ಣನವರು ಇಂತಹ ಕಷ್ಟಕರವಾದ ಶಹನಾಯಿ ವಾದನವನ್ನು ಅತ್ಯಂತ ಶೃದ್ಧೆಯಿಂದ ಕಲಿತು ತಮ್ಮ ವೃತ್ತಿಯನ್ನು ಮುಂದುವರೆಸಿದರು.

ಅಪ್ಪಣ್ಣನವರ ಅಣ್ಣನಾದ ಬಾಬಣ್ಣನವರು ಸಹ ಸನಾದಿ ನುಡಿಸುವದರಲ್ಲಿ ಆಸಕ್ತಿ ಹೊಂದಿದ್ದರೂ ಸಹ ಅವರಿಗೆ ನಾದ ಸರಸ್ವತಿ ಒಲಿಯಲಿಲ್ಲ. ಅಣ್ಣನಿಗೆ ಒಲಿಯದ ಕಲಾಸರಸ್ವತಿ ಅಪ್ಪಣ್ಣನವರಿಗೆ ಒಲಿದಳು.

ಆಗ ಬಾಬಣ್ಣನವರು ತಮ್ಮನಿಗೆ ಪ್ರೋತ್ಸಾಹ ನೀಡಿ ಅವರ ಸಾಧನೆಗೆ ಕಾರಣಿಕರ್ತರಾದರು. ಅಪ್ಪಣ್ಣನವರು ಪ್ರತಿದಿನ ನಸುಕಿನಲ್ಲಿ ಮತ್ತು ಸಾಯಂಕಾಲ ಬೀಳಗಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಮತ್ತು ಶಿವಯೋಗಿ ಸಿದ್ದರಾಮರ ದೇವಸ್ಥಾನದಲ್ಲಿ ಕುಳಿತು ನಿರಂತರವಾಗಿ ಶಹನಾಯಿ ವಾದನದ ಅಭ್ಯಾಸ ಮಾಡುತ್ತಿದ್ದರು.

ಬೀಳಗಿಯ ಜನಕ್ಕೆ ಬೆಳಕು ಹರಿಯುತ್ತಿದ್ದದ್ದು ಅಪ್ಪಣ್ಣನವರ ಶಹನಾಯಿಯ ಧ್ವನಿ ಕೇಳಿದ ನಂತರವೇ. ಬೀಳಗಿಯಲ್ಲಿ ಸೂರ್ಯನ ಉದಯ, ಹಕ್ಕಿಗಳ ಕಲರವ, ದನಗಳ ಅಂಬಾ ಎಂಬ ಕೂಗು ಪ್ರಾರಂಭವಾಗುತಿದ್ದದ್ದು ಅಪ್ಪಣ್ಣನವರ ಶಹನಾಯಿ ವಾದನದಿಂದ.

ಸನಾದಿ ಅಪ್ಪಣ್ಣ ಅವರ ಆಧಾರಿತ ಕಾದಂಬರಿ ಸಿನಿಮಾ ಆಗಿ ನಿರ್ಮಾಣವಾಯಿತು

‘ಇಡೀ ಬೀಳಗಿಯೇ ಇವರ ರಾಗವನ್ನು ಶಾಂತಚಿತ್ತವಾಗಿ ಕೇಳುತ್ತಿತ್ತು’ ಎಂದು ಇವರನ್ನು ಕಣ್ಣಾರೆ ಕಂಡ ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರು ಹೇಳಿದ್ದಾರೆ. ಇವರ ಬಗ್ಗೆ ಅಪಾರ ಗೌರವಿವದ್ದ ಕೃಷ್ಣಮೂರ್ತಿ ಪುರಾಣಿಕರು ಅಪ್ಪಣ್ಣನವರ ಸನಾದಿ ವಾದನದ ಚಿತ್ರಣವನ್ನು ತಮ್ಮ ಕಾದಂಬರಿಗಳಲ್ಲಿ ನೀಡಿದ್ದಾರೆ. ಜೊತೆಗೆ ಇವರ ಜೀವನವನ್ನು ಆಧರಿಸಿ ‘ಸನಾದಿ ಅಪ್ಪಣ್ಣ’ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಇದೇ ಕಾದಂಬರಿಯನ್ನು ಆಧರಿಸಿ ವಿಜಯ್ ಅವರ ನಿರ್ದೇಶನದಲ್ಲಿ ೧೯೭೭ ರಲ್ಲಿ “ಸನಾದಿ ಅಪ್ಪಣ್ಣ” ಚಲನಚಿತ್ರ ನಿರ್ಮಾಣಗೊಂಡಿದೆ.

ಡಾ.ರಾಜಕುಮಾರ, ಜಯಪ್ರದಾ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಡಾ.ರಾಜಕುಮಾರ ಅಪ್ಪಣ್ಣನವರ ಪಾತ್ರದಲ್ಲಿ ನಟಿಸಿದ್ದು ಈ ಚಲನಚಿತ್ರದ ಪ್ರಸಿದ್ಧತೆಯನ್ನು ಪಡೆದ ‘” ಕರೆದರೂ ಕೇಳದೆ ” ಎಂಬ ಇಂಪಾದ ಹಾಡಿಗೆ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ನುಡಿಸಿದ್ದಾರೆ.

ಸಂಗೀತ ಕಲಿತ ಪ್ರಸಂಗ

ಅಪ್ಪಣ್ಣನವರು ಮೊದಲು ದಕ್ಷಿಣಾದಿ ಸಂಗೀತವನ್ನು ಅಭ್ಯಾಸ ಮಾಡಿದರು. ಪ್ರತಿವರ್ಷ ಅವರು ಮಿರಜ್ ನಗರದ ಸಂತ ಮೀರಾಸಾಬ್ ರ ಉರುಸಿಗೆ ಹೋಗುತ್ತಿದ್ದರು. ಅಲ್ಲಿಗೆ ಹೋದಾಗ ಉರುಸಿಗೆ ಬರುತ್ತಿದ್ದ ಉಸ್ತಾದ ಕರೀಮ್ ರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಪ್ಪಣ್ಣನವರ ಮನಸ್ಸನ್ನು ಸೆಳೆಯಿತು. ನಂತರ ಅವರ ಹತ್ತಿರವೇ ಇವರು ಹಿಂದುಸ್ತಾನಿ ಸಂಗೀತವನ್ನು ಕಲಿತು, ಸಂಗೀತ ಲೋಕದ ಅಪ್ರತಿಮ ಸಾಧಕರೆನಿಸಿದರು.

ಎಲ್ಲೆಡೆ ಸಂಗೀತ ಪಸರಿಸಿದ ಪರಿ

ಸನಾದಿ ನುಡಿಸುವುದನ್ನು ಕಾಯಕ ಮಾಡಿಕೊಂಡು ಸಾಧನೆಯನ್ನು ಮಾಡಿದ ಅಪ್ಪಣ್ಣನವರ ಶಹನಾಯಿ ವಾದನದ ಕೀರ್ತಿ ರಾಜ್ಯದ ಸೀಮೆಯನ್ನು ದಾಟಿ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗಲಿ, ಮಿರಜ್,ಸೋಲಾಪುರ,ಜತ್ತ ಆಂಧ್ರದ ಶ್ರೀಶೈಲದವರೆಗೂ ಪ್ರಖ್ಯಾತಿಗಳಿಸಿತ್ತು.

ಮುಧೋಳ, ರಾಮದುರ್ಗ,ಜಮಖಂಡಿ,ಜತ್ತ,ಮಿರಜ್ ಕೊಲ್ಹಾಪುರ,ಸಾಂಗಲಿ, ಮಹಾರಾಜರು ತಮ್ಮ ಅರಮನೆಗೆ ಅಪ್ಪಣ್ಣನವರನ್ನು ಕರೆಸಿಕೊಂಡು ಅವರ ಶಹನಾಯಿ ವಾದನ ಕೇಳುತ್ತಿದ್ದರು. ವಾಹನ ಸೌಕರ್ಯ ಇಲ್ಲದ ಕಾಲದಲ್ಲಿ ಅಪ್ಪಣ್ಣನವರು ಕುದುರೆ ಸವಾರಿ ಮೂಲಕ ಎಲ್ಲ ಕಡೆಗೆ ತೆರಳಿ ತಮ್ಮ ಶಹನಾಯಿ ವಾದನವನ್ನು ನಡೆಸಿಕೊಡುತ್ತಿದ್ದರು.

ಅಪ್ಪಣ್ಣನವರು ಸಾರಂಗ, ದುರ್ಗಾ, ಮಾರವಾ ರಾಗಗಳಿಗೆ ಅತ್ಯಂತ ಸುಮಧುರವಾಗಿ ಶಹನಾಯಿ ನುಡಿಸುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಹೀಗೆ ಅಪ್ಪಣ್ಣ ರಾಜನಾಗದಿದ್ದರು ರಾಜರುಗಳ ಪ್ರೀತಿ ಗಳಿಸಿಕೊಂಡು ‘ಶಹನಾಯಿ ಸಾಮ್ರಾಟ’ ಎನಿಸಿಕೊಂಡರು.

ಸ್ವಾಭಮಾನಿ ಸನಾದಿ ಅಪ್ಪಣ್ಣ

ಕಲಾವಿದರು ಸ್ವಾಭಿಮಾನಿಗಳು.ಯಾವುದೇ ರೀತಿ ಆಸೆ ಆಮಿಷಗಳಿಗೆ ಒಳಗಾಗದವರು. ಅಪಮಾನ, ನಿಂದನೆಗಳನ್ನು ಸಹಿಸದವರು. ಕಲಾವಿದರಲ್ಲಿರುವ ಸ್ವಾಭಿಮಾನ,ಆತ್ಮಗೌರವ, ಅಪ್ಪಣ್ಣನವರಲ್ಲಿಯೂ ಇತ್ತು. ತಮ್ಮನ್ನು ದಾಸರಂತೆ ಕಾಣುವವರಿಗಿಂತ ಕಲೆ ಮತ್ತು ಕಲಾವಿದರನ್ನು ಆರಾಧಿಸುವ, ಪ್ರೀತಿಸುವ ಜನರಿಗೆ ಗೌರವವನ್ನು ನೀಡುತ್ತಿದ್ದರು.

ಜೀವನದಲ್ಲಿ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಒಮ್ಮೆ ಕೊಲ್ಹಾಪುರ ಮಹಾರಾಜರ ಆಮಂತ್ರಣದ ಮೇರೆಗೆ ಇವರು ಶಹನಾಯಿ ವಾದನಕ್ಕೆ ಹೊರಟಾಗ ಊರ ಶ್ರೀಮಂತರ ಮನೆಯಲ್ಲಿ ಕಾರ್ಯಕ್ರಮವಿತ್ತು. ಅವರು ಅಪ್ಪಣ್ಣನವರನ್ನು ತಮ್ಮ ಮನೆಯ ಕಾರ್ಯಕ್ರಮಕ್ಕೆ ಕರೆದರು. ಅಪ್ಪಣ್ಣನವರು ತಾವು ಕೊಲ್ಹಾಪುರ ಮಹಾರಾಜರ ಹತ್ತಿರಕ್ಕೆ ಹೊರಟ ವಿಷಯವನ್ನು ತಿಳಿಸಿದಾಗ, ಊರ ಶ್ರೀಮಂತನು ‘ಒಂದು ವೇಳೆ ನೀವು ನಮ್ಮ ಮನೆಯ ಕಾರ್ಯಕ್ರಮಕ್ಕೆ ಬರದಿದ್ದರೆ ನಿಮಗೆ ಸರ್ಕಾರ ಕೊಟ್ಟ ಉಂಬಳಿಯನ್ನು ವಾಪಸ್ ಪಡೆಯುವೆ’ ಎಂದು ದಮಕಿ ಹಾಕುತ್ತಾರೆ.

ಅಪ್ಪಣ್ಣನವರು ‘ನಾನು ಸರ್ಕಾರ ಕೊಟ್ಟ ಜಮೀನು ಹೊತ್ಕೊಂಡು ತಿರುಗುತ್ತಿಲ್ಲ, ನನ್ನ ಕಿಸೆಯೊಳಗು ಇಟ್ಕೊಂಡಿಲ್ಲ ಬೇಕಾದಂಗೆ ಮಾಡ್ರಿ. ನನಗೆ ಹೊಲಕ್ಕಿಂತ ಸನಾದಿ ಪ್ರೀತಿ ಮಾಡುವವರು ದೊಡ್ಡವರು’ ಎಂದು ಸ್ವಾಭಿಮಾನದ ಉತ್ತರ ಕೊಟ್ಟು ಅಲ್ಲಿಂದ ಕುದರೆ ಏರಿ ಕೊಲ್ಹಾಪುರಕ್ಕೆ ತೆರಳಿದರು.

ನಿಸ್ವಾರ್ಥಿ ಅಪ್ಪಣ್ಣರು

ಇತರ ಕಲಾವಿದರಂತೆ ಅಪ್ಪಣ್ಣನವರು ಸಹ ನಿಸ್ವಾರ್ಥಿ, ನಿರ್ಮೂಹಿ ವ್ಯಕ್ತಿಯಾಗಿದ್ದರು.ಕೊಲ್ಹಾಪುರ, ಜತ್ತ ಮಹಾರಾಜರು ಅಪ್ಪಣ್ಣನವರ ಕಲೆಯನ್ನು ಗೌರವಿಸಿ, ಇವರ ಶಹನಾಯಿ ವಾದನವನ್ನು ಮೆಚ್ಚಿ, ಸೇರುಗಟ್ಟಲೆ ಬೆಳ್ಳಿ ಬಂಗಾರದ ನಾಣ್ಯಗಳನ್ನು ಕೊಟ್ಟರೆ ಅಪ್ಪಣ್ಣನವರು ಜೀವನಕ್ಕೆ ಬೇಕಾದಷ್ಟು ದವಸ ಧಾನ್ಯಗಳನ್ನು ಮಾತ್ರ ಪಡೆದು ಉಳಿದದ್ದನ್ನು ಅವರಿಗೆ ಮರಳಿಸಿಕೊಡುತ್ತಿದ್ದರಂತೆ.

ಜುಗಲ್ ಬಂದಿ ಗೆದ್ದು ಮುಧೋಳ ರಾಜರಿಂದ "ಸ್ವರ ಸಾಮ್ರಾಟ" ಬಿರುದು ಪಡೆದ ಕ್ಷಣ

ಜನನಿ ಜನ್ಮಭೂಮಿಗಳು ಸ್ವರ್ಗಕಿಂತ ಮಿಗಿಲಾದವು ಎಂಬ ನುಡಿಯಂತೆ ಅಪ್ಪಣ್ಣನವರಲ್ಲಿ ತನ್ನ ಹುಟ್ಟೂರಿನ ಬಗ್ಗೆ ಅತಿಯಾದ ಪ್ರೀತಿ, ಗೌರವ. ಗುಲಾಮ ಕಾಶೀಮ ಎಂಬ ಕಲಾವಿದ ಜುಗಲ್ ಬಂದಿಯಲ್ಲಿ ಕಲಾವಿದರನ್ನು ಸೋಲಿಸಿ, ಸೋತ ಕಲಾವಿದರಿಗೆ ಅವಹೇಳನ ಮಾಡುತ್ತಿದ್ದ.

ಅವನನ್ನು ಕಂಡ ಅಪ್ಪಣ್ಣನವರು ಮೊದಲ ಬಾರಿ ಅವನ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸದೆ ಮರಳಿ ಬಂದು ಬೀಳಗಿಯ ಕಲ್ಮಠದ ಕರವೀರ ಸ್ವಾಮೀಜಿ ಅವರ ಹತ್ತಿರ ಅವನ ಅಹಂಕಾರದ ಬಗ್ಗೆ ಹೇಳುತ್ತಾರೆ.

ಸಕಲಶಾಸ್ತ್ರ ಪರಿಣಿತರಾದಂತಹ ಕಲ್ಮಠದ ಕರವೀರ ಸ್ವಾಮೀಜಿಯವರು ತಾವು ಶಹನಾಯಿ ನುಡಿಸಿ ಅಪ್ಪಣ್ಣನವರಿಗೆ ತಬಲಾ ಬಾರಿಸಲು ಹೇಳಿ, ನಂತರ ತಾವು ತಬಲಾ ಬಾರಿಸಿ ಅಪ್ಪಣ್ಣನವರಿಗೆ ಶಹನಾಯಿ ನುಡಿಸಲು ಹೇಳಿ ಸಂಗೀತ ಕಲಿಸಿ ಅಪ್ಪಣ್ಣನವರನ್ನು ಪರಪೂರ್ಣ ಕಲಾವಿದರನ್ನಾಗಿಸುತ್ತಾರೆ.

ನಂತರ ಗುಲಾಮ ಕಾಶೀಮನನ್ನು ಸೋಲಿಸಿ ಬರಲು ತಿಳಿಸಿದಾಗ, ಅಪ್ಪಣ್ಣನವರು ಅವರ ಆಶೀರ್ವಾದ ಪಡೆದು ಗುಲಾಮ್ ಕಾಶೀಮನ ಜೊತೆಗೆ ಜುಗಲ್ ಬಂದಿಗೆ ತೆರಳುತ್ತಾರೆ.

ಮಹಾಲಿಂಗಪುರದಲ್ಲಿ ಮುಧೋಳ ಮಹಾರಾಜರ ಸಮ್ಮುಖದಲ್ಲಿ ಜುಗಲ್ ಬಂದಿ ನಡೆದು ಇದರಲ್ಲಿ ಗುಲಾಮ ಕಾಶೀಮ ಸೋಲುತ್ತಾನೆ. ಅಹಂಕಾರಿ ಗುಲಾಮ ಕಾಶೀಮನನ್ನು ಅಪ್ಪಣ್ಣನವರು ಸೋಲಿಸಿದಾಗ ಅವರನ್ನು ಮೆಚ್ಚಿದ ಮುಧೋಳದ ಘೊರ್ಪಡೆ ಮಹಾರಾಜರು ಅಪ್ಪಣ್ಣನವರಿಗೆ ‘ಏನು ಬೇಕು’ ಎಂದು ಪ್ರೀತಿಯಿಂದ ಕೇಳುತ್ತಾರೆ.

ಆಗ ಊರಿನ ಬಗ್ಗೆ ಅಪಾರವಾದ ಪ್ರೀತಿ,ಗೌರವವನ್ನು ಹೊಂದಿದ್ದ ಅಪ್ಪಣ್ಣನವರು, ‘ಮಹಾರಾಜ ನನಗೆ ಏನಾದ್ರು ಕೊಡಬೇಕಂತ ನಿಮ್ಮ ಮನಸ್ಸಿನೊಳಗ ಇದ್ದರ ಬೀಳಗಿ ಊರಿನ ಸಮಸ್ತ ದೈವದ ಪರವಾಗಿ ಒಂದು ತೆಂಗಿನಕಾಯಿ ಒಡೆದ ಮ್ಯಾಲ ಮಹಾಲಿಂಗೇಶ್ವರರ ತೇರು ಎಳಿಬೇಕು. ತೇರು ಮುಂದೆ ಸಾಗುವವರೆಗೆ ಬ್ಯಾರೆ ಕಾಯಿ ಒಡಿಬಾರದು’ ಎಂದು ವಿನಂತಿಸಿಕೊಳ್ಳುತ್ತಾರೆ.

ಇವರ ಹುಟ್ಟೂರಿನ ಬಗೆಗಿನ ಪ್ರೀತಿಯನ್ನು ಮೆಚ್ಚಿಕೊಂಡ ಮುಧೋಳ ಮಹಾರಾಜ ಇವರ ಮಾತನ್ನು ನಡೆಸಿಕೊಡುವದರೊಂದಿಗೆ ಇವರಿಗೆ ‘ಶಹನಾಯಿ (ಸ್ವರ) ಸಾಮ್ರಾಟ’ ಎಂದು ಬಿರುದು ನೀಡಿ ಗೌರವಿಸುತ್ತಾರೆ.

ಇವತ್ತಿಗೂ ಅಪ್ಪಣ್ಣನವರಿಗೆ ಕೊಟ್ಟ ಮಾತಿನಂತೆ ಬೀಳಗಿ ಕಾಯಿ ಒಡೆದ ನಂತರವೇ ಮಹಾಲಿಂಗೇಶ್ವರರ ತೇರು ಸಾಗುತ್ತದೆ. ಹುಟ್ಟೂರಿನ ಬಗ್ಗೆ ಇಂಥ ಪ್ರೀತಿ ಅಭಿಮಾನ ತೋರಿಸಿದ್ದರು.

ಅಪ್ಪಣ್ಣರ ಕೊನೆಯ ದಿನಗಳು

ಇಷ್ಷೇಲ್ಲಾ ಖ್ಯಾತಿಗಳಿಸಿದ ಅಪ್ಪಣ್ಣನವರ ಕೊನೆಯ ದಿನಗಳು ಸುಖಮಯವಾಗಿರಲಿಲ್ಲ. ಓದಿ ನೌಕರಿ ಹಿಡಿದ ಮಗ ಊದಿ ಖ್ಯಾತಿಗಳಿಸಿದ ಅಪ್ಪಣ್ಣನವರನ್ನು ಕೀಳಾಗಿ ಕಂಡ. ಜೊತೆಗೆ ಕೈ ಹಿಡಿದ ಧರ್ಮಪತ್ನಿ‌ ಪೀರವ್ವನವರು ಅಕಾಲಿಕ ಮರಣ ಹೊಂದಿದರು. ಇದರಿಂದ ಅಪ್ಪಣ್ಣನವರು ಮಾನಸಿಕವಾಗಿ ನೋವನ್ನು ಅನುಭವಿಸಿದರು. ಇದೇ ನೋವಿನಲ್ಲಿ ಒಮ್ಮೆ ಕೃಷ್ಣಾ ನದಿಗೆ ಹೋಗಿ ಸ್ನಾನ ಮಾಡಿ ಬರುವಾಗ ಲಾರಿ ಬಂದು, ಇವರಿಗೆ ಹಾಯ್ದು ಅಪಘಾತದಲ್ಲಿ ೬ ಸಪ್ಟೆಂಬರ್ ೧೯೪೫ ರಲ್ಲಿ ಅಪ್ಪಣ್ಣನವರು ಇಹಲೋಕವನ್ನು ತ್ಯಜಿಸಿದರು.

ಸನಾದಿ ಅಪ್ಪಣ್ಣರ ಸಮಾಧಿ

ಅಪ್ಪಣ್ಣನವರು ಈ ನೆಲದಿಂದ ಮರೆಯಾಗಿ ಸುಮಾರು ವರ್ಷಗಳು ಗತಿಸಿದವು. ಆದರೆ ಅವರ ಶಹನಾಯಿ ವಾದನದ ಕೀರ್ತಿ ಮಾತ್ರ ಎಲ್ಲ ಕಡೆ ವ್ಯಾಪಿಸಿದ್ದು, ಅವರು ಸಂಗೀತ ಲೋಕದ ದಂತಕಥೆಯಾಗಿ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಸನಾದಿ ಅಪ್ಪಣ್ಣರ ಹೆಸರು ಚಿರಕಾಲ

ಅವರ ಹೆಸರನ್ನು ಸ್ಥಿರಸ್ಥಾಯಿಗೊಳಿಸಬೇಕೆಂಬ ಉದ್ದೇಶದಿಂದ ಅವರ ಮರಿಮೊಮ್ಮಗ ಅಂತರಾಷ್ಟ್ರೀಯ ಕಲಾವಿದರಾದ ಬಸವರಾಜ ಭಜಂತ್ರಿ ಅವರು ಮುತ್ತಜ್ಜನ ಹೆಸರಿನಲ್ಲಿ ‘ಸನಾದಿ ಅಪ್ಪಣ್ಣ ಕಲಾಕಾರರ ಸಂಘ’ವನ್ನು ಸ್ಥಾಪಿಸಿ 1990 ಜುಲೈ 17ರಂದು ನೋಂದಣಿ ಮಾಡಿಸಿದರು.

1990 ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನ ಮತ್ತು ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಅಪ್ಪಣ್ಣನವರ ಭಾವಚಿತ್ರ ಮತ್ತು ಕಲಾವಿದರ ತಂಡದ ಮೆರವಣಿಗೆಯೊಂದಿಗೆ ಸಂಘವನ್ನು ಉದ್ಘಾಟನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರನ್ನು ಸನ್ಮಾನಿಸಿದ್ದಾರೆ.

ಸನಾದಿ ಅಪ್ಪಣ್ಣ ಕಲಹಾಕಾರ ಸಂಘವು 32 ವರ್ಷಗಳಿಂದ ತಪ್ಪದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಮಹಿಳಾ ಉತ್ಸವಗಳನ್ನು ನಡೆಸುತ್ತಾ ಬಂದಿದೆ. 2,000 ಕ್ಕೂ ಅಧಿಕ ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕಲಾ ತಂಡಗಳಿಗೆ ವಾದ್ಯ ಪರಿಕರಗಳನ್ನು ನೀಡುತ್ತಾ ಬಂದಿದೆ. ಸಂಗೀತ ಶಾಲೆಯನ್ನು ಆರಂಭಿಸಿದೆ. ಅಪ್ಪಣ್ಣನವರ ಮರಿಮೊಮ್ಮಗ ಬಸವರಾಜ ಭಜಂತ್ರಿ ಅವರು ಫ್ರಾನ್ಸ್ ,ಪ್ಯಾರಿಸ್, ದೆಹಲಿ ,ಅಸ್ಸಾಂ ರಾಜ್ಯ ಮೈಸೂರು ದಸರಾ ಉತ್ಸವ ಹೀಗೆ ಅನೇಕ ಕಡೆಗಳಲ್ಲಿ ತಮ್ಮ ಶಹನಾಯಿ ನುಡಿಸಿ ಖ್ಯಾತಿಗಳಿಸಿದ್ದಾರೆ.

ಇವರ ಗಿರಿಮೊಮ್ಮಗ ಪುಟ್ಟರಾಜ ಭಜಂತ್ರಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸಂಗೀತದಲ್ಲಿ ಪಿ ಎಚ್ ಡಿ ಅಧ್ಯಯನ ನಡೆಸಿದ್ದು ಪ್ರಬಂಧ ಮಂಡನೆಯ ಕೊನೆಯ ಹಂತದಲ್ಲಿದ್ದಾರೆ. ಈ ಮೂಲಕ ಅವರ ಕುಟುಂಬ ಅಪ್ಪಣ್ಣನವರು ಶಹನಾಯಿ ವಾದನದ ಕಲೆಯನ್ನು ಜೀವಂತವಾಗಿರಿಸಿದ್ದಾರೆ.

ನವೀನ ಹಳೆಯದು