ಎರಡು ತಿಂಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಫೋಟೋಗ್ರಾಫರ್ಸ್ ದಿನಾಚರಣೆ ವೇಳೆ ಡಿಸಿ ಆರ್. ರಾಮಚಂದ್ರನ್ ಅವರು ಈ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ನ ತಜ್ಞರು ಬಾರ್ ಹೆಡೆಡ್ ಗೂಜ್ ಪಕ್ಷಿಯ ಸಂಚಾರದ ಅಧ್ಯಯನ ನಡೆಸುತ್ತಿದ್ದರು. ಆಗ ಪಕ್ಷಿಗೆ ರೆಡಿಯೋ ತರಂಗಾಂತರ ಚಿಪ್ ಅಳವಡಿಸಿದ್ದರು. ಆ ಪಕ್ಷಿ ಚೀನಾದಿಂದ ಹಾರುತ್ತಾ ಭಾರತದ ವಿವಿಧೆಡೆ ಸಂಚರಿಸಿತ್ತು. ಎರಡು ತಿಂಗಳ ಹಿಂದೆ ಆಲಮಟ್ಟಿ ಹಿನ್ನೀರು ವ್ಯಾಪ್ತಿಯ ಕಿರಸೂರು ಗ್ರಾಮದ ಬಳಿ ಪಕ್ಷಿ ಬಂದಿತ್ತು. ಆಗ ಪಕ್ಷಿಗೆ ಅಳವಡಿಸಿದ್ದ ರೆಡಿಯೋ ತರಂಗಾಂತರ ಚಿಪ್ ಕಳಚಿ ಬಿದ್ದಿದೆ.
ಚಿಪ್ ಕಳಚಿದ ಹಿನ್ನೆಲೆಯಲ್ಲಿ ಪಕ್ಷಿ ಚೀನಾ ದೇಶದ ಸಂಪರ್ಕ ಕಳೆದುಕೊಂಡಿತ್ತು. ಆದ್ದರಿಂದ ಚೀನಾ ದೇಶ ರಾಯಭಾರಿ ಕಚೇರಿಯವರು ಭಾರತದ ರಾಯಭಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪಕ್ಷಿ ಮತ್ತು ಟ್ಯಾಗ್ ಬಿದ್ದಿರುವ ಸ್ಥಳ ಬಗ್ಗೆ ಮಾಹಿತಿ ನೀಡುವಂತೆ ಕೋರಿಕೊಂಡಿದ್ದರು. ರಾಯಭಾರಿ ಕಚೇರಿ ಸೂಚನೆ ಮೇರೆಗೆ ಜಿಲ್ಲಾಡಳಿತ ಬಾರ್ ಹೆಡ್ಡೆಡ್ ಗೂಜ್ ಪಕ್ಷಿ ಮತ್ತು ರೆಡಿಯೋ ತರಂಗಾಂತರ ಚಿಪ್ಪು ಟ್ಯಾಗ್‍ನ ಜಾಡು ಹಿಡಿದು ಹೊರಟಿತ್ತು. ಆಗ ಟ್ಯಾಗ್ ಪತ್ತೆಯಾಗಿದೆ, ಆದರೆ ಪಕ್ಷಿ ನಾಪತ್ತೆಯಾಗಿದೆ.
ಪತ್ತೆಯಾದ ರೆಡಿಯೋ ತರಂಗಾಂತರ ಚಿಪ್ ಅನ್ನು ಪರಿಶೀಲಿಸಿ ಜಿಲ್ಲಾಡಳಿತ ರಾಯಭಾರಿ ಕಚೇರಿಗೆ ಕಳುಹಿಸಿದೆ ಎಂದು ಡಿಸಿ ಮಾಹಿತಿ ತಿಳಿಸಿದ್ದಾರೆ.