ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಕಿರು ಪರಿಚಯ


ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಘೋಷಿಸಿದೆ. ಯಾರಿದು ದ್ರೌಪದಿ ಮುರ್ಮು? ಬಿಜೆಪಿ ಇವರನ್ನೇ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಏಕೆ? ಇಲ್ಲಿದೆ ವಿವರ.

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಘೋಷಿಸಿದೆ. ಇದಕ್ಕೂ ಮೊದಲು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಹೆಸರು ಚಾಲ್ತಿಯಲ್ಲಿತ್ತು. ಮಂಗಳವಾರ ಸಂಜೆ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮುರ್ಮು ಅವರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಒಡಿಶಾ ಮೂಲದ 64 ವರ್ಷದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದಲ್ಲಿ, ಈ ಹುದ್ದೆಗೇರಿದ ದೇಶದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಳ್ಳಲಿದ್ದಾರೆ.

ಮುರ್ಮು ಅವರು ಒಡಿಶಾದಲ್ಲಿ ಬಿಜೆಪಿ ಬೆಂಬಲದಿಂದ ಬಿಜೆಡಿ ಸರಕಾರ ರಚಿಸಿದ್ದ ವೇಳೆ ಸಿಎಂ ನವೀನ್‌ ಪಟ್ನಾಯಕ್‌ ಸಂಪುಟದಲ್ಲಿ ಸಚಿವರಾಗಿದ್ದರು. ಕಾರ್ಪೊರೇಟರ್‌ ಆಗಿ ರಾಜಕೀಯ ಜೀವನಕ್ಕೆ ಕಾಲಿರಿಸಿದ ಮುರ್ಮು ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಜಾರ್ಖಂಡ್‌ ರಾಜ್ಯಪಾಲರಾಗಿದ್ದ ಅವರು 2013ರಲ್ಲಿ ಬಿಜೆಪಿಯ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ‍್ಯಕಾರಿ ಸದಸ್ಯೆಯಾಗಿದ್ದರು.

ಬಿಜೆಪಿಯ ಸಿದ್ಧಾಂತಗಳಿಗೆ ಸರಿಯಾಗಿ ಒಗ್ಗುವ ಮಹಿಳೆ ಎನಿಸಿಕೊಂಡಿರುವ ದ್ರೌಪದಿ, ಪ್ರಸಿದ್ಧ ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತಗಾರರೂ ಆಗಿದ್ದಾರೆ, ಇದನ್ನು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು.

ರಾಜಕೀಯ ವಿಶ್ಲೇಷಕರ ಪಕ್ರಾರ, ದ್ರೌಪದಿ ಮುರ್ಮುಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯ ಬೆಂಬಲವೂ ಇದೆ. ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಪಿ ಸಹಯೋಗದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದ ಸಮಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ. ಇದರಿಂದಾಗಿ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸೋಮವಾರವಷ್ಟೇ ತಮ್ಮ 64ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿ ಬಿಜೆಪಿ ಉಡುಗೊರೆ ನೀಡಿದೆ. ದ್ರೌಪದಿ ಮುರ್ಮು ಅವರು1958ರ ಜೂನ್ 20 ರಂದು ಜನಿಸಿದರು. 64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ.

ಬಿಜೆಪಿ ಮುರ್ಮು ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆರಿಸಿರುವ ಹಿಂದೆ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬುಡಕಟ್ಟು ಮತಗಳ ಹಂಚಿಕೆಯ ಮೇಲೆ ಪರಿಣಾಮ ಬೀರುವುದಲ್ಲದೆ ಒಡಿಶಾದಲ್ಲಿ ಬಿಜೆಪಿಯ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೇನಾದರೂ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಯಶಸ್ವಿಯಾದಲ್ಲಿ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೇರಿದ 2ನೇ ಮಹಿಳೆ, ಮೊದಲ ಒಡಿಶಾ ಹಾಗೂ ಬುಡಕಟ್ಟು ಪ್ರಜೆ ಎನಿಸಲಿದ್ದಾರೆ.

ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.
ನವೀನ ಹಳೆಯದು