Ramesh Gadadannavar: ರೈತ ಹೋರಾಟಕ್ಕೆ ಮುನ್ನಡಿಯಾಗಿದ್ದ ಧೀಮಂತ ನಾಯಕ ರಮೇಶ್ ಗಡದನ್ನವರ್


ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಆಸ್ತಿ, ಹಣ, ಕಾರು, ಬಂಗಲೆ ಹೊಂದಿಲ್ಲ, ಸರಕಾರಿ ಅಧಿಕಾರಿಯೂ ಅಲ್ಲ. ಸಾಮಾನ್ಯ ಉಡುಗೆ-ತೊಡುಗೆ ಧರಿಸುವ ಬಡ ರೈತ. ಇಂತಹ ವ್ಯಕ್ತಿಯಿಂದ ಸಮಾಜ ಬಯಸುವದಾದರೂ ಏನನ್ನ? ಆದರೆ ಆಶ್ಚರ್ಯದ ಸಂಗತಿ ಎಂದರೆ ಆ ಭಾಗದಲ್ಲಿ ಆನೇಕರ ಮನೆಗಳಲ್ಲಿ, ರಮೇಶ ಗಡದನ್ನವರರ ಫೋಟೋ ಹಾಕಿದ್ದಾರೆ. ಕೆಲವರು ಈ ವ್ಯಕ್ತಿಯನ್ನು ನಿತ್ಯ ದೇವರಂತೆ ಸ್ಮರಿಸುತ್ತಾರೆ. ಈ ಶರತದ ಅನೇಕ ವಿಷಯಗಳನ್ನು ತಿಳಿದ ನನಗೂ ಕೂಡ ಬಹಳ ಆಶ್ಚರ್ಯವಾಗಿತ್ತು. ಈ ಕಾಲದಲ್ಲಿ ಇಂತಹ ವ್ಯಕ್ತಿಗಳು ಇದ್ದಾರಾ ಎಂದೆನಿಸಿತು.

ಇಷ್ಟೊಂದು ಹೆಸರು ಮಾಡಲು ಇವರೇನು ದೊಡ್ಡ ಕಲಾವಿದ, ಶ್ರೀಮಂತ, ರಾಜಕಾರಣಿಯೋ ಆಥವಾ ಪ್ರಭಾವಿ ಸ್ವಾಮಿಜಿಯೋ ಯಾವುದು ಅಲ್ಲ. ಆದರೆ ಜನ ಮಾತ ಇವರನ್ನು ಕಂಡರೆ ಇಷ್ಟೊಂದು ಪ್ರೀತಿಯಿಂದ ಕಾಣುತ್ತಾರೆಂಬ ಕುತೂಹಲದಿಂದ ಈ ವ್ಯಕ್ತಿಯಲ್ಲಿ ಕುರಿತು ಕುರಿತು ಅಧ್ಯಯನ ಮಾಡಬೇಕೆಂದು. ಆ ಭಾಗದ ಹತ್ತಾರು ಗ್ರಾಮಗಳಿಗೆ ತೆರಳಿ, ಆನೇಕ ಮುಖಂಡ, ರೈತ, ಸಾಮಾನ್ಯ ಜನರನ್ನು ವಿಚಾರಿಸಿದಾಗ, ಅವರ ಪ್ರೀತಿಯ ಉತ್ತರಕ್ಕೆ ನಾನು ಕೂಡಾ ಅತ್ಯಂತ ಭಾವುಕನಾಗಿ ಹೋಗಿದ್ದೆ. ರಮೇಶರ ಕರ್ಮಭೂಮಿ ಮುಧೋಳ ತಾಲೂಕಿನ ಶಿರೋಳ ಗ್ರಾಮಕ್ಕೆ ತೆರಳಿದ್ದಾಗ ಆ ಗ್ರಾಮದ ಕಾರ್ನರ್ ಗೆ ಮಹ್ಮದ್ ಎಂಬ ವ್ಯಕ್ತಿ ಒಂದು ಕೇಬಲ್ ಅಂಗಡಿ ಇಟ್ಟಿದ್ದ. ಅಂಗಡಿಯ ಮುಖ್ಯದ್ವಾರದ ಎದುರು ರಮೇಶ ಗಡದನ್ನವರರ ದೊಡ್ಡ ಭಾವಚಿತ್ರ ಹಾಕಿದ್ದ, ಅದನ್ನು ಕಂಡು ಆ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಹೇಳಿದ್ದು ನನ್ನದು ಅತ್ಯಂತ ಬಡ ಕುಟುಂಬ, ನಾನು ಮುಸ್ಲಿಂ ಎಂದು ಅನೇಕರು ಬೇರೆ ದೃಷ್ಟಿಯಿಂದ ಕಂಡಿದ್ದ ಸಂದರ್ಭದಲ್ಲಿ ನನಗೆ ಧೈರ್ಯ ತುಂಬಿ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟವರು ಈ ಮಹಾತ್ಮರೇ ಎಂದ. ನಂತರ ರಮೇಶರ ಹಲವಾರು ಹೋರಾಟ ಭಾಷಣದ ಸಿಡಿಗಳನ್ನು ನನಗೆ ಕೊಟ್ಟಿದ್ದ, ನನಗೆ ಆ ಸಿಡಿಗಳನ್ನು ನೋಡಿ ಬಹಳ ಆಶ್ಚರ್ಯವಾಯಿತು.

ರೈತರನ್ನು ಉದ್ದೇಶಿಸಿ ಮಾತನಾಡುತ್ತಿರುವ ದಿ. ರಮೇಶ್ ಗಡದನ್ನವರ


ಇಷ್ಟೊಂದು ಪ್ರಭಾವೀ ವ್ಯಕ್ತಿ ರಾಜ್ಯದಲ್ಲಿ ಯಾರೂ ಇಲ್ಲ ಅನಿಸಿಬಿಟ್ಟಿತು. ಇಂತಹ ವ್ಯಕ್ತಿಯ ಆದರ್ಶ ಜೀವನದ ಪರಿಚಯವನ್ನು ಸಮಾಜಕ್ಕೆ ಮಾಡಿಸಲೇಬೇಕೆಂದೆನಿಸಿತ್ತು. ದಕ್ಷಿಣ ಕರ್ನಾಟಕದ ಜನರಿಗೆ ರಮೇಶ ಗಡದನ್ನವರರ ಬದುಕಿನ ರೀತಿ ಹೇಳಿದರೆ ನಂಬುವದು ಬಲು ಕಷ್ಟ. ಒಂದು ಸುಭಾಷಿತವಿದೆ. 'ನ ಅಭಿಷೇಕೇ ನ ಸಂಸ್ಕಾರೇ ಸಿಂಹಸ್ಯ ಕ್ರಿಯತೇ ವನೇ, ವಿಕ್ರಮಾರ್ಜಿತ ಸತ್ಯನ್ನ ಸ್ವಯಮೇವ ಮೃಗೇಂದ್ರಾ' ಸಿಂಹರಾಜನಿಗೆ ವನ್ಯಮೃಗಗಳು ಅಭಿಷೇಕವನ್ನಾಗಲಿ ಇತರ ಸಂಸ್ಕಾರವನ್ನಾಗಲಿ ಮಾಡುವದಿಲ್ಲ. ತನ್ನ ಶಕ್ತಿ ಸಾಮರ್ಥ್ಯದಿಂದಲೇ ಅದು ಮೃಗೇಂದ್ರರಾಜನೆಂದು ಕರೆಸಿಕೊಳ್ಳುತ್ತದೆ. ಹಾಗೆ ಒಬ್ಬ ಸಾಮಾನ್ಯ ವ್ಯಕ್ತಿ ಕುಟುಂಬದ ಯಾವುದೇ ಪ್ರಭಾವವಿಲ್ಲದೇ ಲಕ್ಷಾಂತರ ಜನರ ಹೃದಯದಲ್ಲಿ ದೇವರಂತೆ ನೆಲೆಸಿದ್ದಾರೆಂದರೆ ಸಾಮಾನ್ಯದ ಸಂಗತಿಯಲ್ಲ. ಸುಮಾರು ಮೂವತ್ತೈದು ವರ್ಷಗಳ ಕಾಲ ನೂರಾರು ನಗರ ಗ್ರಾಮಗಳಿಗೆ ತೆರಳಿ ರೈತರನ್ನು ಸಂಘಟಿಸಿದರು. 

ರೈತರನ್ನು ಉದ್ದೇಶಿಸಿ ಮಾತನಾಡುತ್ತಿರುವ ದಿ. ರಮೇಶ್ ಗಡದನ್ನವರ


ರಮೇಶ ಗಡ ದನ್ನವರರು. ಬಾಗಲಕೋಟ ಜಿಲ್ಲೆಯ ತಾಲೂಕಿನಲ್ಲಿ ಜನಿಸಿ ಧಾರವಾಡದಲ್ಲಿ ತಮ್ಮ ಬಿ.ಕಾಂ, ಹಾಗೂ ಕಾನೂನು ಪದವಿ ಪಡೆದ ನಂತರ ತಪೋವನ ಆಶ್ರಮದ ಕುಮಾರಸ್ವಾಮಿಜೀಗಳಿಂದ ಪ್ರಭಾವಿತರಾಗಿ, ಶ್ರೀ ನಂಜುಂಡಸ್ವಾಮಿಯವರ ಅಪಟ ಶಿಷ್ಯರಾಗಿ ಗೋಕಾಕ ಚಳುವಳಿಯ ಮೂಲಕ ಹೋರಾಟ ಪ್ರಾರಂಭಿಸಿದರು. ಈ ವ್ಯಕ್ತಿಯ ಪ್ರಭಾವ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, ಯಾವುದೇ ಸರಕಾರಿ ಅಧಿಕಾರಿಗಳಾಗಲಿ, ಸಚಿವರುಗಳಾಗಲಿ ಇವರ ಎದುರು ನಿಂತು ಮಾತನಾಡುತ್ತಿರಲಿಲ್ಲ. ಗೌರವದಿಂದ ತಲೆ ಬಾಗುತ್ತಿದ್ದರು.

ಕಬ್ಬಿನ ಬೆಲೆ ನಿಗದಿಗಾಗಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ರಮೇಶ್ ಗಡದನ್ನವರ್


ರಮೇಶರ ವಿಶೇಷತೆ ಎಂದರೆ ಯಾರು ಇವರಲ್ಲಿ ಪರಮ ಸಹಿಷ್ಣು ಮನೋಭಾವದ, ಕರ್ಮಣ್ಯೇ ವಾಧಿಕಾರಸ್ತೇ ಎಂಬ ಸತ್ಯ ಪ್ರಾಮಾಣಿಕತೆಯನ್ನು ನಂಬಿ ನಡೆಯುತ್ತಿರುವ ಕರ್ಮ ಯೋಗಿಯನ್ನು ಕಾಣಬಯಸಲು ಇಚ್ಚಿಸುತ್ತಾರೋ ಅವರಿಗೆ ಕರ್ಮಯೋಗಿಯಂತೆ ಕಾಣಿಸುತ್ತಿದ್ದರು. ಇನ್ನೂ ಕೆಲ ಪಂಡ, ಭ್ರಷ್ಟ ಅಧಿಕಾರಿ ಮತ್ತು ರಾಜಕೀಯ ಮುಖಂಡರುಗಳಿಗೆ ವ್ಯಾಘ್ರನಂತೆ: ಬಿಸಿಮುಟ್ಟಿಸುತ್ತಿದ್ದರು. ಯಾವತ್ತು ರಮೇಶರಲ್ಲಿ ಭಯ, ದುಗುಡತೆ, ಅಹಂಕಾರ, ಸ್ವಾರ್ಥ, ವ್ಯಾಮೋಹ ಇರಲಿಲ್ಲ. ಪರಿಶ್ರಮ ಪೂಜೆಗಿಂತ, ಮಿಗಿಲಾದದ್ದೆಂಬ ತತ್ವದಡಿ ಮುನ್ನುಗ್ಗಿದರು.

ರಮೇಶರು 1985ರ ಸುಮಾರಿನಲ್ಲಿ ನಂಜುಂಡಸ್ವಾಮಿಯವರ ಪ್ರೇರಣೆಯಿಂದ ಮುಧೋಳ ನಗರದಲ್ಲಿ ರೈತ ಸಂಘಟನೆಯನ್ನು ಪ್ರಾರಂಭಿಸಿ ಇಡೀ ಉತ್ತರ ಕರ್ನಾಟಕದಲ್ಲಿ ಪ್ರಬಲಗೊಳಿಸಿ ನಂತರ 1989 ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ಲಕ್ಷಾಂತರ ರೈತರು ಭಾಗಿಯಾಗುವಂತೆ ಮಾಡಿದ್ದರು.ರಮೇಶರು ಪ್ರಾರಂಭಿಸಿದ. ಯಾವುದೇ ಹೋರಾಟವಿರಲಿ ಅದಕ್ಕೆ ನ್ಯಾಯ ಸಿಗುವವರೆಗೆ ಹಿಂದೆ ಸರಿಯುತ್ತಿರಲಿಲ್ಲ.

ಕೆಲ ಸಂದರ್ಭದಲ್ಲಿ ಜಿಲ್ಲಾಡಳಿತ, ರಾಜ್ಯ ಸರಕಾರಗಳನ್ನು ಬುಡ ಸಮೇತ ಅಲುಗಾಡಿಸಿದ್ದರು. ಸುಮಾರು ಏಳೆಂಟು ವರ್ಷಗಳಿಂದ ಉತ್ತರ ಕರ್ನಾಟಕದ ರೈತರೆಲ್ಲರೂ ಪ್ರತಿ ಟನ್ ಕಣ್ಣಿಗೆ 1,800 ತೆಗೆದುಕೊಳ್ಳುತ್ತಿದ್ದರು. ರಮೇಶರು ಕಬ್ಬಿನಿಂದ ಬರುವ ಒಟ್ಟಾರೆ ಲಾಭವನ್ನು ಲೆಕ್ಕಹಾಕಿ 2,000 ರೂ ಪ್ರತಿ ಟನ್‌ಗೆ ನೀಡಬೇಕೆಂದು ರಾಜ್ಯದ ಎಲ್ಲ ಕಾರ್ಖಾನೆಯ ಮಾಲೀಕರ ವಿರುದ್ಧ ಬೃಹತ್‌ ಪ್ರತಿಭಟನೆ ಆರಂಭಿಸಿದರು. ನಿರಂತರ ನಡೆದ ಈ ಪ್ರತಿಭಟನೆಯ ಫಲವಾಗಿ ಯಶಸ್ಸನ್ನು ಕಂಡರು, ಇಡೀ ರೈತ ಸಮುದಾಯವೇ ಹರ್ಷದ್ವಾರದಲ್ಲಿ ಮುಳುಗಿತ್ತು.

ಇದನ್ನೂ ಓದಿ: ಮುಧೋಳದ ರೈತರ ಸಾವಯವ ಬೆಲ್ಲ ರಷ್ಯಾಗೆ ರಫ್ತು.

ಅನೇಕ ರೈತರು ತಮ್ಮ ಸಾಲಗಳನ್ನೆಲ್ಲ ತೀರಿಸಿಕೊಂಡರು. ಅಂತಹ ಜನ ರಮೇಶರನ್ನು ಸ್ವಂತ ಮನೆಮಗನಂತೆ ಪ್ರೀತಿಸಲಾರಂಭಿಸಿದರು. ರಮೇಶರು ಹೋರಾಟಕ್ಕೆ ಕರೆ ಕೊಟ್ಟರೆ ಸಾಕು, ಲಕ್ಷಾಂತರ ಜನ ಸೇರುತ್ತಿದ್ದರು. ಪ್ರಮುಖ ಸಂಗತಿಯೆಂದರೆ ಬೆಳಗಾವಿಯ ಕುಡಚಿ ಕ್ಷೇತ್ರದ ಶಾಸಕ ಹಲವಾರು ಕಾರ್ಯಗಳನ್ನು ಮಾಡುತ್ತಾ ನವೆಂಬರ್ 9, 2012 ರಂದು, ಅಕಾಲಿಕವಾಗಿ, ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ನಿಧನ ಹೊಂದಿದಾಗ ಅ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆ, ಬೆಳಗಾವಿ, ವಿಜಯಪುರ, ನರಗುಂದ, ಸಾಂಗ್ಲಿ, ಕೊಲ್ಲಾಪುರ್ ಇನ್ನೂ ಹಲವಾರು ಕಡೆಗಳಿಂದ ಲಕ್ಷಾಂತರ ಜನ ಸಾಗರ ಬೆಳಗಾವಿಗೆ ಹರಿದು ಬಂದಿತ್ತು. ಬೆಳಗಾವಿಯ ಯಾವ ಮೂಲೆಯಲ್ಲೂ ಕಾಲಿಡಲು ಜಾಗವಿರಲಿಲ್ಲ. ಅವರ ಪಾರ್ಥಿವ ಶರೀರ ಎರಡು ದಿನಗಳ ಕಾಲ ನೂರಾರು ನಗರ ಗ್ರಾಮಗಳಲ್ಲಿ ಮೆರವಣಿಗೆಯ ನಂತರ ಮುಧೋಳ ನಗರಕ್ಕೆ ತಲುಪಿತ್ತು. ಮುಧೋಳ ನಗರದಲ್ಲಿ ಲಕ್ಷಾಂತರ ಜನ ಅಂತಿಮ ನಮನ ಸಲ್ಲಿಸಿ ದರ್ಶನ ಪಡೆದರು.

ಒಟ್ಟಾರೆ ಇವರ ಅಂತಿಮ ದರ್ಶನ ಪಡೆದವರ ಸಂಖ್ಯೆ ಸುಮಾರು 12 ಲಕ್ಷಕ್ಕಿಂತಲೂ ಅಧಿಕ. ಪ್ರತಿಯೊಬ್ಬರು ಕಣ್ಣೀರು ಸುರಿಸಿದ್ದರು. ಆ ಭಾಗದಲ್ಲಿ ಮೂರು ದಿನಗಳ ಕಾಲ ಯಾರ ಮನೆಗಳಲ್ಲೂ ಒಲೆಗಳು ಉರಿಯಲಿಲ್ಲ. ವಿವಿಧ ಗ್ರಾಮಗಳಲ್ಲಿ, ಮುಧೋಳ ನಗರದ ಮಧ್ಯೆ ಗಡದನ್ನವರ ಸರ್ಕಲ್ ಎಂದು ಅಂದಿನ ಸಚಿನ ಕಾರಜೋಳರವರು ಘೋಷಿಸಿದ್ದರು.

ಇದನ್ನೂ ಓದಿ: 20 ಅಡಿ ಎತ್ತರ; ಎಕರೆಗೆ 100 ಟನ್ ಇಳುವರಿ ಪಡೆದ ರೈತ.

ಸ್ವಾರ್ಥದ ಲವಲೇಶವೂ ಇಲ್ಲದೆ ಪರರಿಗಾಗಿ ಯಾರು ಜೀವಿಸುತ್ತಾರೋ ಅವರು ಮಹಾತ್ಮರಾಗುತ್ತಾರೆ. ನೂರಾರು ವರ್ಷ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆಳೆದು ಬೆಳೆಗಾರರ ಸಮಸ್ಯೆಗಳಿಗೆ ಬೆಳಕಾಗಬೇಕಿದ್ದ ರಮೇಶ ಗಡದನ್ನವರ ದೈಹಿಕವಾಗಿ ಇಂದು ನಮ್ಮ ಮಧ್ಯೆ ಇಲ್ಲ. ಆದರೆ ಅವರ ನಿಸ್ವಾರ್ಥ ಸೇವೆ ಮತ್ತು ರೈತರ ಬಗ್ಗೆ ಅವರಿಗಿದ್ದ ನೈಜ ಕಳಕಳಿಯಿಂದಾಗಿ ಈ ಭಾಗದ ಲಕ್ಷಾಂತರ ರೈತರ ದೇವರ ಮನೆಗಳಲ್ಲಿ ಆವರ ಭಾವಚಿತ್ರ ಸ್ಥಾನಪಡೆಯಲು ಕಾರಣವಾಗಿದೆ.

ರಮೇಶ ಗಡದನ್ನವರರ ಹೆಸರಿನಲ್ಲಿ ಇಂದು ಆನೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳು, ಸೇವಾ ಸಂಸ್ಥೆಗಳು, ಸಂಘಟನೆಗಳು ಪ್ರಾರಂಭವಾಗಿವೆ. ಈ ಸುದ್ದಿ ಅಂದು ಮಾಧ್ಯಮಗಳಲ್ಲೆಲ್ಲ ವ್ಯಾಪಕವಾಗಿ ಹರಡಬೇಕಿತ್ತು. ಆದರೆ, ಕೆಲ ಸಚಿವರ ಹಣದ ಪ್ರಭಾವ ಕೆಲಸ ಮಾಡಿತ್ತೋ ಗೊತ್ತಿಲ್ಲ ಎಲ್ಲಿಯೂ ಕೂಡಾ ಸುದ್ದಿಯಾಗಲೇ ಇಲ್ಲ. ಸತ್ಯ, ಪ್ರಾಮಾಣಿಕತೆಗೆ ಇಂದಿನ ಕಾಲದಲ್ಲಿ ಬೆಲೆ ಇಲ್ಲವೆಂದು ತಿಳಿದಿರುವ ಆನೇಕರ ಮಾತನ್ನು ಈ ವ್ಯಕ್ತಿಯ ವ್ಯಕ್ತಿತ್ವ ಹುಸಿಯಾಗಿಸಿದೆ. ದೇವರು ಕಾಣದಿದ್ದರೂ ದೇವರಂತಹ ವ್ಯಕ್ತಿಗಳಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

✍️ ಡಾ. ಜಗದೀಶ್ ಮಾನೆ
ನವೀನ ಹಳೆಯದು