ಕಾರಜೋಳರ ರಾಜಕೀಯ ಜೀವನದ ಇಣುಕು ನೋಟ


ಮುಧೋಳ: ಅದೊಮ್ಮೆ ವಿಜಯಪುರದ ಸಿದ್ದೇಶ್ವರ ದೇವಸ್ಥಾನದಲ್ಲಿ ಜನತಾಪರಿವಾರದ ಹಿರಿಯರೊಂದಿಗೆ ರಾಮಕೃಷ್ಣ ಹೆಗಡೆ ಸಭೆ ನಡೆಸಿದ್ದರು. ಆಲಮಟ್ಟಿ ಐ.ಬಿ.ಗೆ ಬರುವಂತೆ ಗೆಳೆಯರೊಬ್ಬರ ಮೂಲಕ ನನಗೆ ಬುಲಾವ್ ನೀಡಿದ್ದರು. ಆಗಿನ್ನೂ ನಾನು ಸರ್ಕಾರಿ ನೌಕರ, ತುಸು ಅಂಜಿಕೆಯಿಂದಲೇ ಹೋದೆ. ರಾತ್ರಿ 11 ಗಂಟೆಗೆ ಬಂದ ಹೆಗಡೆ ನೇರವಾಗಿ ದೇವೇಗೌಡರು ಉಳಿದಿದ್ದ ಕೊಠಡಿಗೆ ಕರೆದೊಯ್ದರು. ಮುಧೋಳದಲ್ಲಿ ಇವರೇ ನಮ್ಮ ಅಭ್ಯರ್ಥಿ ಎಂದು ಪರಿಚಯಿಸಿದರು. 'ಉತ್ತರ ಕರ್ನಾಟಕದಲ್ಲಿ ನೀವು ಹೇಳಿದಂತೆ, ನಮ್ಮದೇನೂ ಅಭ್ಯಂತರ ವಿಲ್ಲ' ಎಂದು ಗೌಡರು ಪ್ರತಿಕ್ರಿಯಿಸಿದರು. 'ನೌಕರಿಗೆ ತಕ್ಷಣ ರಾಜೀನಾಮೆ ಕೊಟ್ಟುಬಿಡು ಎಲೆಕ್ಷನ್‌ಗೆ ನಿಲ್ಲುವೆಯಂತೆ' ಎಂದು ಹೆಗಡೆ ಸೂಚಿಸಿದರು. ಮರು ಮಾತನಾಡದೇ ಅಲ್ಲಿಯೇ ಕುಳಿತು ರಾಜೀನಾಮೆ ಪತ್ರ ಬರೆದೆ...

ಹೀಗೆ 1994ರ ಆರಂಭದ ದಿನಗಳನ್ನು ಶಾಸಕ ಗೋವಿಂದ ಕಾರಜೋಳ ಮೆಲುಕು ಹಾಕಿದರು. ಮೊದಲ ಬಾರಿ ಸ್ಪರ್ಧೆಯ ಆ ದಿನಗಳ ನೆನಪನ್ನು ಹಂಚಿಕೊಡಿದ್ದಾರೆ ಅವರು, 'ಹೆಗಡೆ ಅವರ ಮೌಲ್ಯಾಧಾರಿತ ಆಶಯಗಳ ಪ್ರಭೆ ಆಗ ನಮ್ಮಂತಹ ದನಿ ಇಲ್ಲದ ಅಸಂಖ್ಯಾತ ಯುವಕರನ್ನು ಸಾರ್ವಜನಿಕ ಬದುಕಿಗೆ ಸೆಳೆದಿತ್ತು. ನಾನು ರಾಜಕೀಯದ ನಾವೆ ಏರಲು ಆ ಅಭಿಮಾನವೇ ಹರಿ ಗೋಲಾಯಿತು' ಎನ್ನುತ್ತಾರೆ. 'ಅಂದು ಹೆಗಡೆ ಸಮುದ್ರಕ್ಕೆ ಹಾರುವಂತೆ ಹೇಳಿದರೂ ಮರು ಮಾತಿಲ್ಲದೇ ಕೇಳುತ್ತಿ ದ್ದೆವು. ಹಾಗಾಗಿ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಡುವ ವಿಚಾರ ಅಂದು ದೊಡ್ಡದೆನಿಸಲಿಲ್ಲ' ಎಂದು ಅರೆ ಕ್ಷಣ ಭಾವುಕರಾದರು.

ದಿ. ಶ್ರೀ ರಾಮಕೃಷ್ಣ ಹೆಗಡೆ

ಹೆಗಡೆ ಅಂದು ಬರೀ ಟಿಕೆಟ್ ಕೊಡಿಸಲಿಲ್ಲ. ಚುನಾವಣೆ ಖರ್ಚಿಗೆಂದು ₹50 ಸಾವಿರ ಇಡುಗಂಟು, ನಾಲ್ಕು ಜೀಪು ಕಳಿಸಿಕೊಟ್ಟರು. ನಾನು ಅಭ್ಯರ್ಥಿ ಎಂಬ ವಿಚಾರ ತಿಳಿದ ಕ್ಷೇತ್ರದ ಮಿತ್ರರು ದೇಣಿಗೆ ಸಂಗ್ರಹಿಸಿ ₹12.5 ಲಕ್ಷ ಕೂಡಿಸಿಕೊಟ್ಟರು. ಆದರೆ ಅಷ್ಟು ಹಣ ಖರ್ಚಾಗಲಿಲ್ಲ. ಉಳಿದದ್ದು ಮರಳಿಸಿದೆ. ಬರೀ ಚುರು ಮುರಿ-ಚೂಡಾ, ಚಹಾ ಕುಡಿದು ಊರೂರು ಸುತ್ತಿದ ಕಾರ್ಯಕರ್ತರು, ರಾಜ್ಯದ ಇತರೆಡೆಯಂತೆ ಜನತಾದಳದ ಚಕ್ರದ ಓಟವನ್ನು ಮುಧೋಳದಲ್ಲೂ ಅಬಾಧಿತವಾಗಿಸಿದರು. ಫಲಿತಾಂಶ ಬಂದಾಗ 23 ಸಾವಿರ ಮತಗಳ ಅಂತ ರದ ಗೆಲುವು ನನ್ನನ್ನು ವಿಧಾನ ಸೌಧದ ಅಂಗಳ ತಲುಪಿಸಿತ್ತು. ಅದೆಲ್ಲವೂ ಹೆಗಡೆ, ಬೊಮ್ಮಾಯಿ ಮಾರ್ಗದರ್ಶನ, ಮುಧೋಳದ ಜನರ ಒತ್ತಾಸೆಯ ಫಲ' ಎಂದು ವಿನಮ್ರವಾಗಿ ಹೇಳುತ್ತಾರೆ.

ಹೀಗೆ ರನ್ನನೂರಿನಲ್ಲೇ ರಾಜಕೀಯ ನೆಲೆ ಕಂಡುಕೊಂಡು ಹ್ಯಾಟ್ರಿಕ್ ಸಾಧನೆಯೊಂದಿಗೆ ನಾಲ್ಕು ಬಾರಿ ಶಾಸಕರಾಗಿರುವ ಗೋವಿಂದ ಕಾರಜೋಳ, ಮೊದಲು ಸಮ್ಮಿಶ್ರ ಸರ್ಕಾರದಲ್ಲಿ ನಂತರ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ನಾಡು,ನುಡಿ, ಸಂಸ್ಕೃತಿಯ ಕಾವಲು ಭಟನಾಗುವ ಹೊಣೆಯ ಜೊತೆಗೆ ಸಣ್ಣ ನೀರಾವರಿ ಖಾತೆ ಮೂಲಕ ರಾಜ್ಯದ ಕೆರೆ-ಕಟ್ಟೆ, ಬಾಂದಾರಗಳಿಗೆ ಜೀವ ಕೊಟ್ಟಿದ್ದಾರೆ. ಇದೀಗ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಹಿರಿತನ ಧಾರೆ ಎರೆದಿದ್ದಾರೆ. ಅದೇ ಕಾರಣಕ್ಕೆ ಈಗ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪರ ನೆಚ್ಚಿನ ಬಂಟ.

ಶುಗರ್ ಫ್ಯಾಕ್ಟರಿ ಕನಸು ಈಡೇರಿಕೆ: 90ರ ದಶಕದಲ್ಲಿಯೇ ಮುಧೋಳ ಶೇ 48ರಷ್ಟು ನೀರಾವರಿ ಸೌಲಭ್ಯ ಹೊಂದಿತ್ತು. ಕಬ್ಬು ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆ. ಸಮೀರವಾಡಿಯ ಸೋಮಯ್ಯ ಶುಗರ್ಸ್ ಮಾತ್ರ ಆಗ ರೈತರಿಗೆ ಆಧಾರ. ಕಾರ್ಖಾನೆಯ ಕ್ರಷಿಂಗ್‌ ಮಿತಿ ಆಧರಿಸಿ ರೈತರು ಕಬ್ಬು ಬೆಳೆಯಬೇಕಿತ್ತು. ಹೆಚ್ಚು ಬೆಳೆದರೆ ಅದು ಹೊಲದ ಪಾಲು. ಮೊದಲ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿದಾಗ ಕಬ್ಬು ಬೆಳೆಗಾರರ ಸಂಕಷ್ಟ ಮನದಟ್ಟಾಯಿತು. ಅದೊಮ್ಮೆ ಮಠಕ್ಕೆ ಕರೆಸಿದ್ದ ಕಸಬಾ ಜಂಬಗಿಯ ರುದ್ರಮುನಿ ಶಿವಾಚಾರ್ಯರು, 'ಚುನಾವಣೆ ಬಂದಾಗ ಬಹಳಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಜನರ ಮನದಲ್ಲಿ ನೆಲೆ ಕಂಡುಕೊಳ್ಳುವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ನೀ ಆರಿಸಿ ಬಂದರೆ ಊರಾಗೆ ಒಂದು ದನದ ಹಾಗೂ ಮನುಷ್ಯರ ದವಾಖಾನೆ, ಶುಗರ್ ಫ್ಯಾಕ್ಟರಿ ಆರಂಭಿಸಬೇಕು' ಎಂದಿದ್ದರು. 'ನನಗೊಂದು ಅವಕಾಶ ಕೊಟ್ಟು ನೋಡಿ. ನೀವು ಹೇಳಿದ ಕೆಲಸ ಮಾಡದಿದ್ದರೆ ತಿರುಗಿ ಇತ್ತ ಬರುವುದಿಲ್ಲ ಎಂದು ಹೇಳಿದ್ದೆನು' ಎಂದು ಕಾರಜೋಳ ಸ್ಮರಿಸುತ್ತಾರೆ.

ದೇವೇಗೌಡರ ನೆರವು:

ಆಗ ಸಹಕಾರಿ ವಲಯದಲ್ಲಿ ರನ್ನ ಶುಗರ್ಸ್ ಆರಂಭಿಸಲು ತಿಮ್ಮಾಪುರದ ಬಳಿ ಸರ್ಕಾರ ಜಮೀನು ನೀಡಿತ್ತು. ಆದರೆ ಕಾರಣಾಂತರದಿಂದ ರನ್ನ ಸೊಸೈಟಿ ಲಿಕ್ವಿಡೇಟ್ ಮಾಡುವ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಫ್ಯಾಕ್ಟರಿ ಆರಂಭಿಸಲು ₹50 ಕೋಟಿ ಬೇಕಿತ್ತು. ಅದರಲ್ಲಿ ₹5 ಕೋಟಿ ರೈತರ ಪಾಲನ್ನು ಷೇರು ರೂಪದಲ್ಲಿ ಸಂಗ್ರಹಿಸುವ ಸವಾಲು ನನ್ನ ಮುಂದಿತ್ತು. ಈ ವಿಚಾರ ಆಗ ಮುಖ್ಯಮಂತ್ರಿ ಆಗಿದ್ದ ದೇವೇಗೌಡರ ಮುಂದಿಟ್ಟೆ. 'ಅಷ್ಟೊಂದು ಹಣ ಒಟ್ಟುಗೂಡಿಸುವುದು ಸಾಧ್ಯವಾ ನೀ ಇನ್ನೂ ಸಣ್ಣವನಿದ್ದೀಯ. ಆ ಹುಚ್ಚುತನ ಏಕೆ' ಎಂದು ಗೌಡರು ಪ್ರಶ್ನಿಸಿದ್ದರು. ಆದರೂ ಪಟ್ಟು ಬಿಡಲಿಲ್ಲ ಮನವೊಲಿಸಿದೆ. ಬೇಡಿಕೆಗೆ ಸ್ಪಂದಿಸಿದ ದೇವೇಗೌಡರು, ಲಿಕ್ವಿಡೇಶನ್ ಪ್ರಸ್ತಾವ ಪುರಸ್ಕರಿಸಿದರು. ಜೊತೆಗೆ ಸರ್ಕಾರದಿಂದಲೇ ₹50 ಲಕ್ಷ ಆರಂಭಿಕ ವಂತಿಗೆ ನೀಡಿದರು. ಇದು ನಮ್ಮ ಉತ್ಸಾಹ ಹೆಚ್ಚಿಸಿತು. ರೈತರಿಂದಲೂ ಉತ್ತಮ ಸ್ಪಂದನೆ ದೊರೆಯಿತು. ₹5 ಕೋಟಿ ಬದಲು 7 ಕೋಟಿ ವಂತಿಗೆ ಸಂಗ್ರಹವಾಗಿತ್ತು. ಹೀಗೆ ರನ್ನ ಶುಗರ್ಸ್ ಎಂಬ ಸಹಕಾರಿ ವಲಯದ ರತ್ನ ಅಂದು ಒಡಮೂಡಿತ್ತು. ಮುಂದಿನ ಚುನಾವಣೆ ವೇಳೆಗೆ ರುದ್ರಮುನಿ ಶಿವಾಚಾರ್ಯರ ಮೂರು ಬೇಡಿಕೆ ಈಡೇರಿಸಿದ್ದೆನು' ಎಂದು ಕಾರಜೋಳ ನೆನಪಿಸಿಕೊಳ್ಳುತ್ತಾರೆ. 'ಕಾರ್ಖಾನೆಗೆ ಮೊದಲ ಅವಧಿಗೆ ನಾನೇ ಅಧ್ಯಕ್ಷನಾಗಿದ್ದೆ. ಎರಡನೇ ಅವಧಿಗೆ ನಿರ್ದೇಶಕ ಸ್ಥಾನ ಕೂಡ ಹೊಂದಲಿಲ್ಲ. ಸ್ಥಳೀಯ ಮುಖಂಡರಿಗೆ ಬಿಟ್ಟುಕೊಟ್ಟೆ' ಎನ್ನುತ್ತಾರೆ.

'ಪ್ರಚಾರಕ್ಕೂ ಹೋಗದೆ ಅತಿಯಾದ ಆತ್ಮವಿಶ್ವಾಸ ತೋರಿದ ಫಲ 1999ರ ಚುನಾವಣೆಯಲ್ಲಿ ಕೇವಲ 437 ಮತಗಳಿಂದ ಸೋಲು. ಹಾಗೆಂದು ಜನರ ಒಡನಾಟ ಬಿಡಲಿಲ್ಲ. ಅದರ ಫಲ 2004ರ ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದ ಗೆಲುವು ದಕ್ಕಿತು. ಆಗಿನಿಂದಲೂ ಗೆಲುವಿನ ಚೈತ್ರಯಾತ್ರೆ ಮುಂದುವರಿದಿದೆ.

ದಿ. ಮಲಘಾಣರೊಂದಿಗೆ ಕಾರಜೋಳರು

ತಮ್ಮ ಹಿತೈಷಿಗಳಾಗಿದ್ದ ದಿವಂಗತ ಎಸ್.ಎಸ್.ಮಲಘಾಣ, ಮೂಲಿಮನಿ ಗುರುಗಳ ಒಲುಮೆಯೂ ಜನಪರತೆ ಹಾದಿಯಲ್ಲಿ ನನ್ನ ಕೈಹಿಡಿದು ನಡೆಸಿದೆ. ಈ ಬಾರಿಯೂ ಮುಧೋಳದ ಮತದಾರ ಪ್ರಭು ಈ ಸೇವಕನ ಕೈ ಬಿಡುವುದಿಲ್ಲ' ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ರಾಮನ ಬಂಟ ಹನುಮ: ದಲಿತರ ಮನೆಯಲ್ಲಿ ಊಟೋಪಹಾರ, ಬಡವರ ಕೇರಿಗಳಲ್ಲಿ ವಾಸ್ತವ್ಯ, ಪಕ್ಷದ ವೇದಿಕೆ, ವಿರೋಧಿಗಳೊಂದಿಗೆ ವಾಗ್ಯುದ್ಧದ ವೇಳೆ ಯಡಿಯೂರಪ್ಪ ಅವರಿಗೆ ಸಾಥ್ ನೀಡುತ್ತಿರುವುದು ಕಾರಜೋಳ ಅವರಿಗೆ ಪಕ್ಷದ ವಲಯದಲ್ಲಿ ರಾಮನ ಬಂಟ ಹನುಮ ಎಂಬ ವಿಶೇಷಣ ಸಿಕ್ಕಿದೆ ಎಂದು ಅವರ ಆಪ್ತರು ಹೇಳುತ್ತಾರೆ.

**

       ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಆಶ್ರಯ ನೀಡಿ ಅನ್ನ-ಜ್ಞಾನದ ದಾಸೋಹದ ಮೂಲಕ ನನ್ನನ್ನು ಉತ್ತಮ ಮನುಷ್ಯನಾಗಿ ರೂಪಿಸಿದ ಗಾಂಧಿವಾದಿ ಕಾಕಾ ಖಾಸನೀಸರು ನನಗೆ ಪ್ರಾತಃಸ್ಮರಣೀಯರು  

-ಗೋವಿಂದ ಕಾರಜೋಳ, ಶಾಸಕ

ನವೀನ ಹಳೆಯದು