ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಮುಧೋಳ ತಾಲೂಕಿಗೆ ಭೇಟಿ ನೀಡಿದಾಗ ನಡೆದ ಮರೆಯಲಾಗದ ಘಟನೆ

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಅತಿಥಿ ಗೃಹದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ ದೇವರಾಜ ಅರಸು 10-3-1977 ರಂದು ರಾತ್ರಿ ವಾಸ್ತವ್ಯ ಮಾಡಿದ್ದರು. ಆಗ ನಾನು ಆ ಕಾರ್ಖಾನೆಯ ಉದ್ಯೋಗಿಯಾಗಿದ್ದೆ ಹಾಗೂ ಅಲ್ಲಿಯ ಕಾರ್ಮಿಕ ಸಂಘದ ಅಧ್ಯಕ್ಷನಾಗಿದ್ದೆ. ಹೀಗಾಗಿ ಅರಸು ವಾಸ್ತವ್ಯದ ಉಸ್ತುವಾರಿ ನನ್ನ ಜವಾಬ್ದಾರಿಯಾಗಿತ್ತು. ಅರಸು ರಾತ್ರಿ ತಡವಾಗಿ ಅತಿಥಿಗೃಹಕ್ಕೆ ಬಂದರು. ಮುಂಜಾನೆ ಬೇಗನೆ ಉಪಹಾರ ಸಿದ್ಧ ಪಡಿಸಲು ಸೂಚಿಸಿದ ಅವರು ಉಪಹಾರಕ್ಕೆ ಮೊಟ್ಟೆ ಬೇಕು ಎಂದು ಕೇಳಿದರು. ಅತಿಥಿ ಗೃಹದ ಅಡಿಗೆ ಉಸ್ತುವಾರಿ ಕೆಲಸಗಾರ ‘ಸರ್’ ಈ ನಮ್ಮ ಅತಿಥಿ ಗೃಹದಲ್ಲಿ ನಾನ್‌ವೆಜ್ ಮಾಡುದಿಲ್ಲ. ವೆಜ್‌ದಲ್ಲಿ ಏನು ಬೇಕು ಹೇಳಿ ಸರ್ ನಾನು ಮಾಡಿಕೊಡುವೆ” ಎಂದು ನಮ್ರವಾಗಿ ಅರಸರಿಗೆ ಹೇಳಿದನು. ಹಾಗಾದರೆ ಚೆನ್ನಾಗಿ ಇಡ್ಲಿ ಮಾಡು ಎಂದು ಅರಸು ಹೇಳಿದರು. ದಣಿದಿದ್ದ ಅರಸು ರೂಂ ಬಾಗಿಲು ಹಾಕಿಕೊಂಡು ಮಲಗಿದರು. ಮರುದಿನ ಬೆಳಿಗ್ಗೆ ಉಪಹಾರ ಮಾಡಿ ಗಣ್ಯರ ಭೇಟಿಯ ಪುಸ್ತಕದಲ್ಲಿ ಕಾರ್ಖಾನೆಯ ಮತ್ತು ಕಾರ್ಮಿಕ ಸಂಘಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಇಂಗ್ಲೀಷ್‌ನಲ್ಲಿ ಬರೆದು, ಸಹಿ ಹಾಕಿ ಅರಸು ತೆರಳಿದರು. ಎರಡು ದಿನಗಳ ನಂತರ ಹುಬ್ಬಳ್ಳಿಯ ಪ್ರಮುಖ ವಾರಪತ್ರಿಕೆಯೊಂದರಲ್ಲಿ ಆಘಾತಕಾರಿ ವರದಿಯೊಂದು ಪ್ರಕಟವಾಯಿತು. ಅರಸು ಸಮೀರವಾಡಿಯ ಕಾರ್ಖಾನೆಯ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡಿದಾಗ ಅವರಿಗೆ ಸಮೀಪದ ಮಹಾಲಿಂಗಪೂರ ಗ್ರಾಮದಿಂದ ವೇಶ್ಯೆ ಒಬ್ಬಾಕೆಯನ್ನು ಕಾರ್ಖಾನೆಯ ಅಧಿಕಾರಿಯೊಬ್ಬರು ವಾಹನದಲ್ಲಿ ಕರೆತಂದು ಅರಸುಗೆ ಒಪ್ಪಿಸಿದರು. ಈ ವೇಶ್ಯೆಗೆ ಭಾರಿ ಡಿಮಾಂಡ್ ಬಂದಿದೆ. ಕಾರ್ಖಾನೆಯ ಅತಿಥಿ ಗೃಹದ ಗೋಡೆಗಳಿಗೆ ಬಾಯಿ ಇದ್ದರೆ ಅರಸು ರಾಸಲೀಲೆಯ ಸೊಗಸಾದ ಕಥೆ ಹೇಳುತ್ತಿತ್ತು ಇತ್ಯಾದಿ ಅಪಾದನೆಗಳಿದ್ದವು. ಅರಸು ಸಮೀರವಾಡಿಗೆ ಬಂದು ಹೋಗುವ ಇಡೀ ದಿನ ನಾನು ಅವರೊಂದಿಗೆ ಇದ್ದೆ. ಈ ಸುಳ್ಳು ವರದಿ ಬಂದ ಮೇಲೆ ನನಗೆ ಆ ಪತ್ರಿಕೆ ಬಗ್ಗೆ ಇದ್ದ ಗೌರವ ಕಡಿಮೆಯಾಯಿತು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ವಕೀಲರ ಮೂಲಕ ಆ ಪತ್ರಿಕೆಯ ಸಂಪಾದಕರಿಗೆ ಹಾಗೂ ಪ್ರಕಾಶಕಿಯಾಗಿದ್ದ ಅವರ ಪತ್ನಿಗೆ ನೋಟಿಸು ನೀಡಿದರು. ಪತ್ರಿಕೆಯ ಸಂಪಾದಕರು ಈ ಘಟನೆ ನಡೆದದ್ದು ಜಮಖಂಡಿಯಲ್ಲಿ, ಸಮೀರವಾಡಿಯಲ್ಲಿ ಅಲ್ಲ, ಅಧಿಕಾರಿಯೆಂದರೆ ಕಾರ್ಖಾನೆ ಅಧಿಕಾರಿ ಅಲ್ಲ, ಸರಕಾರಿ ಅಧಿಕಾರಿ ಎಂದು ಸ್ಟಷ್ಟೀಕರಣ ಪ್ರಕಟಿಸಿ ಕೈ ತೊಳೆದುಕೊಂಡರು. ಅರಸು ವಿರುದ್ಧ ಉಪ್ಪು ಖಾರ ಬೆರಸಿದ ಕಟ್ಟು ಕಥೆಗಳು ಹೇಗೆ ಹರಡುತ್ತಿದ್ದವು ಎಂಬುದಕ್ಕೆ ಇದೊಂದು ಉದಾಹರಣೆ. ಲಕ್ಷ್ಮೀಬಾಯಿ ಬಗ್ಗೆ ಗೌರವ : ಅರಸು ಅವರ ಆತ್ಮೀಯ ಸ್ನೇಹಿತ ಬೀಳಗಿ ತಾಲೂಕ ಯಡಹಳ್ಳಿ ಗ್ರಾಮದ ಆರ್. ಎಂ. ದೇಸಾಯಿ (ಮಾಜಿ ಶಾಸಕ & ಮಾಜಿ ರಾಜ್ಯಸಭೆ ಸದಸ್ಯ) ಅವರ ಮನೆಯಲ್ಲಿ ಅರಸು ಅವರ ಮೂವರು ಪುತ್ರಿಯರು ಶಾಲಾ ಬಿಡುವಿನ ದಿನಗಳಲ್ಲಿ ಬಂದು ವಾಸವಾಗುತ್ತಿದ್ದರು. ಆರ್. ಎಂ. ದೇಸಾಯಿ ತಾಯಿ ಶ್ರೀಮತಿ ಲಕ್ಷ್ಮೀಬಾಯಿ ಅರಸು ಪುತ್ರಿಯರಿಗೆ ಖಾಸಾ ಅಜ್ಜಿಯಂತೆ ಪ್ರೀತಿ ತೋರುತ್ತಿದ್ದರು. ಇದು ಅರಸು ಅಂತರAಗವನ್ನು ಬಹಳ ಕುಲುಕುತ್ತಿತ್ತು. ಲಕ್ಷ್ಮೀಬಾಯಿ ಅವರು 1973 ರಲ್ಲಿ ನಿಧನರಾದಾಗ ಅರಸು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂದು ತೀರ ಭಾವುಕರಾಗಿ ಅರಸು “ನನ್ನ ನಿಧನ ನಂತರ ನನ್ನ ಅಂತ್ಯಕ್ರಿಯೆ. ತಾಯಿ ಲಕ್ಷ್ಮೀಬಾಯಿ ಸಮಾಧಿ ಬಳಿ ನಡೆಯಬೇಕು ಎಂಬದು ನನ್ನ ಅಪೇಕ್ಷೆ. ಈ ಅವ್ವ ನನಗೆ ಹಾಗೂ ನನ್ನ ಮಕ್ಕಳಿಗೆ ತೋರಿದ ಪ್ರೀತಿ ಬಹಳ ದೊಡ್ಡದು” ಎಂದು ಹೇಳಿದರು. ಮುಂದೆ ಅರಸು 1982 ಜೂನ ಜೂನ 6 ರಂದು ನಿಧನರಾದರು. ಅವರ ಅಂತ್ಯಕ್ರಿಯೆ ಅವರ ಹುಟ್ಟೂರ ಕಲ್ಹಳ್ಳಿಯಲ್ಲಿ ನಡೆಯಿತು. ಆದರೆ ಅರಸು ತಮ್ಮ ಅಂತ್ಯಕ್ರಿಯೆ ಲಕ್ಷ್ಮೀಬಾಯಿ ಸಮಾಧಿ ಬಳಿ ನಡೆಯಲಿ ಎಂದು ಹೇಳಿದ ಮಾತನ್ನು ಅವರ ಕುಟುಂಬದವರು ಮರೆತಿರಲಿಲ್ಲ. ಅರಸರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿಯ ಮಣ್ಣನ್ನು ಅರಸರ ಕುಟುಂಬದ ಸದಸ್ಯರು ಒಂದು ಕಲಶದಲ್ಲಿ ತಂದು ಲಕ್ಷ್ಮೀಬಾಯಿ ಸಮಾಧಿ ಬಳಿ ಸ್ಥಾಪಿಸಿದ್ದಾರೆ. ಅರಸು ಹಾಗೂ ಲಕ್ಷ್ಮೀಬಾಯಿ ಅವರ ಸಮಾಧಿಯ ಪೂಜೆ ಇಲ್ಲಿ ನಡೆಯುತ್ತಿದೆ. ಅರಸು ಕೃತಜ್ಞತೆಗೆ ಇದು ಸಾಕ್ಷಿಯಾಗಿದೆ. ಹುಲ್ಲುಗಾವಲು : ಅರಸು ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಚಾಲನೆದೊರೆಯಿತು ಎಂಬ ಅಪಾದನೆ ತೀವ್ರಗೊಂಡಿತ್ತು. ಈ ಬಗ್ಗೆ ಕುತೂಲಹಕರ ಚರ್ಚೆಗಳು ನಡೆಯುತ್ತಿದ್ದವು. ಇದು ಅರಸು ಅವರಿಗೂ ಗೊತ್ತಿತ್ತು. ಇದಕ್ಕೆ ಅವರು ನೀಡುವ ಕಾರಣಗಳು ಕೂಡ ಗಮನಾರ್ಹವಾಗಿವೆ. ಕೆಲವು ಪತ್ರಕರ್ತರು ಅರಸು ಅವರನ್ನು ಅವರ ನಿವಾಸದಲ್ಲಿ ಭೆಟ್ಟಿಯಾಗಿ ಅನೌಪಚಾರಿಕವಾಗಿ ಮಾತನಾಡುವಾಗ ಒಬ್ಬ ಹಿರಿಯ ಪತ್ರಕರ್ತರು “ಬುದ್ಧಿ, ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ವಿಪರೀತ ಹೆಚ್ಚಿದೆ ಎಂದು ಜನ ಆಡುತ್ತಿದ್ದಾರೆ ” ಎಂದು ನೇರವಾಗಿ ಹೇಳಿದರು. ಅರಾಮ ಕುರ್ಚಿಯ ಮೇಲೆ ಮಲಗಿಕೊಂಡು ಮತನಾಡುತ್ತಿದ್ದ ಅರಸು ಒಮ್ಮೇಲೆ ಎದ್ದು ಕುಳಿತರು “ನನಗೆ ಬಡವರಿಗೆ, ಕೆಳವರ್ಗದವರಿಗೆ, ತುಳಿತಕ್ಕೆ ಒಳಗಾದವರಿಗೆ ಶಕ್ತಿತುಂಬುವ ಸಾಮಾಜಿಕ ಪರಿವರ್ತನೆ ತರುವ ಕನಸಿದೆ. ಇದನ್ನು ಸಾಕಾರಗೊಳಿಸಲು ಅಧಿಕಾರದಲ್ಲಿರಬೇಕು. ನಮ್ಮ ದೇಶದಲ್ಲಿ ಅಧಿಕಾರದಲ್ಲಿರಬೇಕಾದರೆ ಪರಂಪರೆಯ ಬಲಬೇಕು. ಇಲ್ಲವೆ ಬಿರ್ಲಾ – ಟಾಟಾ ಆಶೀರ್ವಾದಬೇಕು. ಜಾತಿಯ ಬೆಂಬಲವೂ ಬೇಕು. ಇದಾವುದೂ ಇಲ್ಲದ ನಾನು ಅಧಿಕಾರದಲ್ಲಿಬೇಕು, ಹೇಗೆ ನೀವೇ ಹೇಳಿ ? ನಾನು ಬರೀ ತತ್ವ ಭೋಧನೆ, ಆದರ್ಶದ ಪಾಠ ಹೇಳುತ್ತಾ ಕುಳಿತರೆ ಎಂ.ಎಲ್.ಎ ಗಳು ನನ್ನನ್ನು ಯಾವಾಗಲೋ ಒದ್ದು ಓಡಿಸುತ್ತಿದ್ದರು. ತಮಗೇನಾದರು ಲಾಭ ಬೇಕು ಎಂದು ಈ ಶಾಸಕರು ನನ್ನ ಹಿಂದೆ ಇದ್ದಾರೆ. ಇವರು ಬಹಳ ಹಸಿದ ಜನ. ದಿನಾಲೂ ಏನಾದರು ಸಿಗಬೇಕು ಅವರಿಗೆ. ಇದಕ್ಕೆಲ್ಲ ನನ್ನಲ್ಲಿ ಆಸ್ತಿ ದುಡ್ಡು ಇಲ್ಲ. ಯಾರಿಂದಲೋ ಕಿತ್ತು ಕೊಡಬೇಕು ಎಂದರು. ಗೇಣಿದಾರ ದೇವಪ್ಪ : ದೇವರಾಜ ಅರಸು 1972 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರ ಒಟ್ಟು ಭೂಮಿ ಆಸ್ತಿ 28 ಎಕರೆ ಇತ್ತು. ಅವರು 8 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಅವರು ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಾಗ ಅವರ ಆಸ್ತಿಯಲ್ಲಿ 4 ಎಕರೆ ಭೂಮಿ ಕಡಿಮೆಯಾಗಿತ್ತು. ಅರಸು ತಮ್ಮ ಹುಣಸೂರ ತಾಲ್ಲೂಕು ಕಲ್ಲಹಳ್ಳಿ ಗ್ರಾಮದಲ್ಲಿ ಹೊಂದಿದ್ದ 28 ಎಕರೆ ಭೂಮಿಯನ್ನು ಚಲುವಯ್ಯಾ ಎಂಬ ದಲಿತ ಕಾರ್ಮಿಕ ಸಾಗುವಳಿ ಮಾಡುತ್ತಿದ್ದ. ಅರಸು ತುಂಬ ಆಸಕ್ತಿ ವಹಿಸಿ ಈ ಭೂಮಿಯನ್ನು ತೆಂಗಿನ ತೋಟವಾಗಿ ರೂಪಿಸಿದ್ದರು. ಅವರು ಶಾಸಕರಾಗಿದ್ದಾಗ ಬಿಡುವು ಮಾಡಿಕೊಂಡು ಇಲ್ಲಿಗೆ ಬಂದು ಉಳುಮೆ ಮಾಡುತ್ತಿದ್ದರು. ಅವರು ನೆಟ್ಟ 40 ತೆಂಗಿನಮರಗಳು ಅವರ ನೆನಪಿನಲ್ಲಿ ಈಗಲೂ ನಳನಳಸುತ್ತಾ ನಿಂತಿವೆ. ಮುಖ್ಯಮ೦ತ್ರಿಯಾದ ಮೇಲೆ 1973-74 ರಲ್ಲಿ ಅವರು ಕ್ರಾಂತಿಕಾರಕ ಭೂ ಸುಧಾರಣೆ ಕಾನೂನು ಜಾರಿಗೆ ತಂದರು. ಹೆಚ್ಚುವರಿ ಭೂಮಿ ಉಳುವ ರೈತನಿಗೆ ಬಿಟ್ಟು ಕೊಡಬೇಕು ಎಂಬುದು ಅರಸು ತಂದ ಭೂ ಸುಧಾರಣೆ ಕಾನೂನಿನ ಮುಖ್ಯ ಕ್ರಾಂತಿಕಾರಕ ಅಂಶ. ಮುಖ್ಯಮ೦ತ್ರಿ ಅರಸು ತಮ್ಮ ಜಮೀನು ಸಾಗುವಳಿ ಮಾಡುತ್ತಿರುವ ರೈತ ಚಲುವಯ್ಯನಿಗೆ 4 ಎಕರೆ ಭೂಮಿ ಬಿಟ್ಟು ಕೊಡಲು ನಿರ್ಧರಿಸಿದರು. ಅರಸು ಹೊಂದಿದ್ದ 28 ಎಕರೆ ಭೂಮಿ ಗರಿಷ್ಠ ಮಿತಿಯ ವ್ಯಾಪ್ತಿಯಲ್ಲಿ ಬರುತ್ತಿರಲ್ಲಿಲ್ಲ. ಗೇಣಿದಾರನಿಗೆ ಬಿಟ್ಟುಕೊಡುವ ಅವಶ್ಯಕತೆಯೂ ಇರಲಿಲ್ಲ. ತಾವು ತಂದ ಮಹತ್ವದ ಭೂ ಸುಧಾರಣೆ ಕಾನೂನಿಗೆ ಬದ್ಧರಾಗಿ ತಾವೇ ಮುಂದಾಗಿ ಹೂಣಸೂರ ತಾಲೂಕ ಭೂ ನ್ಯಾಯ ಮಂಡಳಿ ಸದಸ್ಯರನ್ನು ಕರೆದು ಚಲವಯ್ಯ ನಿಂದ ಅರ್ಜಿ ಪಡೆಯಲು ಸೂಚಿಸಿದರು. ಅರಸು ಅವರೇ ಚಲುವಯ್ಯನನ್ನು ಕರೆಸಿ ಅರ್ಜಿ ಪಡೆದು ಭೂನ್ಯಾಯ ಮಂಡಳಿಗೆ ಸಲ್ಲಿಸಿದರು. ಭೂನ್ಯಾಯ ಮಂಡಳಿ ಚಲುವಯ್ಯನನ್ನು ಗೇಣೀದಾರ ಎಂದು ದಾಖಲಿಸಿಕೊಂಡು 4 ಎಕರೆ ಜಮೀನ ಮಂಜೂರ ಮಾಡಿದರು.

✍️ಮಲ್ಲಿಕಾರ್ಜುನ ಹೆಗ್ಗಳಗಿ

ನವೀನ ಹಳೆಯದು