1992ರ ದೇಶದ ಅತೀ ದೊಡ್ಡ ಹಗರಣ

 


ಭಾರತದ ಷೇರು ಮಾರ್ಕೆಟ್ ಇತಿಹಾಸದಲ್ಲೇ ಮರೆಯಲು ಸಾಧ್ಯವಿಲ್ಲದ ಆ ವ್ಯಕ್ತಿಯ ಬಗ್ಗೆ ಇಂದು ನಿಮಗೆ ಪರಿಚಯ ಮಾಡಿಸುವುದು ಈ ಲೇಖನದ ಉದ್ದೇಶ. ಗುಜರಾತಿ ಕುಟುಂಬದ ಕೆಳ ಮಧ್ಯಮ ವರ್ಗದಲ್ಲಿ 1954ರಲ್ಲಿ ಹುಟ್ಟಿದ ಆ ವ್ಯಕ್ತಿ ಹೆಸರು ಹರ್ಷದ್ ಶಾಂತಿಲಾಲ್ ಮೆಹ್ತಾ. ಆತನಿಗೆ ನಲವತ್ತು ವರ್ಷ ತುಂಬುವುದರೊಳಗೆ ಇಡೀ ಭಾರತದಲ್ಲಿ ಆತನ ಹೆಸರು ಓಡಾಡಿತ್ತು; ಆದರೆ ಬಹಳ ಕೆಟ್ಟ ಕಾರಣಗಳಿಗೆ.

ಯಾರು ಆತನನ್ನು ಷೇರು ಮಾರ್ಕೆಟ್ ನ ಅಮಿತಾಬ್ ಬಚ್ಚನ್ ಅಂತ ಕರೆಯುತ್ತಿದ್ದರೋ ಅಂಥವರು ಅಕ್ಷರಶಃ ಕಣ್ಣೀರುಡುವಂತೆ ಮಾಡಿದ ವ್ಯಕ್ತಿ ಆತ. ಕಾಗದದ ತುಂಡಿನಂಥದ್ದಕ್ಕೆ ಕೋಟಿಗಟ್ಟಲೆ ಹಣವನ್ನು ಬ್ಯಾಂಕ್ ಗಳಿಂದ ತೆಗೆದು, ಆ ನಗದನ್ನು ದೊಡ್ಡ ಮೊತ್ತದ ಷೇರು ಖರೀದಿಗೆ ವಿಪರೀತ ಪ್ರೀಮಿಯಂ ನೀಡಿದ್ದ. ಆತ ಎಲ್ಲ ವಲಯದ ಷೇರುಗಳನ್ನು ಖರೀದಿಸಿದ್ದ.

ಮೆಹ್ತಾನ ಬಾಲ್ಯ ಕಳೆದದದ್ದು ಮುಂಬೈನ ಖಂಡೀವಾಲಿಯಲ್ಲಿ. ಅಲ್ಲೊಂದು ಸಣ್ಣ ವ್ಯಾಪಾರ ಮಾಡಿಕೊಂಡಿದ್ದರು ಆತನ ತಂದೆ. ಆ ನಂತರ ವೈದ್ಯಕೀಯ ಕಾರಣಗಳಿಗಾಗಿ ಆ ಕುಟುಂಬ ಛತ್ತೀಸ್ ಗಢದ ರಾಯ್ ಪುರಕ್ಕೆ ಹೋಯಿತು. ಮೆಹ್ತಾನ ಶಾಲಾ ವಿದ್ಯಾಭ್ಯಾಸ ಆಗಿದ್ದು ಅಲ್ಲೇ. ಆತ ಅಂಥ ಬುದ್ಧಿವಂತ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಮತ್ತೆ ಮುಂಬೈಗೆ ವಾಪಸಾದ ಮೆಹ್ತಾ, ಬಿ.ಕಾಂ., ಪೂರ್ಣಗೊಳಿಸಿದ. ಪದವಿ ಮುಗಿಸಿದ ವ್ಯಕ್ತಿ ನಂತರದ ಎಂಟು ವರ್ಷ ಹೊಸೈರಿಯಿಂದ ವಜ್ರದ ಮಳಿಗೆ ತನಕ ನಾನಾ ಕಡೆ ಕೆಲಸ ಮಾಡಿದ.

200 ರುಪಾಯಿ ಷೇರು 9000 ರುಪಾಯಿಗೆ ಏರಿತ್ತು 

ಅದೊಂದು ಕ್ಷಣ ಬಂತು. ಹರ್ಷದ್ ಮೆಹ್ತಾ ಷೇರು ಮಾರ್ಕೆಟ್ ನಲ್ಲಿ ದೊಡ್ಡ ಹೆಸರು ಮಾಡಲು ಸಾಗಿದ ಮೊದಲ ಹೆಜ್ಜೆಯದು. ನ್ಯೂ ಇಂಡಿಯಾ ಅಶುರೆನ್ಸ್ ಕಂಪೆನಿಯಲ್ಲಿ ಸೇಲ್ಸ್ ಪರ್ಸನ್ ಆದ. ಅಲ್ಲಿ ಆತನಿಗೆ ಷೇರು ಮಾರ್ಕೆಟ್ ಕಡೆಗೆ ಸೆಳೆತ ಶುರುವಾಯಿತು. ಅದನ್ನು ನಿರ್ಲಕ್ಷ್ಯ ಮಾಡದೆ 1981ರಲ್ಲಿ ಬ್ರೋಕರೇಜ್ ಸಂಸ್ಥೆಯೊಂದಕ್ಕೆ ಸೇರ್ಪಡೆಯಾದ. ಅಲ್ಲಿಂದ ಒಂಬತ್ತು ವರ್ಷದಲ್ಲಿ, 1990ರ ಹೊತ್ತಿಗೆ ಮೆಹ್ತಾ ಹೆಸರು ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರಮುಖವಾಗಿ ನಿಂತಿತ್ತು. 1992ರ ಏಪ್ರಿಲ್ ನಲ್ಲಿ ಹಿರಿಯ ಪತ್ರಕರ್ತರಾದ ಸುಚೇತಾ ದಲಾಲ್ ಷೇರು ಮಾರ್ಕೆಟ್ ನ ಹಗರಣ ಬಯಲಿಗಿಟ್ಟರು. ಹರ್ಷದ್ ಮೆಹ್ತಾ ನೇತೃತ್ವದ ಸ್ಟಾಕ್ ಬ್ರೋಕರ್ ಗಳ ಗುಂಪು 3500 ಕೋಟಿ ರುಪಾಯಿ ಬ್ಯಾಂಕ್ ಹಣವನ್ನು ಬೇರೆ ಕಡೆಗೆ ತಿರುಗಿಸಿತ್ತು. ಆ ಹಣವನ್ನು ಆಯ್ದ ಷೇರುಗಳ ಮೇಲೆ ಹಾಕಿ, 4500 ಪಾಯಿಂಟ್ಸ್ ಏರಿಕೆ ಕಾಣಲು ಕಾರಣವಾಗಿತ್ತು. ಎಸಿಸಿ, ಅಪೋಲೋ ಟೈರ್ಸ್, ರಿಲಯನ್ಸ್, ಹೀರೋ ಹೋಂಡಾ, ಟಾಟಾ ಐರನ್ ಅಂಡ್ ಸ್ಟೀಲ್, ಬಿಪಿಎಲ್, ಸ್ಟರ್ಲೈಟ್ ಮತ್ತು ವಿಡಿಯೋಕಾನ್ ನಂಥ ಕೆಲವು ಕಂಪೆನಿಯ ಷೇರುಗಳು ಹರ್ಷದ್ ಮೆಹ್ತಾಗೆ ಅಚ್ಚುಮೆಚ್ಚಾಗಿದ್ದವು. ಒಂದು ಉದಾಹರಣೆ ನೋಡಿ: ಭಾರತದ ಪ್ರಮುಖ ಸಿಮೆಂಟ್ ವಲಯದ ಕಂಪೆನಿ ಎಸಿಸಿ. ಆ ಷೇರಿನ ಮೇಲೆ ವಿಪರೀತ ಹಣವನ್ನು ಹಾಕಿದ ಹರ್ಷದ್ ಮೆಹ್ತಾ. ಒಂದು ಷೇರಿಗೆ 200 ರುಪಾಯಿ ಇದ್ದ ಬೆಲೆ ಮೂರು ವರ್ಷದಲ್ಲಿ 9000 ರುಪಾಯಿಗೆ ಏರಿತು. ಲಾಭದ ಪ್ರಮಾಣ 4400 ಪರ್ಸೆಂಟ್.

'ಷೇರು ಮಾರ್ಕೆಟ್ ನ ಅಮಿತಾಬ್ ಬಚ್ಚನ್'

ಮೆಹ್ತಾ ಮುಟ್ಟಿದ್ದೆಲ್ಲ ಬಂಗಾರ ಆಗಲು ಶುರುವಾಯಿತು. ಸಾವಿರಾರು ಹೂಡಿಕೆದಾರರು ಅವನನ್ನು ಅನುಸರಿಸಲು ಆರಂಭಿಸಿದರು. ಆಗಲೇ ಮೆಹ್ತಾನನ್ನು 'ಷೇರು ಮಾರ್ಕೆಟ್ ನ ಅಮಿತಾಬ್ ಬಚ್ಚನ್' ಎನ್ನಲು ಆರಂಭಿಸಿದರು. ಮುಂಬೈನ ವೊರ್ಲಿಯಲ್ಲಿ ಸಮುದ್ರಕ್ಕೆ ಮುಖ ಮಾಡಿ ನಿಂತಿದ್ದ ಹನ್ನೆರಡು ಸಾವಿರ ಚದರಡಿಯ ಪೆಂಟ್ ಹೌಸ್ ಆತನಿಗೆ ಇತ್ತು. ಮಿನಿ ಗಾಲ್ಫ್ ಕೋರ್ಸ್, ಸ್ವಿಮ್ಮಿಂಗ್ ಪೂಲ್, ಎರಡು ಡಜನ್ ನಷ್ಟು ವಿಲಾಸಿ ಕಾರುಗಳು... ನೋಡನೋಡುತ್ತಲೇ ಕೆಳಮಧ್ಯಮವರ್ಗದ ವ್ಯಕ್ತಿಯೊಬ್ಬನಿಗೆ ಸೆಲೆಬ್ರಿಟಿ ಸ್ಥಾನಮಾನ ದಕ್ಕಿಹೋಯಿತು. ನಿಮಗೆ ಗೊತ್ತಿರಲಿ, ಷೇರು ಮಾರ್ಕೆಟ್ ನ ಹಗರಣ ಬಯಲಾಯಿತಲ್ಲಾ, ಅದಕ್ಕೆ ಕೆಲವೇ ವಾರಗಳ ಮುಂಚೆ 26 ಕೋಟಿ ರುಪಾಯಿ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿದ್ದ ಹರ್ಷದ್ ಮೆಹ್ತಾ. 1992ರ ಏಪ್ರಿಲ್ 23ನೇ ತಾರೀಕು ಪ್ರಮುಖ ದಿನಪತ್ರಿಕೆಯೊಂದರಲ್ಲಿ ವರದಿ ಬಂತು. ಮೆಹ್ತಾನ ಅಕ್ರಮ ವಿಧಾನಗಳನ್ನು ಇಂಚಿಂಚೂ ಬಿಡಿಸಿಡಲಾಗಿತ್ತು. ಬ್ಯಾಂಕಿಂಗ್ ವ್ಯವಸ್ಥೆಯ ಹುಳುಕುಗಳನ್ನು ಸಾದ್ಯಂತವಾಗಿ ತೆರೆದಿಟ್ಟಿದ್ದರು, ಜತೆಗೆ ಅದನ್ನು ಈ ಷೇರು ದಲ್ಲಾಳಿ ಅದು ಹೇಗೆ ಬಳಸಿಕೊಂಡಿದ್ದ ಎಂಬುದನ್ನು ಬಯಲು ಮಾಡಿದ್ದರು. ಆಗಷ್ಟೇ ಬಿಡುಗಡೆ ಆಗಿದ್ದ ನಲವತ್ತು ಲಕ್ಷಕ್ಕೂ ಹೆಚ್ಚು ಬೆಲೆಯ ಹೊಸ ಟೊಯೊಟಾ ಲೆಕ್ಸಸ್ ಕಾರಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿಗಳ ಬಳಿ ಇಳಿಯುತ್ತಿದ್ದ ಹರ್ಷದ್ ಮೆಹ್ತಾ ಬಗ್ಗೆ ಆ ಪತ್ರಕರ್ತೆಗೆ ಸುಳಿವು ಸಿಕ್ಕಿತ್ತು.

ಸಿಬಿಐನಿಂದ ಹರ್ಷದ್ ಮೆಹ್ತಾ ಬಂಧನ

ಆ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಗೊತ್ತಾಯಿತು; ತನ್ನ ಬಳಿ ಇರುವುದು ಮೆಹ್ತಾ ನೀಡಿದ, ನಯಾ ಪೈಸೆ ಕಿಮ್ಮತ್ತಿಲ್ಲದ ಕಾಗದದ ಚೂರು ಎಂಬ ಸಂಗತಿ. ಅಷ್ಟರಲ್ಲಿ ಆ ಬ್ಯಾಂಕ್ ಗೆ ಮೆಹ್ತಾ 500 ಕೋಟಿ ರುಪಾಯಿ ಸಾಲ ನೀಡಬೇಕಿತ್ತು. 1992ರ ಏಪ್ರಿಲ್ ಕೊನೆ ಹೊತ್ತಿಗೆ ಗೊತ್ತಾಯಿತು, ಸಾರ್ವಜನಿಕ ವಲಯದ ಮಾರುತಿ ಉದ್ಯೋಗ್ ನಿಂದ ಆತ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂಬ ವಿಚಾರ. ಅಲ್ಲಿ ಎರಡು ತಿಂಗಳ ಕಾಲ ಹರ್ಷದ್ ಮೆಹ್ತಾನಿಂದ ಆದ ಬ್ಯಾಂಕ್ ಹಾಗೂ ಪಿಎಸ್ ಯು ದುರುಪಯೋಗಗಳು ಬಯಲಾದವು. ಈ ವಿಚಾರದ ಬಗ್ಗೆ ತನಿಖೆ ನಡೆಸಲು ಸಂಸತ್ ನಲ್ಲಿ ಜಂಟಿ ಸದನ ಸಮಿತಿ ರಚಿಸಲಾಯಿತು. ಹೂಡಿಕೆದಾರರು ಸಿಕ್ಕಾಪಟ್ಟೆ ಹಣ ಕಳೆದುಕೊಂಡಿದ್ದರು. ಯಾವ ವೇಗದಲ್ಲಿ ಷೇರು ಮಾರುಕಟ್ಟೆ ಏರಿಕೆ ಕಂಡಿತ್ತೋ ಅದೇ ವೇಗದಲ್ಲಿ ಕುಸಿಯಿತು. ತಮ್ಮ ಹಣ ಹಿಂತಿರುಗಿಸುವಂತೆ ಬ್ಯಾಂಕ್ ಗಳು ಹರ್ಷದ್ ಮೆಹ್ತಾನ ಬೆನ್ನು ಬಿದ್ದವು. 1992ರಲ್ಲಿ ಸಿಬಿಐನಿಂದ ಹರ್ಷದ್ ಮೆಹ್ತಾನನ್ನು ಬಂಧಿಸಲಾಯಿತು. ಅವನ ಜತೆಗೆ ಸೋದರರಾದ ಅಶ್ವಿನ್ ಹಾಗೂ ಸುಧೀರ್ ನನ್ನು ಬಂಧಿಸಲಾಯಿತು. ಈ ಹಗರಣದಲ್ಲಿ ಅವರ ಪಾಲು ಕೂಡ ಇತ್ತು.

ಪ್ರಧಾನಮಂತ್ರಿಗೆ ಒಂದು ಕೋಟಿ ಲಂಚ ನೀಡಿದ್ದೀನಿ ಎಂದಿದ್ದ ಮೆಹ್ತಾ

ಸಿಬಿಐನಿಂದ ಹರ್ಷದ್ ಮೆಹ್ತಾ ಮೇಲೆ 72 ಕ್ರಿಮಿನಲ್ ಕೇಸುಗಳು ದಾಖಲಾದವು. ಅದರಲ್ಲಿ ಲಂಚ ನೀಡಿರುವುದು, ವಂಚನೆ, ಫೋರ್ಜರಿ, ಕ್ರಿಮಿನಲ್ ಪಿತೂರಿ ಸೇರಿ ಹಲವಾರು ಬಗೆಯ ಆರೋಪಗಳಿದ್ದವು. ಹರ್ಷದ್ ಮೆಹ್ತಾ ಸಾಲ ನೀಡಬೇಕಿದ್ದ ಬ್ಯಾಂಕ್ ಗಳಿಂದ ಆರುನೂರಕ್ಕೂ ಹೆಚ್ಚು ಸಿವಿಲ್ ದಾವೆಗಳನ್ನು ಹೂಡಲಾಯಿತು. ಇದರ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಿತು. ಅದನ್ನು ಜಾನಕಿರಾಮನ್ ಸಮಿತಿ ಎನ್ನಲಾಗುತ್ತದೆ. ಹರ್ಷದ್ ಮೆಹ್ತಾ ಮಾಡಿದ ವಂಚನೆಯ ವ್ಯಾಪ್ತಿ- ಹರಿವು, ಅದಕ್ಕೆ ಆತ ಬಳಸಿದ ಮಾರ್ಗವನ್ನು ಬಯಲು ಮಾಡಬೇಕಿತ್ತು ಸಮಿತಿ. ಸರ್ಕಾರವು ಆದೇಶ ಹೊರಡಿಸುವ ಮೂಲಕ ಇದರ ವಿಚಾರಣೆಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸಿತು. ಹರ್ಷದ್ ಮೆಹ್ತಾನ ಆಸ್ತಿ ಮಾರಿ, ಬ್ಯಾಂಕ್ ಗಳ ಹಾಗೂ ಆದಾಯ ತೆರಿಗೆ ಇಲಾಖೆಯ ಬಾಕಿ ತೀರಿಸಲು ಒಬ್ಬರು ಅಧಿಕಾರಿಯನ್ನು ಸಹ ಕೋರ್ಟ್ ನೇಮಿಸಿತು. ಮೂರು ತಿಂಗಳ ನಂತರ ಮೆಹ್ತಾ ಮತ್ತು ಆತನ ಸೋದರರಿಗೆ ಜಾಮೀನು ಸಿಕ್ಕಿತು. ಅದಾಗಿ ಕೆಲ ವಾರಗಳಿಗೆ ತನ್ನ ವಕೀಲರಾದ ರಾಮ್ ಜೇಠ್ಮಲಾನಿ ಅವರ ಜತೆಗಿರುವಾಗ ಸಾರ್ವಜನಿಕವಾಗಿಯೇ ಮೆಹ್ತಾ ಆರೋಪ ಮಾಡಿದ: ಕಾಂಗ್ರೆಸ್ ಗೆ ದೇಣಿಗೆಯಾಗಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ 1 ಕೋಟಿ ನೀಡಿದ್ದಾಗಿ ಹೇಳಿದ. ತಾನು ಯಾವುದರಲ್ಲಿ ಹಣ ತೆಗೆದುಕೊಂಡು ಹೋಗಿದ್ದೆ ಎಂಬ ಸೂಟ್ ಕೇಸ್ ನ ಕೂಡ ತೋರಿಸಿದ. ಆದರೆ ಇದನ್ನು ಪ್ರಧಾನಿ ನಿರಾಕರಿಸಿದರು. 'ಇದಕ್ಕೆ ಯಾವ ಗಟ್ಟಿಯಾದ ಆಧಾರವೂ ಇಲ್ಲ' ಎಂದು ಲಂಚದ ಆರೋಪವನ್ನು ಸಿಬಿಐ ತಳ್ಳಿಹಾಕಿತು.

47ನೇ ವಯಸ್ಸಿಗೆ ತಿಹಾರ್ ಜೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟ

ಜಾಮೀನಿನ ಮೇಲೆ ಹೊರಬಂದ ಹರ್ಷದ್ ಮೆಹ್ತಾಗೆ ಷೇರು ಮಾರುಕಟ್ಟೆ ಹೂಡಿಕೆದಾರರಿಂದ 'ಹೀರೋ' ರೀತಿಯ ಸ್ವಾಗತ ಸಿಕ್ಕಿತು. 1997ರ ಹೊತ್ತಿಗೆ ಸ್ವಂತ ವೆಬ್ ಸೈಟ್ ಆರಂಭಿಸಿದ. ಪತ್ರಿಕೆಗಳಲ್ಲಿ ಆತನ ಅಂಕಣ ಬರಲು ಆರಂಭಿಸಿತು. ಯಾವ ಷೇರು ಖರೀದಿಸಬೇಕು, ಯಾವುದು ಮಾರಬೇಕು ಎಂಬ ಸಲಹೆ ನೀಡಲು ಆರಂಭಿಸಿದ. ಸ್ಟರ್ಲೈಟ್, ವಿಡಿಯೋಕಾನ್ ಮತ್ತಿತರ ಕಂಪೆನಿಗಳಿಂದ ಹಣ ಪಡೆದು, ಆ ಕಂಪೆನಿಗಳಿಗೆ ಅನುಕೂಲ ಆಗುವಂತೆ ಆತ ಸಲಹೆ ನೀಡುತ್ತಾನೆ ಎಂಬ ಆರೋಪ ಬಂತು. ಸಿಬಿಐ, ಜೆಪಿಸಿ ಎಲ್ಲ ಪ್ರಯತ್ನದ ನಂತರವೂ ಮೆಹ್ತಾ ವಿರುದ್ಧ ಕ್ರಿಮಿನಲ್ ಸಾಕ್ಷ್ಯ ಒದಗಿಸಲು ಆಗಲಿಲ್ಲ. ಸಿಬಿಐ ಮಾಡಿದ್ದ 72 ಆರೋಪಗಳಲ್ಲಿ 34 ಅನ್ನು ಕೇಳಲು 1997ರ ಅಕ್ಟೋಬರ್ ಹೊತ್ತಿಗೆ ವಿಶೇಷ ಕೋರ್ಟ್ ಒಪ್ಪಿತು. ಮಾರುತಿ ಉದ್ಯೋಗ್ ಲಿಮಿಟೆಡ್ ನ ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 1999ರಲ್ಲಿ ಬಾಂಬೆ ಹೈ ಕೋರ್ಟ್ ಮೆಹ್ತಾ ಮತ್ತು ಇತರರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಆತ ಮಾರುತಿ ಉದ್ಯೋಗ್ ಶಿಕ್ಷೆ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಜಾಮೀನು ಪಡೆದ. 2001ರಲ್ಲಿ 90 ಬ್ಲ್ಯೂಚಿಪ್ ಕಂಪೆನಿಗಳ 250 ಕೋಟಿ ಮೌಲ್ಯದ ಷೇರುಗಳು ಕಾಣೆಯಾದ ಪ್ರಕರಣದಲ್ಲಿ ಜಾಮೀನು ಸಿಗಲಿಲ್ಲ. ಡಿಸೆಂಬರ್ 31, 2001ರಲ್ಲಿ ಹರ್ಷದ್ ಮೆಹ್ತಾ 47ನೇ ವಯಸ್ಸಿಗೆ ತಿಹಾರ್ ಜೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟ. ಆತ ಮೃತಪಟ್ಟಾಗ ಮಾರುತಿ ಉದ್ಯೋಗ್ ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿತ್ತು. ಅದರಲ್ಲಿ ಆತನ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತವಾಗಿತ್ತು. ಆತ ಮೃತಪಟ್ಟಿದ್ದರಿಂದ ಇನ್ನು ಉಳಿದೆಲ್ಲ ಕ್ರಿಮಿನಲ್ ಕೇಸ್ ಗಳು ರದ್ದಾದವು. ಆದರೆ ಸಿವಿಲ್ ದಾವೆಗಳಾದ ಹಣ ವಸೂಲಿ ಮಾಡಬೇಕಾದವು ಹಾಗೇ ಉಳಿದವು

ನವೀನ ಹಳೆಯದು