ದುಡ್ಡು ಹಾಕಿದ್ರೆ ಮಾತ್ರ ಕರೆಂಟ್, ಇಲ್ಲ ಅಂದ್ರೆ ಕಟ್! ಇಂಥದ್ದೊಂದು ವ್ಯವಸ್ಥೆ ಇದೀಗ ಬಂದಿದ್ದು ಉತ್ತರ ಪ್ರದೇಶದಲ್ಲಿ ಜಾರಿಯಾಗುತ್ತಿದೆ. ಈ ಮೂಲಕ ಕರೆಂಟ್ ಬಳಸಿ ಬಿಲ್ಲು ಕಟ್ಟದೆ ಸತಾಯಿಸುತ್ತಿರುವ ಜನರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.
ಮೊಬೈಲ್‌ಗಳಿಗೆ ಪ್ರೀಪೇಯ್ಡ್ ಕರೆನ್ಸಿ ಹಾಕುವ ರೀತಿಯೇ ಇಲ್ಲೂ ಕರೆಂಟ್ ಪೂರೈಕೆಯಾಗಬೇಕಾದರೆ ಮೊದಲು ದುಡ್ಡ ಕಟ್ಟಬೇಕಾಗುತ್ತದೆ. ಈ ಹೊಸ ವ್ಯವಸ್ಥೆಯನ್ನು ಉತ್ತರ ಪ್ರದೇಶ ವಿದ್ಯುತ್ ಸಚಿವ ಶ್ರೀಕಾಂತ್ ಶರ್ಮಾ ಅವರು ಮೊದಲು ತಮ್ಮ ಮನೆಯಲ್ಲೇ ಅಳವಡಿಸಿಕೊಂಡಿದ್ದಾರೆ.
ತಮ್ಮ ಅಧಿಕೃತ ನಿವಾಸಕ್ಕೆ 25 ಕೆ.ವಿ. ಸಾಮರ್ಥ್ಯದ ಕರೆಂಟ್ ಮೀಟರ್ ಅಳವಡಿಸಿಕೊಂಡಿದ್ದು, ಇದರಲ್ಲಿ ಕರೆನ್ಸಿ ಬ್ಯಾಲೆನ್ಸ್ ಮುಗಿದ ಕೂಡಲೇ ಕರೆಂಟ್ ಕಡಿತಗೊಳ್ಳಲಿದೆ. ಇದೇ ರೀತಿ ಸರಕಾರದ ಇತರ ಸಚಿವರು, ಅಧಿಕಾರಿ ವರ್ಗ ಪ್ರೀಪೇಯ್ಡ್ ಮೀಟರ್ ಅನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಅ.29ರಿಂದ ರಾಜ್ಯದಲ್ಲಿ ಪ್ರೀಪೇಯ್ಡ್ ಮೀಟರ್ ಅಳವಡಿಸುವ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಅವರ ಸರಕಾರ ಕೈಗೊಂಡಿದೆ.
ಸುಮಾರು 1 ಲಕ್ಷ ಮೀಟರ್‌ಗಳನ್ನು ಅದು ಖರೀದಿಸಲಿದ್ದು, ಹಂತ ಹಂತವಾಗಿ ಅಳವಡಿಸಲು ಉದ್ದೇಶಿಸಿದೆ. ಪ್ರೀಪೇಯ್ಡ್ ಮೀಟರ್ ಅಳವಡಿಸುವುದರಿಂದ ವಿದ್ಯುತ್ ಖರ್ಚು ಮತ್ತು ಬಿಲ್ ಕಟ್ಟದೇ ಇರುವ ಅಭ್ಯಾಸಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಸರಕಾರಕ್ಕೆ ವಿದ್ಯುತ್ ಬಿಲ್ ಬಾಕಿ 13 ಸಾವಿರ ಕೋಟಿ ರೂ. ಇದ್ದು, ಹಣ ವಸೂಲು ಮಾಡಲಾಗದೆ ಹೆಣಗಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮೀಟರ್ ಬಳಸಲಾಗುತ್ತಿದ್ದು, ಆರಂಭದಲ್ಲಿ ಸರಕಾರಿ ಅಧಿಕಾರಿಗಳು, ಸರಕಾರಿ ಕಚೇರಿಗಳು, ಸಚಿವರು, ಶಾಸಕರ ಮನೆಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ