ಕನ್ನಡಕ್ಕೆ ಅನುಷ್ಟಾನಕ್ಕೆ ಕಾನೂನಿನ ಬಲ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೆ ಸಾರ್ವಕಾಲಿಕ ಅಗ್ರಪೂಜೆ ಸಲ್ಲಬೇಕೆಂಬುದು ಪ್ರತಿಯೊಬ್ಬ ಕನ್ನಡಿಗನ ನಿರೀಕ್ಷೆ. ಪ್ರತಿ ಕನ್ನಡಿಗನಿಗೂ ಮತ್ತು ಕರ್ನಾಟಕದಲ್ಲಿ ವಾಸಿಸುವವರ ಪಾಲಿಗೆ ಕನ್ನಡವೆಂಬುದು ಬದುಕು ಹಾಗೂ ನಿತ್ಯ ಆಗಬೇಕೆಂಬುದು ಸತ್ಯ. ಕನ್ನಡ ಬೆಳೆಯಲು ಅದರ ಬಳಕೆಯು ಅಷ್ಟೇ ಪ್ರಮುಖ.

ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾದರೂ ರಾಜ್ಯಾಡಳಿತ. ಇನ್ನೂ ಪರಿಪೂರ್ಣವಾಗಿ ಕನ್ನಡಮಯವಾಗಿಲ್ಲ. ಕನ್ನಡ ಮಾಧ್ಯಮದ ಹೆಸರಿನಲ್ಲಿ ಅನುಮತಿ ಪಡೆದು ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಲಿಸುವ ಶಿಕ್ಷಣ ಸಂಸ್ಥೆಗಳು ಸಾವಿರಾರಿವೆ.

ಕನ್ನಡ ಭಾಷೆ ನಮ್ಮ ಉಸಿರು ಹಾಗೂ ನಮ್ಮ ಬದುಕು ಕನ್ನಡ ಭಾಷೆಯನ್ನು ಆಡಳಿತಾತ್ಮಕವಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಪರಿಪೂರ್ಣವಾಗಿ ಅನುಷ್ಠಾನಗೊಂಡರೆ ಅದು ಪ್ರತಿ ಕನ್ನಡಿಗನ ಗೆಲುವು ಹಾಗೂ ಕನ್ನಡದ ಅನುಷ್ಟಾನಕ್ಕೆ ಬಲ

ಇಂಗ್ಲೀಷ್ ಮತ್ತು ಹಿಂದಿ ವ್ಯಾಮೋಹದಲ್ಲಿ ಕನ್ನಡ ಭಾಷಾ ಬಳಕೆ, ಆಡುವಿಕೆ ಮತ್ತು ಬರೆಯುವಿಕೆಗಳು ಬಳಕೆಯು ದಿನೇ ದಿನೇ ಕಡಿಮೆಯಾಗುತ್ತಿರುವುದು ಸುಳ್ಳಲ್ಲ, ಅದಕ್ಕೆ ನಾವೇ ಹೊಣೆಗಾರರು ಕೂಡ. ವಲಸಿಗರು ಕನ್ನಡ ಮಾತನಾಡುತ್ತಿಲ್ಲ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಂಥ ಅನೇಕ ಸ್ಥಳಗಳಲ್ಲಿ ಕನ್ನಡ ಗೊತ್ತಿಲ್ಲದೆಯೂ ಆರಾಮಾಗಿ ಜೀವನ ನಡೆಸಬಹುದಾಗಿದೆ.

ಉನ್ನತ- ತಾಂತ್ರಿಕ ಶಿಕ್ಷಣ, ಕೈಗಾರಿಕಾ ವಲಯ ಸೇರಿದಂತೆ ಖಾಸಗಿಯಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ ಅವುಗಳನ್ನು ವಲಸಿಗರು ಆಕ್ರಮಿಸುತ್ತಿದಾರೆ. ಇನ್ನೊಂದೆಡೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ವಲಸಿಗರ ಕಂಪನಿಗಳೇ ಹೆಚ್ಚಿರುವುದರಿಂದ ಒಳಗೊಳಗೇ ವಲಸಿಗ ಅಭರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇತ್ಯಾದಿ ಕನ್ನಡ ವಿರೋಧಿ ಅಂಶಗಳ ಬಗ್ಗೆ ನಾಡಿನಲ್ಲಿ ಸದಾ ಕೇಳಿಬರುತ್ತಿದ್ದ ಕೂಗು ಇಂದಿಗೂ ವ್ಯಾಪಕವಾಗಿರುವುದು ವಾಸ್ತವ.

ಕನ್ನಡಕ್ಕೆ ಕಾನೂನಿನ ಬಲ

ಬದಲಾದ ಕಾಲ ಘಟ್ಟದ ಸ್ಥಿತಿ ಗತಿಗಳೊಂದಿಗೆ ಸಾಗಿರುವ ಕನ್ನಡ ಭಾಷೆಯೂ ಇಂಗ್ಲೀಷ್ ಮತ್ತು ಹಿಂದಿ ತಂದೊಡ್ಡಿರುವ ಸವಾಲುಗಳನ್ನು ಎದುರಿಸಿ ಮೈ ಕೊಡವಿ ಎದ್ದು ನಿಲ್ಲ ಬೇಕಿದೆ. ಹಾಗಂತ ಬರಿಯ ಭಾಷಣದಿಂದ ಯಾವುದೇ ಭಾಷೆ ಬೆಳೆಯಲು ಸಾಧ್ಯವಿಲ್ಲ. ಭಾಷಾ ಬೆಳವಣಿಗೆಗೆ ಭಾಷಾ ಪ್ರೇಮದಷ್ಟೇ ಕಡ್ಡಾಯ ಬಳಕೆಗೆ ಕಾನೂನಿನ ಬಲವೂ ಅವಶ್ಯವಾಗಿದೆ, ಡಾ.ಸರೋಜಿನಿ ಮಹಿಷಿ ವರದಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಶಿಫಾರಸ್ಸು ಮಾಡಿ ದಶಕಗಳು ಕಳೆದರೂ ಇನ್ನೂ ಅದು ಜಾರಿಯಾಗಿಲ್ಲ.

ಸರ್ಕಾರಿ ಕಚೇರಿಗಳನ್ನು ಹೊರೆತುಪಡಿಸಿದರೆ ಮಿಕ್ಕೆಲ್ಲಾ ಉದ್ಯಮ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸುತಾರಾಂ ಅಗ್ರಮಾನ್ಯತೆ ಇಲ್ಲವೇ ಇಲ್ಲ, ಅಲ್ಲೂ ಕೂಡ ಅನ್ಯ ಭಾಷಿಕರನ್ನು ತುರುಕಿ ಹಳ್ಳಿಗಳ ಜನರ ದೈನಂದಿನ ವ್ಯಹಾರಗಳಲ್ಲಿ ತೊಂದರೆ ಉಂಟಾಗುತ್ತಿದೆ (ಬ್ಯಾಂಕ್, ಪೋಸ್ಟ್ ಇತ್ಯಾದಿ) ಮೇಲ್ನೋಟಕ್ಕೆ ಕನ್ನಡಮಯವಂತೆ ಕಂಡರೂ ಆಂತರಿಕವಾಗಿ ಇಂಗ್ಲೀಷ ಮತ್ತು ಹಿಂದಿಗೆ ಆದ್ಯತೆ ಮತ್ತು ಪೂಜ್ಯತೆ, ಕನ್ನಡಮ್ಮನ ಅಳಲು ಕೇಳುವವರಿಲ್ಲ, ಕನ್ನಡಮ್ಮನಿಗೆ ದೊರೆಯಬೇಕಾದ ಗೌರವ-ಸ್ಥಾನಮಾನಗಳು ಖಾಸಗಿ ವಲಯದಲ್ಲಿ ದೊರೆಯುತ್ತಿಲ್ಲವೆಂಬುದು ಸ್ಪಷ್ಟ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಡ್ಡಾಯ ಕನ್ನಡ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ಕಾಯ್ದೆ ಜಾರಿಗೆ ಬರಬೇಕೆಂಬ ಕನ್ನಡಿಗರ ಒತ್ತಾಯ ಮತ್ತು ಹೋರಾಟ ಇಂದು ನೆನ್ನೆಯದಲ್ಲ. ಬಹುದಶಕಗಳಿಂದಲೂ ಕೇಳಿಬರುತ್ತಲೇ ಇರುವ ಈ ಕೂಗಿಗೆ ಕಡೆಗೂ ಸ್ಪಂದಿಸುವ ಸಕಾಲ ಕೂಡಿಬಂದಿದೆ.

ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಶಾಸನದ ರೂಪ ಕೊಡಿಸುವಲ್ಲಿ ಸಫಲವಾಗಿದೆ. ಎರಡು ಬಾರಿ ಶಾಸನಸಭೆಗೆ ಬಂದು ಅಂಗೀಕೃತಗೊಳ್ಳದೇ ಇದೀಗ ಹಲವು ಮಾರ್ಪಾಡುಗಳೊಂದಿಗೆ ಕಡೆಗೂ ಕನ್ನಡ ಕಡ್ಡಾಯ ಶಾಸನ ಜಾರಿಗೆ ಬಂದಿರುವುದು ಕನ್ನಡಿಗರ ಬಹು ಸಂತಸ ತಂದಿರುವುದು ನಿಜ. ಕನ್ನಡವೇ ಸತ್ಯ: ಕನ್ನಡವೇ ನಿತ್ಯ.

ಕನ್ನಡಿಗರಿಗೆ ಸರ್ಕಾರ ನಿಗದಿ ಮಾಡಲಿರುವ ಪ್ರಮಾಣದಲ್ಲಿ ಉದ್ಯೋಗ ಮೀಸಲಾತಿಯನ್ನು ಖಾಸಗಿ ಕೈಗಾರಿಕೆಗಳು ನೀಡಬೇಕು ಎಂಬುದನ್ನು ಕನ್ನಡ ಕಡ್ಡಾಯ ಕಾಯ್ದೆಯಲ್ಲಿ ಪ್ರಧಾನವಾಗಿ ಸೇರ್ಪಡೆ ಮಾಡಿರುವುದು ಪ್ರಸಕ್ತ ಕಾಲಘಟ್ಟದ ಮಹತ್ವದ ಅಂಶ.

ಕೆಳ ಹಂತದ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯನ್ನು ಜಾರಿಗೆ ತರಲಿರುವುದು ಸಮಗ್ರಭಾಷಾಭಿವೃದ್ಧಿ ವಿಧೇಯಕದ ವಿಶೇಷತೆ. ಇವುಗಳ ಜೊತಗೆ ಕನ್ನಡ ಕಾಯ್ದೆಯಲ್ಲಿರುವ ಮುಖ್ಯಾಂಶಗಳು ಕನ್ನಡ ನೆಲದಲ್ಲಿ ಕನ್ನಡತನ ಮೆರೆಸಲು ಸರ್ವತಾ ಪೂರಕ. ಪರಿಣಾಮ ರಾಜ್ಯದಲ್ಲಿನ್ನು ಅಕ್ಷರಶಃ ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಕಾಯ್ದೆಯ ಪ್ರಮುಖ ಅಂಶಗಳು

 • ಸರ್ಕಾರ ನಿಗದಿ ಮಾಡುವ ಮೀಸಲಾತಿಯನ್ನು ಕನ್ನಡಿಗರಿಗೆ ನೀಡದೇ ಇದ್ದಲ್ಲಿ ಕೈಗಾರಿಕಗಳು ಎಲ್ಲ ಬಗೆಯ ಸರ್ಕಾರಿ ರಿಯಾಯ್ತಿ-ವಿನಾಯ್ತಿಗಳನ್ನು ಕಳೆದುಕೊಳ್ಳಲಿವೆ.
 • ಖಾಸಗಿ ಉದ್ಯಮ ಹಾಗೂ ವಾಣಿಜ್ಯ ವಲಯ ಕಾಯ್ದೆಯ ಈ ಅಂಶವನ್ನು ಪಾಲಿಸಿದೆಯೋ ಇಲ್ಲವೋ ಎಂಬುದರ ವಾರ್ಷಿಕ ವರದಿಯನ್ನು ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು ವಿಧಾನ ಮಂಡಲದ ಉಭಯ ಸದನಗಳ ಮುಂದೆ ಪ್ರತಿ ವರ್ಷ ಮಂಡಿಸಬೇಕು.
 • ಕನ್ನಡ ಭಾಷೆಯ ಅನುಷ್ಠಾನ ಮತ್ತು ಅನುಕರಣಿಗಾಗಿ ತೆಗೆದುಕೊಂಡ ಕ್ರಮಗಳನ್ನು ಹಾಲಿ ಅಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿಗೆ ಪ್ರತಿ ಮೂರು ತಿಂಗಆಗೊಮ್ಮೆ ತಿಳಿಸಬೇಕು.
 • ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಕಲಾಪಗಳು ಕನ್ನಡದಲ್ಲೇ ನಡೆಯಬೇಕು.
 • ಉಚ್ಚ ನ್ಯಾಯಾಲಯ ವಿಶೇಷ ಅಥವಾ ಸಾಮಾನ್ಯ ಆದೇಶದ ಮೂಲಕ ಸೂಚಿಸಿದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಾಕ್ಷ್ಯವನ್ನು ದಾಖಲಿಸಬಹುದು.
 • ಕಾನೂನುಗಳಿಗೆ ಸಂಬಂಧಿಸಿದಂತೆ ಬೇರ ಬೇರೆ ಶಾಸನಗಳಲ್ಲಿ ಏನೇ ಹೆಳಿರಲಿ ಈ ವಿಧೇಯಕ ಕಾಯ್ದೆಯಾಗಿ ಹಾಲಿಗೆ ಬಂದ ನಂತರ ರಾಜ್ಯ ಸರ್ಕಾರದ ಎಲ್ಲ ಅರ ನ್ಯಾಯಕ ಕಾರ್ಯನಿರ್ವಾಹಕರ ಎಲ್ಲ ಅದೇಶಗಳೂ ಕನ್ನಡದಲ್ಲಿಯೇ ಇರತಕ್ಕದ್ದು.
 • ಎಲ್ಲ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು ಸೇರಿ ಎಲ್ಲೆಡ ಅಧಿಕಾರಿಗಳ ಹೆಸರು ಮತ್ತು ಪದನಾಮಗಳು ಕನ್ನಡದಲ್ಲೇ ಇರಬೇಕು.
 • ರಸ್ತೆಗಳು, ಬಡಾವಣೆಗಳು, ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಎಲ್ಲ ಫಲಕಗಳಲ್ಲಿ ಪ್ರದರ್ಶಿಸಲಾಗಿರುವ ವಿವರಗಳು ಕನ್ನಡದಲ್ಲೇ ಪ್ರಧಾನವಾಗಿರಬೇಕು.
 • ಸರ್ಕಾರದ ಟೆಂಡರ್ ಪ್ರಕಟನೆಗಳು, ಅಧಿಸೂಚನೆಗಳು, ಡಿಜಿಟಲ್ ನಮೂನೆ, ಪ್ರಮಾಣ ಪತ್ರ, ಕಾರ್ಯಕ್ರಮಗಳ ಕರಪತ್ರ, ಪ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ನೊಟೀಸ್ ಮೊದಲಾದವು ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು.
 • ಖಾಸಗಿ ವಲಯದ ಅಂಗಡಿ- ಮುಂಗಟ್ಟುಗಳು, ಹೋಟೆಲ್‌ಗಳು, ಸಿನೆಮಾ ಮಂದಿರಗಳು, ಮಲ್ಕಪ್ಲೆಕ್ಸ್‌ಗಳು, ಆಸ್ಪತ್ರೆ- ಕ್ಲಿನಿಕ್‌ಗಳು, ಎಲ್ಲ ಬಗೆಯ ವಾಣಿಜ್ಯೋದ್ಯಮ ಕೇಂದ್ರಗಳು, ಮನೋರಂಜನಾ ಕೇಂದ್ರ ಇತ್ಯಾದಿ ಎಲ್ಲ ಸರ್ಕಾರೇತರರೂ ಹೆಸರು ಸೂಚಿಸುವ ತಮ್ಮ ಪ್ರದರ್ಶನ ಫಲಕದ ಮೇಲ್ಬಾಗದಲ್ಲಿ ಕನ್ನಡವನ್ನೇ ಎದ್ದು ಕಾಣುವಂತೆ ಬರೆಯಬೇಕು. ಕೆಳಗೆ ತಮಗೆ ಬೇಕಾದ ಭಾಷೆಯಲ್ಲಿ ಬರೆಯಬಹುದು.
 • ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಕೈಗಾರಿಕಾ ಹಾಗೂ ಗ್ರಾಹಕ ಉತ್ಪನ್ನಗಳ ಹೆಸರು-ಬಳಕೆ ಇತ್ಯಾದಿ ವಿವರಗಳು ಕನ್ನಡದಲ್ಲಿಯೂ ಇರತಕ್ಕದ್ದು.
 • ರಾಜ್ಯದಲ್ಲಿ ಬೇರೆ ರಾಜ್ಯದವರು ಪ್ರದರ್ಶಿಸುವ ಸಾರ್ವಜನಿಕ ಹಿತಾಸಕ್ತಿಯ ಜಾಹೀರಾತು ಮತ್ತಿತರ ಬರವಣಿಗೆಯಲ್ಲಿ ಸರ್ಕಾರ ನಿಗದಿ ಮಾಡುವ ಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿ ವಿಷಯವನ್ನು ವಿವರಿಸಲೇಬೇಕು.
 • ನೂರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುವ ರಾಜ್ಯ ಕೇಂದ್ರ ಒಡೆತನದ ಉದ್ಯಮ, ಬ್ಯಾಂಕು ಮತ್ತಿತರ ಎಲ್ಲ ಕಚೇರಿ-ಕಾರ್ಖಾನೆಗಳಲ್ಲಿ 'ಕನ್ನಡ ಕೋಶ'ವನ್ನು ಸ್ಥಾಪಿಸಬೇಕು. ಕನ್ನಡ ಭಾಷೆ ಮಾತನಾಡಲು ಬಾರದೇ ಇರುವ ಉದ್ಯೋಗಿಗಳಗಾಗಿ 'ಕನ್ನಡ ಕಲಿಕಾ ಘಟಕ' (ಪ್ರಾಥಮಿಕ ಕನ್ನಡ ಬೋಧನಾ ಘಟಕ) ತೆರೆಯಬೇಕು. ಇದರ ನಿರ್ವಹಣಿಗೆ ಕನ್ನಡ ಬಲ್ಲ ಹಿರಿಯ ಉದ್ಯೋಗಿಯನ್ನು ನಿಯುಕ್ತಗೊಳಿಸಬೇಕು. ಬ್ಯಾಂಕುಗಳು ಮತ್ತಿತರ ಹಣಕಾಸು ಸಂಸ್ಥೆಗಳು ಸಂವಹನ ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲೇ ಇರಬೇಕು.
 • ಡಿಜಟಲೀಕರಣದ ಈ ಯುಗದಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಮಾಡಬೇಕು. ವಿವಿಧ ಸಂಸ್ಥೆಗಳು ಹಾಗೂ ವಿಷಯಗಳ ಮಾಹಿತಿ ಜಾಲತಾಣದಲ್ಲಿ ಕನ್ನಡದಲ್ಲಿಯೂ ಲಭಿಸುವಂತೆ ಜಾರಿ ನಿರ್ದೇಶನಾಲಯ ನೋಡಿಕೊಳ್ಳಬೇಕು. ಇದಕ್ಕಾಗಿ ಉತ್ತೇಜಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಯೂನಿಕೋಡ್ ಮತ್ತಿತರ ಲಭ್ಯ ತಂತ್ರಾಂಶಗಳ ಪ್ರಯೋಜನವನ್ನು ಇದಕ್ಕಾಗಿ ಪಡೆದುಕೊಳ್ಳಬಹುದು.
 • ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತಹ ಎಲ್ಲ ಅರ್ಜಿ ನಮೂನೆಗಳನ್ನೂ ಕಾಲಮಿತಿಯಲ್ಲಿ ಕನ್ನಡದಲ್ಲೇ ಲಭಿಸುವಂತೆ ಮಾಡುವ ಹೊಣಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಗಿದೆ.
 • ಇ-ಅಡಳತದಲ್ಲಿ ಕನ್ನಡದ ಪರಿಣಾಮಕಾರಿ ಅಭಿವೃದ್ಧಿಗೆ ಸೃಜನಾತ್ಮಕ ಸಲಹೆಗಳನ್ನು ನೀಡುವ ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಯೋಜನೆ.
 • ಕನ್ನಡ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿನ ಖಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಲು ಕನ್ನಡ ಉದ್ಯೋಗ ಪೋರ್ಟಲ್ ಸ್ಥಾಪನೆ.

ನವೀನ ಹಳೆಯದು