ರಾಜಕೀಯ ಪ್ರಾಶಸ್ತ್ಯ ವಂಚಿತ ಮುಧೋಳ ತಾಲೂಕು✒️ ಗುರುರಾಜ್ ಪೋತನಿಸ್


ಬಾಗಲಕೋಟ ಜಿಲ್ಲೆಯ ಮುಧೋಳ ಎಂದೊಡನೆ ನಮಗೆ ನೆನಪಾಗುವುದು ಕವಿಚಕ್ರವರ್ತಿ ರನ್ನ, ಇಡೀ ವಿಶ್ವದ ಗಮನ ಸೆಳೆದ ಮುಧೋಳದ ಶ್ವಾನಗಳು, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹಾಗೂ ಅನೇಕ ರಾಜಕಾರಣಿಗಳಿಗೆ ರಾಜಕೀಯ ನೆಲೆ ಕಲ್ಪಿಸಿ ಅವರಿಗೆ ರಾಜಕೀಯ ರಂಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಗುರತಿಸುವಂತೆ ಮಾಡಿದ ತಾಲೂಕಾ ಕೇಂದ್ರವೇ ನಮ್ಮ ಮುಧೋಳವಾದರೂ ತಾಲೂಕಿನ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಮಾತ್ರ ರಾಜಕೀಯ ರಂಗದಲ್ಲಿ ಯೋಗ್ಯ ಪ್ರಾಶಸ್ತ್ಯ ಸಿಗದೆ ಇದ್ದದ್ದು ವಿಪರ್ಯಾಸದ ಸಂಗತಿಯಾಗಿದೆ.
1977 ರಲ್ಲಿ ಮುಧೋಳ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೂಂಡಿತು, ಪ್ರಾರಂಭದಲ್ಲಿ ಮುಧೋಳ ಕ್ಷೇತ್ರಕ್ಕೆ ಯೋಗ್ಯ ಉಮೇದವಾರ ಸಿಗಲೇ ಇಲ್ಲವೂ ಅಥವಾ ಮತ್ಯಾವದೊ ಕಾರಣದಿಂದ ಪರಸ್ಥಳದವರು ಇಲ್ಲಿ ಚುನಾವಣೆ ಸ್ಪರ್ದಿಸಿ ಗೆಲ್ಲಲಿ ಅಥವಾ ಸೋಲಲಿ ಮತ್ತೆ ಕ್ಷೇತ್ರದ ಕಡೆಗೆ ಮುಖ ಮಾಡುತ್ತಿರಲಿಲ್ಲ ಆದರೆ 1989 ರಿಂದ ಇವತ್ತಿನ ವರೆಗೂಆಯ್ಕೆಯಾದ ಆರ್ ಬಿ ತಿಮ್ಮಾಪೂರ ಹಾಗೂ ಗೋವಿಂದ ಕಾರಜೋಳ ಅವರು  ಸೋಲು ಗೆಲುವಿನ ಮಧ್ಯಯೂ ಕ್ಷೆತ್ರದಲ್ಲಿ ನೆಲೆಯೂರಿ ನಿಲ್ಲುವದರ ಜೋತೆಗೆ  ಅಧಿಕಾರದ ಗದ್ದುಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಂದಿದ್ದಾರೆ ಆದರೆ ವಿಪರ್ಯಾಸದ ಸಂಗತಿ ಅಂದರೆ  ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾತ್ರ ಕೇವಲ ಕಾರ್ಯಕರ್ತರಾಗಿ  ಪಕ್ಷಗಳ ಸಂಘಟನೆಗಾಗಿ ಹಗಲಿರುಳು ಶ್ರಮಿಸಿ  ಕೇವಲ ನಗರ ಸಭೆ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಇಲ್ಲವೆ ಸದಸ್ಯರಾಗುವಲ್ಲಿಯೇ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಕಳೆದ ಏಳು ದಶಕಗಳಿಂದಾ ನಮ್ಮ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಸಂಸತ್ ಸದಸ್ಯರಾದವರ ಅವಧಿಯನ್ನು ಪರಿಶೀಲಿಸಿದಾಗ ಅಂದಿನ ಮುಂಬಯಿ ರಾಜ್ಯದ ಬಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ರಾಮಪ್ಪಾ ಬಿದರಿ 1952 ರಿಂದ 1962(ಎರಡು ಅವಧಿ).ನಂತರ ಬಾಗಲಕೋಟ ಲೋಕಸಭಾ ಸಭಾಕ್ಷೇತ್ರ ಪ್ರತ್ಯೇಕವಾದ ಬಳಿಕ ಸಂಗಪ್ಪಗೌಡ ಬಿ ಪಾಟೀಲ 1962 ರಿಂದ 1977( ಮೂರು ಅವಧಿ) ಕರ್ನಾಟಕ ಪ್ರತ್ಯೇಕ ರಾಜ್ಯ ಎಂದು ಘೋಷಣೆಯಾದ ನಂತರ ಮತ್ತೆ ಸಂಗನಗೌಡ ಬಿ ಪಾಟೀಲ 1977-1980  (ಒಂದು ಅವಧಿ) ವೀರೇಂದ್ರ ಪಾಟೀಲ್ 1980-1984(ಒಂದು ಅವಧಿ) ಎಚ್ ಬಿ ಪಾಟೀಲ 1984-1989 (ಒಂದು ಅವಧಿ) ಎಸ್ ಟಿ ಪಾಟೀಲ 1989-1991 (ಒಂದು ಅವಧಿ) ಸಿದ್ದು ನ್ಯಾಮಗೌಡ 1991-1996 (ಒಂದು ಅವಧಿ) ಹುಲ್ಲಪ್ಪಾ ಮೇಟಿ 1996-1998 (ಒಂದು ಅವಧಿ) ಅಜಯಕುಮಾರ ಸರನಾಯಕ್ 1998-1999 (ಒಂದು ಅವಧಿ)ಆರ್ ಎಸ್ ಪಾಟೀಲ 1999-2004 (ಒಂದು ಅವಧಿ) ಹಾಗೂ ಪಿ ಸಿ ಗದ್ದಿಗೌಡರ ಅವರು  2004 ರಿಂದ ಇಂದಿನ ವರೆಗೆ ನಾಲ್ಕನೇಯ ಬಾರಿಗೆ  ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ.


ದಿ. ಶ್ರೀ ಎಸ್ ಟಿ ಪಾಟೀಲ್

ಕಳೆದ 70ವರ್ಷಗಳಲ್ಲಿ  ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆ ಯಿಂದ ಹತ್ತು ಜನರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರಾದರೂ ಎಸ್ ಟಿ ಪಾಟೀಲ ಅವರ ರೂಪದಲ್ಲಿ ಮುಧೋಳ ತಾಲೂಕಿನ ವ್ಯಕ್ತಿ  ಲೋಕಸಭಾ ಸದಸ್ಯರಾಗುವ ಅವಕಾಶ ದೊರೆತಿದ್ದು ಒಮ್ಮೆ ಮಾತ್ರ  ಅದು ಕೇವಲ ಹದಿನಾಲ್ಕು ತಿಂಗಳ ಅಲ್ಪಾವಧಿಗಾಗಿ  ವಿಶೇಷ ಎಂದರೆ ಈ ಲೋಕಸಭೆಯ ಚುನಾವಣೆಯಲ್ಲಿ ಮುಧೋಳ ತಾಲೂಕಿನ ಒಂದೆ ಗ್ರಾಮದ (ಮಂಟೂರ)ಎಸ್ ಟಿ ಪಾಟೀಲ (ಕಾಂಗ್ರೆಸ್) ಹಾಗೂ ಎಸ್ ಎಸ್ ಮಲಘಾಣ (ಜನತಾ ದಳ)ಪರಸ್ಪರರ ವಿರುದ್ಧ ಸ್ಪರ್ದಿಸಿದ್ದು ಇತಿಹಾಸ. ತಾಲೂಕಿನಲ್ಲಿ  ರಾಜಕೀಯ ಪಕ್ಷಗಳನ್ನು ಕಟ್ಟಿ ಬೆಳೆಸಲು ಇವತ್ತಿನ ವರೆಗೆ ಅನೇಕ ಮಹನೀಯರು ಅವಿರತವಾಗಿ ಶ್ರಮಿಸುತ್ತಿದ್ದು, ರಾಜಕೀಯ ಪಕ್ಷಗಳ ತತ್ವಸಿದ್ಧಾಂತಗಳನ್ನು ಜನರ ಮನೆ ಹಾಗೂ ಮನಸ್ಸುಗಳಿಗೆ ತಲುಪಿಸುತ್ತಿದ್ದಾರಲ್ಲದೆ ತಾವು ನಂಬಿದ ಧುರೀಣರಲ್ಲಿ ದೇವರನ್ನು ಕಾಣುತಿದ್ದಾರೆ ಆದರೆ ದುರದೃಷ್ಟವಶಾತ್ ಇವರು ನಂಬಿದ ದೇವರು ಮಾತ್ರ ಕಣ್ಣು ತರೆಯುತ್ತಿಲ್ಲ ಎಂದು ಹೇಳಬಹುದು. ಮುಧೋಳ ಮೀಸಲು ಕ್ಷೇತ್ರವಾಗಿದ್ದರಿಂದಾ ಸಾಮಾನ್ಯ ವರ್ಗದವರಿಗೆ ವಿಧಾನಸಭೆ ಸದಸ್ಯರಾಗುವದು ಇಲ್ಲಿ ಸಧ್ಯಕಂತೂ ಗಗನಕುಸುಮವಾದರೂ, ವಿಧಾನ ಪರಿಷತ್ ಸದಸ್ಯತ್ವದ ಭಾಗ್ಯವೂ ತಾಲೂಕಿನ ಸಮಾನ್ಯ ವರ್ಗದ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಇಲ್ಲಾ. ರಾಜಕೀಯದಲ್ಲಿ 80%ಸಮಾಜಕಾರಣ ಹಾಗೂ 20% ರಾಜಕಾರಣ ಇರಬೇಕು, ಜನರು ಸಮಾಜ ಕಾರ್ಯಗಳ ಮೂಲಕ ರಾಜಕೀಯ ಮಾಡಬೇಕು ಆದರೆ ಈಗ ಎಲ್ಲವೂ ತದ್ವಿರುದ್ಧ. ರಾಜಕೀಯ ಪಕ್ಷಗಳ ತತ್ವಸಿದ್ಧಾಂತಗಳನ್ನು ನಂಬಿ ಪಕ್ಷಗಳ ಸಂಘಟನೆಗಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಪ್ರಾಶಸ್ತ್ಯ ಸಿಗುತ್ತಿಲ್ಲಾ ಎಂಬ ನೋವು ಪ್ರತಿಯೊಂದು ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿದೆ. ಇತ್ತೀಚೆಗೆ ತಾಲೂಕಿನ ಚಿಂಚಖಂಡಿ ಗ್ರಾಮದ ಮಂಜುನಾಥ್ ಅರಳಿಕಟ್ಟಿ ಎಂಬ ಯುವಕ ಸಾಮಾನ್ಯ ಜನಾಂಗದವರಿಗೂ ರಾಜಕೀಯ ಪ್ರಾಶಸ್ತ್ಯ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎತ್ತಿದ ಧ್ವನಿ ಜನಸಾಮಾನ್ಯರ ಪ್ರಶಂಶಗೆ ಪಾತ್ರವಾಗಿತ್ತು. ನಮ್ಮ ಮುಧೋಳ ತಾಲೂಕಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಾವಂತರು ಸಾಮಾಜಿಕ ಕಳಕಳಿಯುಳ್ಳುವರು ಹಾಗೂ ವಿಶ್ವಾಸಾರ್ಹರು ಹೌದು. ಈಗಲೂ ಕಾಲ ಮಿಂಚಿಲ್ಲಾ ನಮ್ಮ ತಾಲೂಕಿನ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಯೋಗ್ಯ ಸ್ಥಾನಮಾನ ಸಿಗಲಿ, ವಿಧಾನ ಸಭೆಗೆ ಸಾಧ್ಯವಿಲ್ಲವಾದರೂ ವಿಧಾನ ಪರಿಷತ್ತಿನ ಸದಸ್ಯರಾಗಿ ಇಲ್ಲವೇ ಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಮುಧೋಳ ತಾಲೂಕಿನ ವ್ಯಕ್ತಿಗೆ ಅವಕಾಶ ನೀಡುವುದರ ಮೂಲಕ 1989 ರ ನಂತರ ಇಪ್ಪತ್ತನಾಲ್ಕು ವರ್ಷಗಳ ದೀರ್ಘಾವಧಿಯ ನಂತರ ಸಂಸತ್ ಭವನದಲ್ಲಿ ಮುಧೋಳ ತಾಲೂಕಿನ ಸಾಮಾನ್ಯ ರಾಜಕೀಯ ಪಕ್ಷದ ಕಾರ್ಯಕರ್ತನ ಧ್ದನಿ ಪ್ರತಿಧ್ವನಿಸಲಿ ಎಂಬುದು ಮುಧೋಳ ತಾಲೂಕಿನ ಪ್ರತಿಯೋಬ್ಬರ ಮನದಾಳದ ಆಶಯವಾಗಿದೆ.
.
ನವೀನ ಹಳೆಯದು