ಮುಧೋಳ: ಕೈತುಂಬ ಹಣ ತರುವ ಖಡಕನಾಥ ಕೋಳಿ


ಮುಧೋಳ: ಕೃಷಿ ಕಾರ್ಯದೊಂದಿಗೆ ಉಪಕಸುಬುಗಳ ಪ್ರಯೋಗದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಳ್ಳುವ ತಾಲ್ಲೂಕಿನ ಮಂಟೂರಿನ ಬಸವರಾಜ ನಾಯಕ ಈ ಬಾರಿ ಖಡಕನಾಥ ತಳಿಯ ಕೋಳಿ ಸಾಕಾಣಿಕೆ ಮಾಡಿ ಕೈ ತುಂಬಾ ಸಂ‍ಪಾದನೆ ಮಾಡುತ್ತಿದ್ದಾರೆ. ಒಂದಷ್ಟು ರಿಸ್ಕ್ ತೆಗೆದುಕೊಂಡರೆ ಸಂತೃಪ್ತವಾಗಿ ಬದುಕಬಹುದು ಎಂಬುದು ನಾಯಕರ ಯಶಸ್ಸಿನ ಹಿಂದಿನ ಮಂತ್ರ.

ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದಿಂದ ₹3.80 ಲಕ್ಷ ಪಾವತಿಸಿ 1300 ಖಡಕನಾಥ ಕೋಳಿ ಹಾಗೂ 500 ಹುಂಜ ಖರೀದಿಸಿ ತಂದಿರುವ ಬಸವರಾಜ ನಾಯಕ, ಸಾಕಾಣಿಕೆ ಆರಂಭಿಸಿದ್ದಾರೆ.

ಕಡಿಮೆ ಕೊಬ್ಬಿನ ಕೋಳಿ!..
‘ಖಡಕನಾಥ ಮೂಲತಃ ಕಾಡು ಕೋಳಿ. ಅದರ ಮಾಂಸ ಹಾಗೂ ಮೊಟ್ಟೆ ಒಂದಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಬೇರೆ ಕೋಳಿಗಳ ಮಾಂಸಕ್ಕೆ ಹೋಲಿಸಿದರೆ ಇದರಲ್ಲಿ ಕೊಬ್ಬಿನಂಶ ಕಡಿಮೆ ಇದೆ ಎಂಬುದನ್ನು ಮೈಸೂರಿನ ಕೇಂದ್ರೀಯ ಆಹಾರ ಸಂಶೋಂಧನಾ ಸಂಸ್ಥೆ ಖಚಿತ ಪಡಿಸಿದೆ. ಕಪ್ಪು ಬಣ್ಣದ ಕೋಳಿಯ ಮೊಟ್ಟೆ ಹಳದಿ ಬಣ್ಣದ್ದಾಗಿದ್ದು, ನಾಟಿ ತಳಿಯಂತೆ ಕಾಣುತ್ತದೆ. ಹೀಗಾಗಿ ಅದಕ್ಕೆ ಅಪಾರ ಬೇಡಿಕೆ ಇದೆ‘ ಎಂದು ಬಸವರಾಜ ನಾಯಕ ಹೇಳುತ್ತಾರೆ.

ನಿರ್ವಹಣಾ ವೆಚ್ಚ ಕಡಿಮೆ:
ಖಡಕನಾಥ ಕೋಳಿಯ ತೂಕ ಹೆಚ್ಚಿಸುವ ಪ್ರಮೇಯ ಇಲ್ಲದಿರುವುದರಿಂದ ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಕೊಡುತ್ತೇವೆ. ಬೆಳಿಗ್ಗೆ ಸಿದ್ಧ ಪಶುಆಹಾರ, ಸಂಜೆ ತರಕಾರಿ ತೊಪ್ಪಲು ಹಾಕುತ್ತೇವೆ. ಆಡು ತಿನ್ನುವ ಎಲ್ಲ ತೊಪ್ಪಲನ್ನು ಈ ಕೋಳಿ ತಿನ್ನುವುದರಿಂದ ನಿರ್ವಹಣಾ ವೆಚ್ಚವೂ ಕಡಿಮೆ. ರೋಗಬಾಧೆಯೂ ಅಷ್ಟಾಗಿ ಇರುವುದಿಲ್ಲ‘ ಎಂದು ಹೇಳುತ್ತಾರೆ.

ವರ್ಷದಲ್ಲಿ 10 ತಿಂಗಳು ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ ಆರನೇ ತಿಂಗಳಿಂದ ಮೊಟ್ಟೆ ಇಡಲು ಆರಂಭಿಸುತ್ತವೆ. ಮೂರು ವರ್ಷಗಳವರೆಗೆ ಇಡುತ್ತವೆ. ಈಗ ಎರಡು ತಿಂಗಳಿಂದ ಬಸವರಾಜ ನಾಯಕ ಮೊಟ್ಟೆ ಮಾರಾಟ ಆರಂಭಿಸಿದ್ದಾರೆ. 10 ಸಾವಿರ ಮೊಟ್ಟೆಗಳನ್ನು ಒಂದಕ್ಕೆ ₹ 15 ರಂತೆ ತೋಟಕ್ಕೆ ಬಂದು ಕೊಂಡೊಯ್ಯಲು ಬೆಳಗಾವಿಯ ಯರಚ್ಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಮುಧೋಳ ನಗರ ಹಾಗೂ ಆಸುಪಾಸಿನ ಹಳ್ಳಿಗಳವರುರ ತೋಟಕ್ಕೆ ₹ 20ರ ದರದಲ್ಲಿ ಮೊಟ್ಟೆ ಕೊಂಡುಕೊಳ್ಳುತ್ತಾರೆ. ಅಪ್ಪ ಚಂದ್ರಶೇಖರ ನಾಯಕ, ಸಹೋದರ ಹಣಮಂತ ಬೆಂಬಲಕ್ಕೆ ನಿಂತಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ.

ನಳನಳಿಸುತ್ತಿದೆ ಚೆಂಡು ಹೂ..
ಬಸವರಾಜ ನಾಯಕ ತಮ್ಮ 16 ಎಕರೆ ತೋಟದಲ್ಲಿ ಮೂರು ಎಕರೆ ಚೆಂಡು ಹೂ ಬೆಳೆದಿದ್ದಾರೆ. ಅದನ್ನು ತಿಪಟೂರಿನ ಎವಿಟಿ ನ್ಯಾಚುರಲ್ ಪ್ರೊಡಕ್ಟ್ ಕಂಪನಿ ಪ್ರತಿ ಕೆ.ಜಿ.ಗೆ ₹10 ದರದಲ್ಲಿ ಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಒಂದು ಎಕರೆಯಲ್ಲಿ  ಈಗಾಗಲೇ 10 ಟನ್ ಹೂವು ಬಂದಿದ್ದು, ಇನ್ನೂ ಎರಡು ಟನ್ ನಿರೀಕ್ಷೆಯಲ್ಲಿದ್ದಾರೆ. ಇದು ನಾಲ್ಕು ತಿಂಗಳ ಬೆಳೆಯಾಗಿದ್ದು ಮೂರು ತಿಂಗಳಿಗೆ ಕಟಾವಿಗೆ ಬರುತ್ತದೆ.

 ಬಸವರಾಜ ನಾಯಕ ಸಂಪರ್ಕ ಸಂಖ್ಯೆ: 9980081965.
ನವೀನ ಹಳೆಯದು