ಮುಧೋಳ: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಾಗಲಕೋಟೆ -ಕುಡಚಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಕುಡಚಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು.
ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹೋರಾಟಕ್ಕೆ ಜಯವಾಗಲಿ ಎನ್ನುವುದರ ಜೊತೆಗೆ ಯೋಜನೆ ಪೂರ್ಣಗೊಳಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಬಾಗಲಕೋಟೆಯಿಂದ ಆರಂಭವಾಗಿರುವ ಪಾದಯಾತ್ರೆಯು ಕಲಾದಗಿ, ಲೋಕಾಪುರ, ಮುಧೋಳ, ಜಮಖಂಡಿ, ತೇರದಾಳ ಮಾರ್ಗವಾಗಿ ಕುಡಚಿ ತಲುಪಲಿದೆ.
2010ರಲ್ಲಿ ಆರಂಭವಾದ ಯೋಜನೆಯು 2017ರಲ್ಲಿ ಪೂರ್ಣವಾಗಬೇಕಿತ್ತು. ಉತ್ತರ ಕರ್ನಾಟಕದಲ್ಲಿ ಹಲವಾರು ಮುಖಂಡರು ಪ್ರಭಾವಶಾಲಿಗಳಾಗಿದ್ದರೂ, ಯೋಜನೆ ಪೂರ್ಣಗೊಳಿಸಲಾಗುತ್ತಿಲ್ಲ. ಬ್ರಿಟಿಷರು ನಿರ್ಮಿಸಿದ ರೈಲ್ವೆ ಹಳಿಗಳ ಮೇಲೆಯೇ ಇಂದಿಗೂ ಸಂಚರಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಟೀಕಿಸಿದರು.
ಈ ಮಾರ್ಗ ಮಂಜೂರಾತಿ ಮಾಡಿಸಿಕೊಳ್ಳಲು ಹೋರಾಟ ಮಾಡಬೇಕಾಯಿತು. ಈಗ ಯೋಜನೆ ಪೂರ್ಣಗೊಳಿಸುವಂತೆಯೂ ಹೋರಾಟ ಮಾಡಬೇಕಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಇಂದೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಾದರೆ, ಅಧಿಕಾರದಲ್ಲಿರಿ. ಇಲ್ಲದಿದ್ದರೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಜನರ ಸಹನಕಟ್ಟೆ ಒಡೆಯುವುದಕ್ಕೆ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವ್ಯಾಪಾರ ವೃದ್ಧಿ ಕಾರಣವಾಗಿರುವ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಯೋಜನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು. ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ರಾಜಕೀಯ ನಾಯಕರಿಗೆ ಕಣ್ಣು, ದಮ್ಮು ಇದ್ದರೆ ಕೂಡಲೇ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಯೋಜನೆ ಪೂರ್ಣಗೊಳಿಸರು ರಾಜಕೀಯ ನಾಯಕರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕಾಮಗಾರಿ ತೀವ್ರಗೊಳಿಸಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ, ರೈತ ಸಂಘದ ಉತ್ತರ ಕರ್ನಾಟಕ ಕಾರ್ಯದರ್ಶಿ ರಾಜು ಪಾಟೀಲ, ಉಪಾಧ್ಯಕ್ಷ ಮಲ್ಲು ಜಕಾತಿ, ರೈತ ಮುಖಂಡ ಸುಭಾಷ ಶಿರಬೂರ, ಗುಲಬಾ ಅಕ್ತಾರಸಾಬ್, ಮಂಜುಳಾ ಭೂಸಾರೆ, ರೇಣುಕಾ, ಜಯಶ್ರೀ ಉಳಬಾಳ, ಕಾಶೀಂಸಾಬ್ ಮುಲ್ಲಾ ಇದ್ದರು.