ಬಾಗಲಕೋಟೆ(ಅಕ್ಟೋಬರ್ 03): ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಹೇಳತೀರದು. ಮೊದಲೇ ಕೊರೋನಾ ಮತ್ತು ಪ್ರವಾಹದಿಂದ ರೈತರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಈ ಮಧ್ಯೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಎಂಟು ತಿಂಗಳು ಕಳೆದರೂ ಇನ್ನೂ ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಅದರಲ್ಲೂ ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಉಳಿಸಿಕೊಂಡಿದ್ದು, ಇವರೆಲ್ಲಾ ರೈತರ ಹಿತಕಾಪಾಡುತ್ತಾರಾ? ಎಂಬ ಅನುಮಾನ ಮೂಡಿದೆ. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು. ಇದೀಗ ಕೋವಿಡ್ ಸಂಕಷ್ಟದಲ್ಲೂ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ 3ಸಾವಿರ ಕೋಟಿ ಬಾಕಿ ಬಿಲ್ ಕೊಡಬೇಕಿದೆ. ಮುಖ್ಯಮಂತ್ರಿಗಳೇ ಕಬ್ಬು ಬಾಕಿ ಬಿಲ್ ಕೊಡಿಸಿ ಎನ್ನುತ್ತಿದ್ದಾರೆ ಮುಧೋಳದ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಗಡುವಿಗಿಲ್ಲ ಬೆಲೆ ಬಾಗಲಕೋಟೆ ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆಗಳಿಂದ ಜೂನ್ ತಿಂಗಳಲ್ಲಿ 309.65ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದವು. ಜೂನ್ ತಿಂಗಳಾಂತ್ಯಕ್ಕೆ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಬಿಲ್
ಪಾವತಿಗೆ ಗಡುವು ಕೊಟ್ಟಿದ್ದರು. ಆದರೆ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ 118.41ಕೋಟಿ ಇನ್ನೂ ಬಾಕಿ ಬಿಲ್ ಉಳಿಸಿಕೊಂಡಿವೆ. ಅಕ್ಟೋಬರ್ 1ರಂದು ಬಾಗಲಕೋಟೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಘೋಷಿಸಿದ ಹೆಚ್ಚುವರಿ ಬಿಲ್ ಬಾಕಿ ರೈತರಿಗೆ ಪಾವತಿಸಲು ಜಿಲ್ಲಾಧಿಕಾರಿ ಅಕ್ಟೋಬರ್ 25 ರವರೆಗೆ ಗಡುವು ನೀಡಿದ್ದಾರೆ. ಈ ಹಿಂದೆಯೂ ಗಡುವು ಕೊಟ್ಟಿದ್ದರು. ಇದೀಗ ಮತ್ತೆ ಗಡುವು ಕೊಟ್ಟಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಸಂಪೂರ್ಣ ಬಿಲ್ ಪಾವತಿ ಮಾಡುತ್ತಿಲ್ಲ.
ಈಗ ಕಾರ್ಖಾನೆ ಆರಂಭವಾಗುವ ಹೊತ್ತಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮತ್ತೆ ನೆಪಮಾತ್ರಕ್ಕೆ ಗಡುವು ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಗಡುವಿಗೆ ಬೆಲೆ ಇಲ್ಲದಂತಾಗಿದೆ. ಬಾಕಿ ಬಿಲ್ ಕೊಡಿಸಿದೇ ಇಷ್ಟು ದಿನ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಇದೀಗ ಕಾರ್ಖಾನೆಯವರಿಗೆ ಗಡುವು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಕಾರ್ಖಾನೆಯವರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ರೈತರು ಜೀವನ ನಡೆಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ರೈತ ಮುಖಂಡ ಕಬ್ಬು ಬೆಳೆಗಾರ ಮುಧೋಳದ ಈರಪ್ಪ ಹಂಚಿನಾಳ.
ಇನ್ನು ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರೇ ರಾಜ್ಯದಲ್ಲಿ 3 ಸಾವಿರ ಕೋಟಿ ಕಬ್ಬಿನ ಬಿಲ್ ಬಾಕಿಯಿದೆ. ಬಹಳ ಮಾತನಾಡುತ್ತೀರಿ, ಮೊದಲು ಬಾಕಿ ಬಿಲ್ ಕೊಡಿಸಿ ಆಮೇಲೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳರು ರೈತರಿಗೆ ಬಾಕಿ ಬಿಲ್ ಕೊಡಿಸಲಿ, ಜೊತೆಗೆ 2020-21ನೇ ಸಾಲಿನ ಕಬ್ಬಿಗೆ ಬೆಲೆ ಘೋಷಿಸಲಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬ್ಳೆ ಆಗ್ರಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೆಷ್ಟು ಬಾಕಿಯಿದೆ?
ಬಾಗಲಕೋಟೆ ಜಿಲ್ಲೆಯಲ್ಲಿ 12ಸಕ್ಕರೆ ಕಾರ್ಖಾನೆಗಳಿವೆ. ಅದರಲ್ಲಿ ಪ್ರಭಾವಿ ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳೇ ಬಾಕಿ ಬಿಲ್ ಉಳಿಸಿಕೊಂಡಿವೆ. 2019-20ನೇ ಹಂಗಾಮಿಗೆ ಜಿಲ್ಲೆಯ 11 ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಎಫ್‍ಆರ್ ಪಿ ದರದ ಪ್ರಕಾರ ಸಂಪೂರ್ಣ ಪಾವತಿ ಮಾಡಿದ್ದಾರೆ. ಆದರೆ ಮುಧೋಳದ ನಿರಾಣಿ ಶುಗರ್ಸ್‍ನವರು ಮಾತ್ರ 4.18 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದು, ಒಂದು ವಾರದಲ್ಲಿ ಪಾವತಿಸುವಂತೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
2019-20ನೇ ಹಂಗಾಮಿಗೆ ಜಿಲ್ಲೆಯಲ್ಲಿನ 12 ಕಾರ್ಖಾನೆಯವರು ಘೋಷಿಸಿದ ಹೆಚ್ಚುವರಿ ಹಣದ ಪೈಕಿ ಗೋದಾವರಿ ಶುಗರ್ಸ್‍ನವರು ಮಾತ್ರ ಪೂರ್ತಿಯಾಗಿ ಪಾವತಿ ಮಾಡಿರುತ್ತಾರೆ. ಇನ್ನುಳಿದ 11 ಕಾರ್ಖಾನೆಯವರು ಪಾವತಿ ಮಾಡಿರುವುದಿಲ್ಲ. ಬಾಕಿ ಮೊತ್ತವನ್ನು ಅಕ್ಟೋಬರ್ 25 ರೊಳಗಾಗಿ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಪ್ರಸಕ್ತ ಹಂಗಾಮಿಗೆ ಕ್ರಷರ್ ಮಾಡುವಂತಿಲ್ಲವೆಂದು ಡಿಸಿ ಸೂಚನೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡ ಕಾರ್ಖಾನೆ ಪೈಕಿ ವಿಧಾನಪರಿಷತ್ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ, ಎಸ್ ಆರ್ ಪಾಟೀಲ್ ಮಾಲೀಕತ್ವದ ಬೀಳಗಿ ಶುಗರ್ಸ್ 17.69 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 10.46 ಕೋಟಿ, ಕಾಂಗ್ರೆಸ್ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ ಮಾಲೀಕತ್ವದ ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿ. 21.40 ಕೋಟಿ, ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಶುಗರ್ಸ್ 10.18 ಕೋಟಿ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಮಾಲೀಕತ್ವದ ಮುಧೋಳದ ನಿರಾಣಿ ಶುಗರ್ಸ್ 24.28 ಕೋಟಿ, ಬಿಜೆಪಿ ಮುಖಂಡ ಜಗದೀಶ್ ಗುಡಗುಂಟಿ ಮಾಲೀಕತ್ವದ ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ್ 18.10 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 5.32 ಕೋಟಿ, ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಮಾಲೀಕತ್ವದ ಹಿಪ್ಪರಗಿಯ ಶ್ರೀ ಸಾಯಿಪ್ರೀಯಾ ಶುಗರ್ಸ್ 10.97 ಕೋಟಿ ಸೇರಿ ಒಟ್ಟು 118.41 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದು.
ಮೊದಲು ಕಾರ್ಖಾನೆಯವರು ಬಾಕಿ ಬಿಲ್ ಪಾವತಿಸಲಿ, ಆಮೇಲೆ ಸಕ್ಕರೆ ಕಾರ್ಖಾನೆ ಆರಂಭಿಸಲಿ. ಈಗಾಗಲೇ ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಮುಧೋಳಕ್ಕೆ ಗ್ಯಾಂಗ್ ಗಳು ಬಂದಿವೆ. ಕಾರ್ಖಾನೆ ಮಾಲೀಕರು ಬಿಲ್ ಪಾವತಿ ಮಾಡಿ, ಇಲ್ಲದಿದ್ದರೆ ಕಾರ್ಖಾನೆ ಆರಂಭಿಸುವುದಕ್ಕೆ ಬಿಡುವುದಿಲ್ಲವೆಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರನ್ನ ಸಹಕಾರಿ ಸಕ್ಕರೆ ಖಾಸಗೀಕರಣಕ್ಕೆ ರೈತ ಮುಖಂಡರ ವಿರೋಧ
ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ತಿಮ್ಮಾಪುರ ಬಳಿಯಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಜ್ ಕೊಡಲು ಹೊರಟಿದ್ದಾರೆ. ಗೋವಿಂದ ಕಾರಜೋಳವರೇ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಸಮಸ್ಯೆ ಕೂಸು ಮಾಡಿದ್ದಾರೆ. 20ವರ್ಷಗಳಿಂದ ಕಾರಜೋಳವರ ಪಾರುಪತ್ಯದಲ್ಲಿ ಅಧ್ಯಕ್ಷರಾಗಿ ರಾಮಣ್ಣ ತಳೇವಾಡ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದೀಗ ಕಾರ್ಖಾನೆ ಆರ್ಥಿಕ ಆರೋಗ್ಯ ಕೆಟ್ಟಿದೆ ಎಂದು ಖಾಸಗಿಯವರಿಗೆ ಕೊಡಲು ಹೊರಟಿದ್ದಾರೆ. ರೈತರಿಂದ ಕಟ್ಟಿರುವ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಲು ನಾವು ಬಿಡುವುದಿಲ್ಲ. ಡಿಸಿಎಂ ಗೋವಿಂದ ಕಾರಜೋಳ ಸರ್ಕಾರದಿಂದ ಆರ್ಥಿಕ ನೆರವು ತಂದು ರೈತರ ಋಣ ತೀರಿಸಲಿ. ಬೆಳಗಾವಿಯಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ರೈತರ ಹಿತ ಕಾಪಾಡುತ್ತಿದೆ. ಅದೇಕೆ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಅನಾರೋಗ್ಯ ಉಂಟಾಗಿದೆ ಎಂದು ಮುಧೋಳದ ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ರೈತರಿಗೆ ಕಬ್ಬಿನ ಬಿಲ್ ಕೊಡದೇ ಸತಾಯಿಸುವ ಪರಿಪಾಠ ಸಾಮಾನ್ಯವಾಗಿಬಿಟ್ಟಿದೆ. ವರ್ಷವಿಡಿ ಕಬ್ಬು ಬೆಳೆದ ರೈತ ಸಾಲದಲ್ಲಿ ಸಾಯುವಂತಾಗಿದೆ. ಆದರೆ ಮಾಲೀಕರು ಮಾತ್ರ ಕೋಟಿ ಕೋಟಿ ಗಳಿಸುತ್ತಿದ್ದಾರೆ ಎನ್ನುತ್ತಿದ್ದಾರೆ ರೈತರು. ಕೋಟಿ ಗಳಿಸಿದರೂ ರೈತರಿಗೆ ಬಿಲ್ ಕೊಡದೇ ಸಬೂಬು ಹೇಳುವ ಮಾಲೀಕರು ಕಬ್ಬು ಬಾಕಿ ಬಿಲ್ ಕೊಟ್ಟು ರೈತರ ನೆರವಿಗೆ ಬರಬೇಕಿದೆ.