ವಿಶ್ವದ ಅತೀ ದೊಡ್ಡ ಸಫಾರಿ ಪಾರ್ಕ್ ಗೆ ಸಾಕ್ಷಿಯಾಗಲಿದೆಯಾ ಮುಧೋಳ ತಾಲೂಕು?


ಮುಧೋಳ: ವಿಶ್ವದಲ್ಲಿಯೇ ಅತಿದೊಡ್ಡದಾದ ದುಬೈನ ಶಾರ್ಜಾ ಸಫಾರಿ ಪಾರ್ಕ್ ಅಂದಾಜು 2,000 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಶಾರ್ಜಾ ಸಫಾರಿ ಪಾರ್ಕ್‌ಕ್ಕಿಂತ ದೊಡ್ಡದಾದ `ಸಫಾರಿ ಪಾರ್ಕ್ ಹರಿಯಾಣ ರಾಜ್ಯದ ಅರಾವಳಿ ಪರ್ವತ ಶ್ರೇಣಿಗಳಲ್ಲಿರುವ ಗುರುಗ್ರಾಮ ಸಮೀಪ ಅಂದಾಜು 10,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಹರಿಯಾಣದ ಈ ಸಫಾರಿ ಪಾರ್ಕ್‌ವು ವಿಶ್ವದ ಅತಿದೊಡ್ಡ ಸಫಾರಿ ಪಾರ್ಕ್ ಆಗಲಿದೆ. ಅದರಂತೆ ಈಗ 24,000 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಯದಹಳ್ಳಿ ರಾಷ್ಟ್ರೀಯ ಚಿಂಕಾರ ವನ್ಯಧಾಮಕ್ಕೆ ಸರಕಾರವು ಕೃಪೆ ತೋರಿದಲ್ಲಿ ಅಲ್ಲಲ್ಲಿ ವಿವಿಧ ಪ್ರಾಣಿಗಳ ಸ್ಥಳ ಮೀಸಲಿಟ್ಟು ವಿಶ್ವದ ಅತಿದೊಡ್ಡ ಸಫಾರಿ ಪಾರ್ಕ್ ಮಾಡಬಹುದು. ಇದರಿಂದ ಭಾರತದಲ್ಲಿ ಪ್ರವಾಸೋಧ್ಯಮಕ್ಕೆ ಉತ್ತೇಜನ ಹಾಗೂ ಲಕ್ಷಾಂತರ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಗ್ರಾಮೀಣ ಭಾಷೆಯಲ್ಲಿ ಚಿಗರಿ ಎಂದು ಕರೆಯುವ ಕಂದು ಬಣ್ಣದ ಶರೀರದಿಂದ ಮಿರಿಮಿರಿ ಮಿಂಚುವ ಚಿಂಕಾರ ಪ್ರಾಣಿಯು ಭಾರತದಲ್ಲಿನ ಅಪರೂಪದ ಪ್ರಾಣಿ ಸಂಕುಲದಲ್ಲಿ ಒಂದಾಗಿದೆ.
ಮುಧೋಳ & ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಚಿಂಕಾರಾಗಳು

ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿ ಸಂಕುಲಗಳಲ್ಲಿ ಹಲವಾರು ಪ್ರಾಣಿಗಳು ಮಾನವನ ಘರ್ಷಣೆಯಿಂದ ಹಾಗೂ ಸೂಕ್ತ ಸೌಲಭ್ಯಗಳ ಕೊರತೆಯಿಂದ ಅಳಿವಿನ ಅಂಚಿಗೆ ತಲುಪಿವೆ. ಇಂತಹ ಅಳಿವಿನ ಅಂಚಿನಲ್ಲಿರುವ ಚಿಂಕಾರ ವನ್ಯಜೀವಿಯನ್ನು ಸಾರ್ವಜನಿಕರು ಹಾಗೂ ಸರಕಾರವು ವಿಶೇಷ ಮುತವರ್ಜಿಯಿಂದ ಉಳಿಸಿಕೊಳ್ಳಬೇಕಾಗಿದೆ. ಕೋಯಿಮುತ್ತೂರ ಮೂಲದ ಪಕ್ಷಿ ವಿಜ್ಞಾನ ಹಾಗೂ ನೈಸರ್ಗಿಕ ಇತಿಹಾಸ ಸಂಸ್ಥೆಯ ಸಲೀಂ ಅಲಿ ಹಾಗೂ ಡಾ. ಹೆಚ್.ಎನ್.ಕುಮಾರರವರು 3 ತಿಂಗಳು ಗಳ ಕಾಲ 72 ಟಾವರ್‌ಗಳ ಮೂಲಕ ಈ ಯಡಹಳ್ಳಿ ವನ್ಯಧಾಮ ದಲ್ಲಿರುವ ಸಕಲ ಪ್ರಾಣಿ-ಪಕ್ಷಿಗಳ ಚಲನವಲನ ಹಾಗೂ ಜೀವನಕ್ರಮಗಳ ಕುರಿತು ಅಭ್ಯಸಿಸಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ವಯ ಜಿಂಕೆ ಜಾತಿಗೆ ಸೇರಿದ ಚಿಂಕಾರ (ಇಂಡಿಯನ್ ಗೆಝಲ್) ಪ್ರಾಣಿ ಸಂಕುಲವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಅರಣ್ಯ ಇಲಾಖೆಯ ಶಿಫಾರಸ್ಸಿನ ಪ್ರಕಾರ ಕರ್ನಾಟಕ ಘನ ಸರಕಾರವು 2016ರಲ್ಲಿ ಈ ಪ್ರದೇಶವನ್ನು 'ಯಡಹಳ್ಳಿ ರಾಷ್ಟ್ರೀಯ ಚಿಂಕಾರ ವನ್ಯಧಾಮ' ಎಂದು ಘೋಷಿಸಲಾಯಿತು. 


ಮುಧೋಳ & ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಚಿಂಕಾರಾಗಳು

ಇದು ರಾಜ್ಯದ ಮೊದಲ ಚಿಂಕಾರ ವನ್ಯಧಾಮವಾಗಿದ್ದು, ದೇಶದ ಎರಡನೆಯ ವನ್ಯಧಾಮವಾಗಿದೆ. ಈ ವನ್ಯಧಾಮವು ಬೀಳಗಿ ಹಾಗೂ ಮುಧೋಳ ವಲಯದ ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ಮಧ್ಯದ 9,636 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಇಲ್ಲಿ ಚಿಂಕಾರ ಮಾತ್ರವಲ್ಲದೆ ಮೊಲ, ನರಿ, ಗುಳ್ಳೆ ನರಿ, ಕತ್ತೆಕಿರುಬ, ಮುಳ್ಳುಹಂದಿ, ಕಾಡು ಬೆಕ್ಕು, ಸ್ಯಾಂಡ್‌ಸ್, ಥೀಕ್ಷೀ, ಇಂಡಿಯನ್ ಕರ್ಸರ್, ತೋಳ, ಕಾಡು ಹಂದಿ, ನವಿಲು, ಬುರ್ಲಿ, ಬೆಳವು, ಕೌಜುಗ, ಸರೀಸೃಪ, ಜಲಚರ, ಸಸ್ತನಿ, ಬಣ್ಣದ ಬಣ್ಣದ ಚಿಟ್ಟೆ, ಹದ್ದು, ಗುಬ್ಬಿ, ಗಿಳಿ, ಕಾಗೆ ಸೇರಿದಂತೆ ಹಲವಾರು ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಈ ಯಡಹಳ್ಳಿಯ ಅರಣ್ಯ ಪ್ರದೇಶವು ಕೇವಲ ಅನೇಕ ಎಲೆ ಉದುರುವ ಜಾತಿಯ ಕುರುಚಲು ಹಾಗೂ ವಿವಿಧ ಬಣ್ಣ-ಬಣ್ಣದ ಗಿಡಗಂಟಿಗಳನ್ನು ಹೊಂದಿರುವುದು ನೋಡುಗರ ಕಣ್ಣಿಗೆ ನೀಡುತ್ತಿದೆ. ಈ ವನ್ಯಧಾಮವು ಸುಮಾರು 100 ಚ.ಕಿ.ಮಿಗಳಷ್ಟು ವಿಶಾಲ ವಾದ ಪ್ರದೇಶದಲ್ಲಿ ಹಲವು ವೈವಿಧ್ಯತೆಗಳಿಂದ ಕೂಡಿದೆ. 


ಮುಧೋಳ & ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಕಳ್ಳ ಬೇಟೆ ತಡೆ ಶಿಬಿರಗಳು

ಇಲ್ಲಿರುವ ಶುಷ್ಕ ವಾತಾವರಣದಿಂದಾಗಿ ಸಸ್ಯಸಂಪತ್ತು ಅತ್ಯಂತ ವಿಶಿಷ್ಟ ರೂಪದಲ್ಲಿ ಬೆಳವಣಿಗೆಯನ್ನು ಹೊಂದಿದೆ. ಭಾರತದ ಕೆಲವೇ ಸ್ಥಳಗಳಲ್ಲಿ ಬೆಳೆಯುವ ಗುಗ್ಗುಳ, ದಿಂಡಲ, ಮಶಿವಾಳ, ಇಪ್ಪೆ, ಸೊಯಮಿಡ್ ಮುಂತಾದ ಅಪರೂಪದ ಪ್ರಭೇದಗಳ ಸಸ್ಯಕಾಶಿಯು ಈ ಅರಣ್ಯದಲ್ಲಿದೆ. ಇಂತಹ ವಿಶಿಷ್ಟ ಗುಣಗಳುಳ್ಳ ವಿವಿಧ ಸಸ್ಯರಾಶಿಯನ್ನು ಗುರುತಿಸಲು ಕೈಗೊಂಡ ಅಧ್ಯಯನದ ಪ್ರಕಾರ ಇಲ್ಲಿ 43ವಿವಿಧ ಕುಟುಂಬಗಳಿಗೆ ಹಾಗೂ 115 ವಿವಿಧ ಜಾತಿಗಳಿಗೆ ಸೇರಿದ ಒಟ್ಟು 143 ಸಸ್ಯ ಪ್ರಭೇದಗಳು ಇರುವುದು ಪತ್ತೆಯಾಗಿವೆ. ಇವುಗಳಲ್ಲಿ 6 ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿದ್ದು, 31 ಸಸ್ಯ ಪ್ರಭೇದಗಳು ಬಹುಬೇಡಿಕೆಯ ಔಷಧೀಯ ಗುಣಗಳನ್ನು ಹೊಂದಿವೆ.


ಮುಧೋಳ & ಬೀಳಗಿ ತಾಲೂಕಿನ ಅರಣ್ಯ ರಕ್ಷಣೆಗಾಗಿ ಅರಣ್ಯ ಅಧಿಕಾರಿಗಳು

ಈ ಅರಣ್ಯದಲ್ಲಿರುವ ಗುಲಾಬಿ ಬಣ್ಣದ ಅತ್ಯಂತ ಒರಟಾದ ಕಲ್ಲು ಕಟ್ಟಡದ ಆಕರ್ಷಣೆ 'ಗಾಗಿ ಭಾರೀ ಹೆಸರುವಾಸಿಯಾಗಿದೆ. ಸಧ್ಯ ಈ ಗುಲಾಬಿ ಬಣ್ಣದ ಕಲ್ಲು ಗಣಿಗಾರಿಕೆಯನ್ನು ಇಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ಸ್ಥಗಿತಗೊಳಿಸಲಾಗಿದೆ. ಈ ಚಿಂಕಾರ ವನ್ಯಧಾಮ ದಲ್ಲಿನ ನಿಸರ್ಗದ ಸುಂದರ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದು ಭೌಗೋಳಿಕವಾಗಿ ಕರ್ನಾಟಕದ ಬಯಲು ಸೀಮೆಯಲ್ಲಿದ್ದರೂ ಸಹ ಈ ಭಾಗದಲ್ಲಿ ತಂಪಾದ, ಪ್ರಶಾಂತ ಹಾಗೂ ದಟ್ಟವಾದ ಸಸ್ಯಸಂಕುಲವಿರುವುದು ವಿಶೇಷ. ಕಾಗವಾಡ-ಕಲಾದಗಿ ರಾಜ್ಯ ಹೆದ್ದಾರಿ ಹಾಗೂ ಮುಧೋಳ ಬೀಳಗಿ ರಸ್ತೆಗಳ ಮುಖಾಂತರ ಹಾಯ್ದು ಹೋಗುವಾಗ ಪಕ್ಕದಲ್ಲಿ ಕಾಣುವ ಈ ವನ್ಯಧಾಮವು ಮಲೆನಾಡಿನ ನಿಸರ್ಗಸಿರಿ ಯಂತೆ ಗೋಚರಿಸುತ್ತದೆ.

ಮುಧೋಳ & ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ನರಿಗಳು

ಈ ಬೆಳವಣಿಗೆಗಳಿಂದಾಗಿ ಈ ವನ್ಯಧಾಮವು ಚಿಂಕಾರದಂತಹ ಅಪರೂಪದ ಪ್ರಾಣಿ-ಪಕ್ಷಿ ಸಂಕುಲಗಳಿಗೆ ಸಾಕ್ಷಿಯಾಗಿದೆ. ಈ ವನ್ಯಧಾಮದಲ್ಲಿ ವಾಸಿಸುವ ಚಿಂಕಾರಗಳು ನೀಲಗಾಯ್ ಹಾಗೂ ಬ್ಲಾಕ್ ಬಕ್ಸ್ ತಳಿ ಎಂಬ ಎರಡು ಪ್ರಭೇದ ಗಳಿಂದ ಕೂಡಿವೆ. ಇವು ಶುಷ್ಕ ವಾತಾವರಣ ಪ್ರದೇಶ, ಕಲ್ಲಿನ ಪ್ರದೇಶ, ಉಪ ಉಷ್ಣವಲಯ, ಲಘು ಕಾಡು ಹಾಗೂ ಕುರುಚಲು ಗಿಡಗಂಟೆಗಳಲ್ಲಿ ವಾಸಿಸಲು ಇಷ್ಟಪಡುತ್ತವೆ.
ಮುಧೋಳ & ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡು ಬರುವ ನೀರಿನ ಝರಿಗಳು & ಸಣ್ಣ ಜಲಪಾತಗಳು
ಇಂತಹ ಯೋಗ್ಯ ತಾಣವನ್ನು ಹೊಂದಿದ ಈ ಯಡಹಳ್ಳಿ ವನ್ಯಧಾಮವು ಚಿಂಕಾರ ಪ್ರಾಣಿಯ ವಾಸಸ್ಥಾನಕ್ಕೆ ಹೇಳಿ ಮಾಡಿಸಿದಂತಿದೆ. ಈ ಪ್ರಾಣಿಯು ಮಾನವ ಘರ್ಷಣೆ, ಮಾನವನ ಚಲನ - ವಲನ ಹಾಗೂ ಮಾನವ ವಾಸನಾ ಸಂವೇದಿಯನ್ನು ಬಹು ದೂರದಿಂದಲೆ ಪತ್ತೇಹಚ್ಚಿ ಓಡಿ ಹೋಗುವ ಸ್ವಭಾವವನ್ನು ಹೊಂದಿರುವುದು ವಿಶೇಷ, ಪ್ರಾಣಿ ಸಂಕುಲದಲ್ಲೇ ಅತ್ಯಂತ ನಾಚಿಕೆ ಹಾಗೂ ಅಂಜುಬುರುಕು ಪ್ರಾಣಿಯಾಗಿರುವ ಈ ಚಿಂಕಾರ ಪ್ರಾಣಿಯ ಸಂತತಿಯ ಅಭಿವೃದ್ಧಿಯು ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಸವಾಲಾಗಿ ಪರಿಣಮಿಸಿದೆ. ಇತ್ತೀಚಿಗೆ ಮಾಡಿದ ಸರ್ವೆ ಪ್ರಕಾರ ಚಿಂಕಾರ ಪ್ರಾಣಿಗಳು 2016ರಲ್ಲಿ 85 ಇದ್ದದ್ದು ಈಗ 2022ರ ಸರ್ವೆ ಪ್ರಕಾರ 92ಕ್ಕೇರಿವೆ. ಇಲ್ಲಿನ ಚಿಂಕಾರ ಪ್ರಾಣಿಗಳ ಲಿಂಗಾನುಪಾತವು 1:0.83 (ಗಂಡು:ಹೆಣ್ಣು) ಇರುತ್ತದೆ. ದೇಶದ ಪ್ರಥಮ ಚಿಂಕಾರ ವನ್ಯಧಾಮವಾದ ರಾಜಸ್ಥಾನದ ಅಂಕಿ ಅಂಶಗಳಿಗೆ ಹೋಲಿಸಿದಲ್ಲಿ ಇಲ್ಲಿನ ಚಿಂಕಾರ ಸಂತತಿಯ ಬೆಳವಣಿಗೆಯು ಒಟ್ಟಾರೆ ಆಶಾದಾಯಕ ಸ್ಥಿತಿಯಲ್ಲಿದೆ.
ಮುಧೋಳ & ಬೀಳಗಿ ತಾಲೂಕಿನ ಕುರುಚಲು ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಸುಂದರ ದೃಶ್ಯ.
ಈ ಪ್ರದೇಶದ ಸುತ್ತಲಿನ ಹನ್ನೆರಡು ಹಳ್ಳಿಗಳ ಜನರು ದಿನನಿತ್ಯದ ಆಹಾರ ತಯಾರಿಕೆಗಾಗಿ ಅರಣ್ಯದಲ್ಲಿನ ಒಣ ಕಟ್ಟಿಗೆಯನ್ನು ಉರುವಲಾಗಿ ಉಪಯೋಗಿಸುತ್ತಿರುವುದರಿಂದ ಈ ಅರಣ್ಯವು ಮಾನವನ ಚಟುವಟಿಕೆಗಳಿಗೆ ಮುಕ್ತವಾದ ಪ್ರದೇಶವಾಗಿತ್ತು. ರಾಜ್ಯ ಸರಕಾರದ 2016ರ ಅಧಿಸೂಚನೆಯ ನಂತರ ಮಾನವ ಚಟುವಟಿಕೆಯನ್ನು ಸಂಪೂರ್ಣ ನಿಯಂತ್ರಿಸಲು ಈ ವನ್ಯಧಾಮದ ವ್ಯಾಪ್ತಿಯ ಸುತ್ತಲಿನ ಹಳ್ಳಿಯ ಕುಟುಂಬಗಳಿಗೆ ಎಲ್‌ಪಿಜಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯ ಸರಕಾರವು ಈ ವನ್ಯಧಾಮದಲ್ಲಿ ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಿದ ಪ್ರಯುಕ್ತ ಮಾನವನ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿವೆ. ಸಧ್ಯ ಈ ಎಲ್ಲ ಬೆಳವಣಿಗೆಗಳಿಂದ ಚಿಂಕಾರ ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಸಂತತಿಯು ಇಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ.

ನವೀನ ಹಳೆಯದು