ನನಗೆ 70 ವರ್ಷ ವಯಸ್ಸಾಗಿದೆ- ಗೋವಿಂದ್ ಕಾರಜೋಳ ಕಣ್ಣೀರುಬೆಂಗಳೂರು: ನನಗೆ 70 ವರ್ಷ ವಯಸ್ಸಾಗಿದೆ. ನಾನು ಹಾಗೂ ನನ್ನ ಕುಟುಂಬದವರು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದೇವೆ. 600, 700 ಕಿ.ಮೀ.ಓಡಾಡಲು ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕಣ್ಣೀರು ಹಾಕಿದ್ದಾರೆ.

ಚುನಾವಣಾ ಪ್ರಚಾರ ಮಾಡುತ್ತಾರೆ, ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ತಮ್ಮ ಕ್ಷೇತ್ರದ ಜನರ ಬಳಿ ಹೋಗುವುದಿಲ್ಲ ಎಂಬುದರ ಕುರಿತು ಕಾರಜೋಳ ಪ್ರತಿಕ್ರಿಯಿಸಿದ್ದು, ನನಗೆ 70 ವರ್ಷ. ನಾನು ಇಷ್ಟು ವರ್ಷ ಯಾವ ರೀತಿ ಕೆಲಸ ಮಾಡಿದ್ದೇನೆ, ಕೊರೊನಾ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ತಿಳಿದಿದೆ. ನಾನು, ನನ್ನ ಕುಟುಂಬ ನಿರಂತರವಾಗಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ 600-700 ಕಿ.ಮೀ. ಹೋಗಲು ಆಗಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನನ್ನ ಪರಿಸ್ಥಿತಿ ಅರಿತು ಮುಖ್ಯಮಂತ್ರಿಗಳು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ರಾಜ್ಯ ಪ್ರವಾಸಕ್ಕೆ ಕಳುಹಿಸಿದ್ದಾರೆ. ನನ್ನ ಕುಟುಂಬದ ಸದಸ್ಯರು ಕೊರೊನಾದಿಂದ ಬಳಲುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಹೇಳುತಿದ್ದೇನೆ. ದಯಮಾಡಿ ಒಂದು ಘಟನೆಯನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಅಳೆಯಬೇಡಿ ಎಂದು ಕೇಳಿಕೊಂಡಿದ್ದಾರೆ.

ಶಿರಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ವಿಚಾರದ ಕುರಿತು ಮಾತನಾಡಿದ ಅವರು, ಅಸಹಾಯಕನಾಗಿ ಶಿರಾಗೆ ಹೋಗಿ ಬಂದಿದ್ದೇನೆ. ಬಂದು ಮುಖ ತೋರಿಸಿ ಎಂದು ಅಭ್ಯರ್ಥಿ ಮನವಿ ಮಾಡಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಬಂದೆ. ಅಸಹಾಯಕನಾಗಿ ಹೋಗಿ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇಡೀ ಸಮಸ್ಯೆಯನ್ನು ಕಂದಾಯ ಸಚಿವರು ನೋಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಸಹ ನಿನ್ನೆ ಸಿಎಂ ಜೊತೆಗೆ ಮಾತಾಡಿದ್ದಾರೆ. ಸಿಎಂ ಸಮಸ್ಯೆ ಗಮನಿಸುತ್ತಿದ್ದಾರೆ. ಅಧಿಕಾರಿಗಳು ಸಹ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆಗೆ ಜನರು ಸಹಕಾರ ಮಾಡಬೇಕು. ಸರ್ಕಾರ ಜನರ ಜೊತೆಗೆ ಇದೆ. ಎಲ್ಲ ರೀತಿಯ ಸಹಕಾರ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಹದ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಮನೆ ಕಳೆದುಕೊಂಡವರ ಸಮೀಕ್ಷೆ ಮಾಡಿ, ಮನೆ ಕೊಡಲು ಸೂಚನೆ ಕೊಟ್ಟಿದ್ದೇವೆ. ಮಳೆ ನಿಂತ ಮೇಲೂ ಮನೆ ಬೀಳುವ ಸಾಧ್ಯತೆ ಇದೆ. ಈ ಕುರಿತು ಎಲ್ಲ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನವೀನ ಹಳೆಯದು