History ಆಹಾರ ಕೊರತೆ ನೀಗಿಸಲು ಮುಧೋಳದಲ್ಲಿ 1100 ಚೀಲ ಜೋಳ ಹಾಗೂ 5000 ಚೀಲ ಗೋದಿ ದಾಸ್ತಾನು: ಕಂದಾಯ ಸಚಿವ

ಮುಧೋಳ: ಹೆಡ್ ಲೈನ್ ನೋಡಿದಾಕ್ಷಣ ಒಂದು ಕ್ಷಣ ಇದೇನಪ್ಪಾ ಸುದ್ದಿ ಈ ತರ ಇದೆ ಅನ್ನಿಸಿರಬಹುದು. ಹೌದು ಮುಧೋಳದ ಆಹಾರದ ಕೊರತೆ ನೀಗಿಸಲು ಸ್ವತಃ ಕಂದಾಯ ಸಚಿವರೇ ನೀಡಿರುವ ಹೇಳಿಕೆ ಇದು. ಸ್ವಲ್ಪ ವಿವರವಾಗಿ ಹೇಳ್ತೀವಿ ಕೇಳಿ.

ಅದು ಡಿಸೆಂಬರ್ 1, 1947 ರಲ್ಲಿ ಅಂದಿನ ಕರ್ಮವೀರ ಪತ್ರಿಕೆಯ ಪತ್ರಕರ್ತರೊಬ್ಬರು ಆಹಾರ ಕೊರತೆಯ ನಿವಾರಣೆ ಮುಂಜಗೃತಾ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದ್ದರು.

ಅದಕ್ಕೆ ಮುಧೋಳ ಸಂಸ್ಥಾನದ ಅಂದಿನ ಕಂದಾಯ ಸಚಿವರಾದ ಶ್ರೀ ರಾಮಣ್ಣ ಸೊನ್ನದ ಅವರು "ಸಂಗ್ರಹದಲ್ಲಿ 1100 ಚೀಲ ಜೋಳ, 5000 ಚೀಲ ಗೋದಿ ಇದ್ದು, ಇನ್ನೂ 500 ಚೀಲ ಗೋದಿ ಬರುವ ಆಶಯವಿದೆ ಹಾಗೂ ಸಂಸ್ಥಾನದ ಪೂರ್ವಭಾಗದಲ್ಲಿ ಶೇಂಗಾ ಬೆಳೆ ಚೆನ್ನಾಗಿದ್ದರೂ, ಪಶ್ಚಿಮ ಭಾಗದಲ್ಲಿ ಸಜ್ಜೆ ಕೆಟ್ಟಿದೆ"  ಎಂದು ಪತ್ರಿಕೆಗೆ ತಿಳಿಸಿದ್ದರು.


ಇಗ್ಯಾಕೆ ಈ ಸುದ್ದಿ?

ಭಾರತದ ಒಕ್ಕೂಟದ ಭೌಗೋಳಿಕ, ಇತರೆ ಸಂಸ್ಥಾನಗಳ ಭೌಗೋಳಿಕ ಪ್ರದೇಶಗಳಿಗೆ ತುಲನೆ ಮಾಡಿದರೆ ಮುಧೋಳ ಸಂಸ್ಥಾನ ತೀರಾ ಚಿಕ್ಕದು. ಸಂಸ್ಥಾನ ಚಿಕ್ಕದಾದರೂ, ವ್ಯವಸ್ಥಿತ ಮಂತ್ರಿ ಮಂಡಲ ಮತ್ತು ಜವಾಬ್ದಾರಿಯುತ ಮಂತ್ರಿಗಳು ಸಂಸ್ಥಾನದ ಏಳಿಗೆ ಹಾಗೂ ಜನರ ಅಭ್ಯುದಯಕ್ಕೆ ಕಾರ್ಯ ನಿರ್ವಹಿಸುತ್ತಿದ್ದರು ಅನ್ನೋದಕ್ಕೆ ಆಹಾರ ಕೊರತೆ ಮುಂಜಾಗ್ರತೆ ಕ್ರಮ ಒಂದು ಉತ್ತಮ ನಿದರ್ಶನ.

ಕೇವಲ ಇಷ್ಟೇ ಅಲ್ಲದೆ ಅಂದಿನ ಮುಧೋಳ ಸಂಸ್ಥಾನದ ಶಿಕ್ಷಣ ಕೇಂದ್ರಗಳು ಕೂಡ ವ್ಯವಸ್ಥಿತವಾಗಿದ್ದವು. ಸ್ವತಃ ಮಂತ್ರಿಗಳೇ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಮುಖ್ಯವಾಗಿ ಮಾಲೋಜೀ ರಾವ್ ಘೋರ್ಪಡೆ ಅವರನ್ನು ಆಧುನಿಕ ಮುಧೋಳದ ನಿರ್ಮಾತೃ ಅಂದರೆ ತಪ್ಪಾಗಲಾರದು. 1918 ರಲ್ಲೆ ಮುಧೋಳ ತಾಲೂಕಿಗೆ ದೂರವಾಣಿ, ಶಾಲಾ ಕಟ್ಟಡಗಳು, ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳು ಹಾಗೂ ಮುಧೋಳ ಬೇಟೆ ಶ್ವಾನ ತಳಿಯನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆದ್ರೆ ಇವರ್ಯಾರು ಇವತ್ತು ನಮ್ಮ ನೆನಪಿನಲ್ಲಿಲ್ಲ.

ಕಾರಣ ನೆನಪಿನಲ್ಲಿಡಬೇಕಾದ ಕಾರ್ಯ ಸರ್ಕಾರಗಳೂ ಮಾಡಲಿಲ್ಲ ಸಾರ್ವಜನಿಕರಾದ ನಾವೂ ಆಚರಿಸಲಿಲ್ಲ ಆದ್ರೆ ಅಂದು ಅವರು ಕಟ್ಟಿದ ಅನೇಕ ಸೌಲಭ್ಯಗಳಡಿಯಲ್ಲಿ ಇಂದು ಆಶ್ರಯಿಸಿದ್ದೇವೆ.

ನವೀನ ಹಳೆಯದು