ಮುಧೋಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದಿಗೆ 29 ವರ್ಷ ಪೂರ್ಣ

Kannada Literature Fest ಮುಧೋಳ ಕವಿಚಕ್ರವರ್ತಿ ರನ್ನ ಸ್ಮಾರಕ ನಿರ್ಮಾಣ ಹಾಗೂ 64ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 28 ವರ್ಷ ತುಂಬಿದೆ. 1995 ಜೂನ್ 2 ರಿಂದ 5 ರ ವರೆಗಿನ ಕಾಲ ಕವಿಚಕ್ರವರ್ತಿ ರನ್ನನ ಜನ್ಮಸ್ವಳವಾದ ಮುಧೋಳ ಪಟ್ಟಣದ ಜನತೆಯ ಪಾಲಿಗೆ ಸುವರ್ಣಾಕ್ಷರದಿಂದ ಬರೆದಿಡುವಂತಹ ಕಾಲ.

ಏಕೆಂದರೆ ಕವಿಚಕ್ರವರ್ತಿ ರನ್ನನ ಕೃತಿ ಸಹಸ್ರಾಬ್ದಿ ವರ್ಷದ ಅಂಗವಾಗಿ ಸ್ಥಳೀಯ ಕವಿಚಕ್ರವರ್ತಿ ರನ್ನ ಸ್ಮಾರಕ ಸಭೆ ಎಂಬ  ಪುಟ್ಟ  ಸಂಸ್ಥೆ  ರನ್ನನ ಸ್ಮಾರಕ ನಿರ್ಮಾಣ ಮಾಡಿದರೆ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತ ಹಾಗೂ  ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಜೂನ್ 3 ರಿಂದ 5 ವರೆಗೆ 64 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದು ಈಗ ಇತಿಹಾಸ.

ಹಿನ್ನೆಲೆ

1993ರ ಕಾಲ ಆವಾಗ ಮೂಲತಃ ತಮಿಳುನಾಡಿನವರು ಹಾಗೂ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಹಿರಿಯ ಅಧಿಕಾರಿಗಳಾದ ಟಿ ಎಲ್ ರಾಘವನ್ ಅವರು ಚೆನ್ನೈನ ಇಂಗ್ಲಿಷ್ ದಿನ ಪತ್ರಿಕೆಯಲ್ಲಿ ಕವಿಚಕ್ರವರ್ತಿ ರನ್ನ ನ ಅಜೀತನಾಥ ಪುರಾಣ ಕೃತಿ ಸಹಸ್ರಾಬ್ದಿ ವರ್ಷದ ಅಂಗವಾಗಿ ಬರೆದ (994ರಲ್ಲಿ ರನ್ನನು ಈ ಕೃತಿಯನ್ನು ಬರೆದ ) ಲೇಖನವನ್ನು ಓದಿ ರನ್ನನ ಬಗ್ಗೆ ಅಪಾರ ಗೌರವ ಮೂಡಿದ್ದರಿಂದ  ರಾಘವನ್ ಅವರು  ಸಮೀರವಾಡಿಗೆ  ಬಂದು ಅಂದಿನ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ  ಬಿ ಪಿ ಹಿರೇಸೂಮಣ್ಣವರ ಅವರೊಂದಿಗೆ ಚರ್ಚಿಸಿ, ಕವಿಚಕ್ರವರ್ತಿ ರನ್ನನ ಕೃತಿ ಸಹಸ್ರಾಬ್ದಿ ವರ್ಷದ ಅಂಗವಾಗಿ  ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿ ಸಹಾಯ ಸಹಕಾರದ ಭರವಸೆ ನೀಡಿದರಂತೆ.

ಈ  ವಿಷಯವನ್ನು ಖ್ಯಾತ ಸಾಹಿತಿಗಳಾದ  ಮಹಾಂತ ಗುಲಗಂಜಿ, ಆನಂದ ಝಂಝರವಾಡ, ಡಿ ಆರ್  ತುಕಾರಾಮ, ಶಂಕರ ಉತ್ತೂರ ಮತ್ತು ಝಿಂಗಾಡೆ ಮುಂತಾದ ಸಾಹಿತ್ಯಾಭೀಮಾನಿಗಳೂಂದಿಗೆ ಚರ್ಚಿಸಿ,ಮುಂಬರುವ 64ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಮುಧೋಳದಲ್ಲಿಯೇ  ನಡೆಸಲು ಸಂಕಲ್ಪ ಮಾಡಿದರು.

1995 ರಲ್ಲಿ ಮುಧೋಳ ನಗರದಲ್ಲಿ ನಡೆದ 64ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನೆಗೊಂಡ ರನ್ನ ವೃತ್ತ & ಸ್ಮಾರಕ

ಮಂಡ್ಯದಲ್ಲಿ ನಡೆಯಲಿರುವ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಮುಂದಿನ ಸಾಹಿತ್ಯ ಸಮ್ಮೇಳನ ಮುಧೋಳದಲ್ಲಿ ನಡೆಸಲು ಮನವಿ ಮಾಡಿದಾಗ ಮುಧೋಳ ಚಿಕ್ಕ ಊರು ಅಲ್ಲಿ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ವಿರೋಧ ವ್ಯಕ್ತವಾಯಿತು.

ಹೀಗಾಗಿ ಅಲ್ಲಿ ಯಾವುದೇ ನಿರ್ಣಯವಾಗಲಿಲ್ಲಾವಾದರೂ ಛಲ ಬಿಡದ ತ್ರಿವಿಕ್ರಮನಂತೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತನ್ನಪ್ರ ಯತ್ನಮುಂದುವರೆಸಿ ಯಶಸ್ವಿಯಾಯಿತು. ನಂತರ ಅಂದಿನ ಹಿರಿಯ ರಾಜಕಾರಣಿ ಸನ್ಮಾನ್ಯ ಎಸ್ ಟಿ ಪಾಟೀಲ ಅವರನ್ನು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಅಂದಿನ ಶಾಶಕ ಆರ್ ಬಿ ತಿಮ್ಮಾಪೂರ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತಾದರೂ ಸ್ವಲ್ಪೇ ದಿನಗಳಲ್ಲಿ ನಡೆದ ರಾಜ್ಯ ವಿಧಾನ ಸಭೆಯ ಚುನಾವಣೆ ಜನತಾದಳ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಮುಧೋಳ ಕ್ಷೇತ್ರದಿಂದ  ಸನ್ಮಾನ್ಯ ಗೋವಿಂದ ಕಾರಜೋಳ  ಚುನಾಯಿತರಾದರು ಇದರಿಂದ ಎಸ್ ಟಿ ಪಾಟೀಲ  ಹಾಗೂ ಆರ್ ಬಿ ತಿಮ್ಮಾಪೂರ  ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಯಿತು. ಈ ಘಟನೆ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಆತಂಕ ಮೂಡಿತಾದರೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಗೋರುಚ ಅವರ ಸತತ ಪ್ರಯತ್ನದಿಂದ  ಹಲಗಲಿಯವರಾದ ಸನ್ಮಾನ್ಯ ಶ್ರೀ ಅಜಯಕುಮಾರ ಸರನಾಯಕ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ನೂತನ ಶಾಸಕ ಸನ್ಮಾನ್ಯ ಗೋವಿಂದ ಕಾರಜೋಳ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನಂತರ ಅಜಯಕುಮಾರ ಸರನಾಯಕ ಹಾಗೂ ಗೋವಿಂದ ಕಾರಜೋಳರ ಅಪಾರ ಪರಿಶ್ರಮದ ಫಲವಾಗಿ ಮೂರು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನ ನಭುತೋ ಎಂಬಂತೆ ಯಶಸ್ವಿಯಾಯಿತು ಇದರಲ್ಲಿ ಸರಕಾರಿ ಅಧಿಕಾರಿ, ಸಿಬ್ಬಂದಿ , ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರ ಹಾಗೂ ತಾಲೂಕಿನ ಜನತೆ ಹಾಗೂ ಮಾಧ್ಯಮ ಮಿತ್ರರರ ಸಹಕಾರ ಅವಿಸ್ಮರಣೀಯವಾಗಿತ್ತು.

ಜೂನ್ 2, 1995 ರಂದು ಸಂಜೆ ಪರಮ ಪೂಜ್ಯ ಅಂಜುಟಗಿ ಶ್ರೀ ಮುದ್ದೇಶ ಪ್ರಭುಗಳ ಸಾನಿಧ್ಯದಲ್ಲಿ  ಕವಿಚಕ್ರವರ್ತಿ ರನ್ನ ಸ್ಮಾರಕ ಸಭೆ ಎಂಬ ಪುಟ್ಟ ಸಂಸ್ಥೆ ರನ್ನನ ನಿರ್ಮಿಸಿದ ರನ್ನ ಸ್ಮಾರಕವನ್ನು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಶ್ರೀಮತಿ  ಬಿ ಟಿ ಲಲಿತಾ ನಾಯಕ ಅವರು ಸಮ್ಮೇಳನಾಧ್ಯಕ್ಷ ಎಚ್  ಎಲ್ಲ್  ನಾಗೆಗೌಡ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚದುರಂಗ, ಗೋವಿಂದ ಕಾರಜೋಳ, ಸಚಿವರಾದ ರಮೇಶ ಜಿಗಜಿಣಗಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

1995 ರಲ್ಲಿ ಮುಧೋಳ ನಗರದಲ್ಲಿ ನಡೆದ 64ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಡದ ಖ್ಯಾತ ಸಾಹಿತಿ ಶ್ರೀ ಯು ಆರ್ ಅನಂತಮೂರ್ತಿ

ಜೂನ್ ಮೂರರಂದು ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ  ಅಂದಿನ ಮುಖ್ಯಮಂತ್ರಿ ಸನ್ಮಾನ್ಯ  ಎಚ್ ಡಿ ದೇವೇಗೌಡರು 64ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ನಾಡಿನ ಅನೇಕ ಸಾಹಿತ್ಯ ದಿಗ್ಗಜರು, ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

ಸಮ್ಮೇಳನ ಸ್ಥಳಕ್ಕೆ  ರನ್ನ ನಗರ ಹಾಗೂ ವೇದಿಕೆಗೆ ಚಾವುಂಡ ರಾಯನ  ಹೆಸರು ನೀಡಲಾಗಿತ್ತು. ಎಚ್ ಎಲ್ ನಾಗೇಗೌಡ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದ್ದಕ್ಕೆ ವಿರೋಧವಿತ್ತು ಆದ್ದರಿಂದ ಸತ್ಯಕಾಮ ಅವರ ನೇತೃತ್ವದಲ್ಲಿ ಬಂಡಾಯ ಸಾಹಿತಿಗಳ ಒಂದು ಪುಟ್ಟ ಪ್ರತಿಭಟನೆಯನ್ನು  ಬಿಟ್ಟರೆ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿತು.

ಗುರುರಾಜ್ ಪೊತ್ನಿಸ್ ✍️

ನವೀನ ಹಳೆಯದು